ಬೆಂಗಳೂರು: ಬರಗಾಲದ ಪರಿಹಾರದ ವಿಚಾರದಲ್ಲಿ ಕರ್ನಾಟಕದ ಕಾಂಗ್ರೆಸ್ ಸರಕಾರ ಇನ್ನೂ ಕುಂಭಕರ್ಣ ನಿದ್ರೆಯಲ್ಲಿದೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಟೀಕಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಣ ಬಂದು ಕ್ಷಣದಲ್ಲಿ ರೈತರಿಗೆ ನೀಡುವುದಾಗಿ ಹೇಳಿದ್ದರು. ಕ್ಷಣಗಳು ಹೋಗಿ ಗಂಟೆಗಳಾಗಿ, ಈಗ ದಿನಗಳೇ ಕಳೆದಿವೆ. ರೈತರು ಈ ಬಿಸಿಲಿನ ಬೇಗೆಯಿಂದ ಹಾಹಾಕಾರ ಪಡುತ್ತಿದ್ದಾರೆ. ರಾಜ್ಯ ಸರಕಾರವು ಬೇರೆ ರಾಜಕಾರಣ ಮಾಡುತ್ತಿದೆ. ರೈತರ ಕಷ್ಟಕ್ಕೆ ಸ್ಪಂದಿಸದ ಕಟುಕ- ಕರುಣೆ ಇಲ್ಲದ ರಾಜ್ಯ ಸರಕಾರ ಇದು ಎಂದು ಆರೋಪಿಸಿದರು.
ಮೇವು ಇಲ್ಲದೆ ದನಕರುಗಳನ್ನು ಕಟುಕರಿಗೆ ಮಾರಾಟ ಮಾಡುವ ಸ್ಥಿತಿಗೆ ರೈತರು ಬರುತ್ತಿರುವುದು ಬೇಸರದ ಸಂಗತಿ. ಈ ಸರಕಾರ ಒಂಥರ ಬೂಟಾಟಿಕೆ ಮಾಡುತ್ತಿದೆ. ಜಾಹೀರಾತುಗಳನ್ನು ಕೊಡುತ್ತಿದೆ. ಆದರೆ, ರೈತರ ಸಂಕಷ್ಟಕ್ಕೆ ಸ್ಪಂದಿಸುವ ಗಂಭೀರತೆ ಎಲ್ಲೂ ಕಾಣಿಸುತ್ತಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಕಳೆದ ಮುಂಗಾರು, ಹಿಂಗಾರು ಮಳೆ ಕೈಕೊಟ್ಟಿತ್ತು. ಇಂಥ ಸಂದರ್ಭದಲ್ಲಿ ಉರಿಯುವ ಮನೆಯಲ್ಲಿ ಗಳ ಹಿಡಿಯುವ ಕೆಲಸವನ್ನು ಸಿದ್ದರಾಮಯ್ಯನವರು ಮಾಡುತ್ತಿದ್ದಾರೆ. ಇವರ ಯೋಗ್ಯತೆಗೆ ಇದುವರೆಗೆ ಒಂದು ನಯಾಪೈಸೆಯನ್ನೂ ಬಿಡುಗಡೆ ಮಾಡಿಲ್ಲ. ಬರಪೀಡಿತ ಪ್ರದೇಶ ಘೋಷಣೆಯನ್ನೂ ವಿಳಂಬ ಮಾಡುತ್ತ ಹೋಗಿದ್ದರು. ಮೂರೂವರೆ ತಿಂಗಳ ಬಳಿಕ ಬರ ಪರಿಹಾರ ಘೋಷಿಸಿದ್ದಾರೆ ಎಂದು ದೂರಿದರು.
ಬಂಡವಾಳ ಇಲ್ಲದ ಬಡಾಯಿಗಳು..
ಈಗ ಕೇಂದ್ರ ಸರಕಾರ ಹಣ ಬಿಡುಗಡೆ ಮಾಡಿದರೂ ಕೂಡ ರೈತರಿಗೆ ಕೊಟ್ಟಿಲ್ಲ. ಖಜಾನೆ ಬರಿದಾಗಿದೆ. ಈ ಹಣವನ್ನು ಗ್ಯಾರಂಟಿಗೆ ಬಳಸಿಕೊಳ್ಳುವಂತಿದೆ. 2 ಸಾವಿರವನ್ನು 2-3 ತಿಂಗಳಿನಿಂದ ಕೊಟ್ಟಿಲ್ಲ. ಒಂದೇ ಸಾರಿ ಬಿಡುಗಡೆ ಮಾಡಿ ರಾಜಕಾರಣ ಮಾಡುವ ದೃಷ್ಟಿಯಿಂದ ಈ ಹಣವನ್ನು ಉಪಯೋಗಿಸುವ ಅನಿವಾರ್ಯತೆ ಕಾಂಗ್ರೆಸ್ಸಿಗೆ ಇದೆ. ಇವರೊಂಥರ ಬಂಡವಾಳ ಇಲ್ಲದ ಬಡಾಯಿಗಳು ಎಂದು ಆರ್. ಅಶೋಕ್ ಅವರು ಟೀಕಿಸಿದರು.
ರಾಜ್ಯದಲ್ಲಿ ಸಾಲ ಮಾಡಿ ಬೆಳೆ ಕೈಸೇರದೆ 900ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ, ಸರಕಾರ ತನ್ನ ಪರಿಹಾರ ನೀಡುವ ಜವಾಬ್ದಾರಿಯನ್ನು ನಿಭಾಯಿಸಿಲ್ಲ ಎಂದು ಆಕ್ಷೇಪಿಸಿದರು.
ಬರ ಪರಿಹಾರದ ಮೊತ್ತ ಕೇಳಿದರೆ, ಕಾಂಗ್ರೆಸ್ ಸಚಿವರು ಮತ್ತು ಶಾಸಕರು ‘ನಿಮ್ಮ ಹೆಂಗಸ್ರಿಗೆ 2 ಸಾವಿರ ಕೊಟ್ಟಿಲ್ವ’ ಎಂದು ಧಮ್ಕಿ ಹಾಕುತ್ತಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಎಷ್ಟು ದಿನ ಗ್ಯಾರಂಟಿ ಹೆಸರಿನಲ್ಲಿ ರೈತರು, ಜನರಿಗೆ ಮೋಸ ಮಾಡುತ್ತೀರಿ ಎಂದು ಅವರು ಪ್ರಶ್ನಿಸಿದರು. ಕೇಂದ್ರದ ಹಣವನ್ನು ಸದ್ಬಳಕೆ ಮಾಡುವಂತೆ ಒತ್ತಾಯಿಸಿ ನಾನು ಇವತ್ತೇ ಸಿದ್ದರಾಮಯ್ಯನವರಿಗೆ ಒಂದು ಪತ್ರ ಬರೆಯುತ್ತೇನೆ ಎಂದು ಅವರು ಹೇಳಿದರು.
ತಕ್ಷಣವೇ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಟಾಸ್ಕ್ ಫೋರ್ಸ್ ರಚಿಸಬೇಕು. ಶಾಸಕರ ನೇತೃತ್ವದ ಟಾಸ್ಕ್ ಫೋರ್ಸ್ ಕೂಡಲೇ ಕಾರ್ಯಪ್ರವೃತ್ತ ಆಗುವಂತೆ ಆದೇಶ ಹೊರಡಿಸಿ; ರಾಜ್ಯಾದ್ಯಂತ ಮೇವಿನ ಕೊರತೆ ಕಾಡುತ್ತಿದೆ. ಹುಲ್ಲು ಬೆಳೆಯಲೂ ಸಾಧ್ಯವಾಗುತ್ತಿಲ್ಲ. ಹಲವಾರು ಬೋರ್‍ವೆಲ್‍ಗಳು ಒಣಗಿ ಹೋಗಿವೆ. ಕರೆಂಟಿಲ್ಲದೆ ಕೊಳವೆಬಾವಿಯಿಂದ ನೀರೆತ್ತಲಾಗದ ದುಸ್ಥಿತಿ ಇದೆ. ಈ ಗಂಭೀರತೆಯನ್ನು ರಾಜ್ಯ ಸರಕಾರ ಅರ್ಥ ಮಾಡಿಕೊಳ್ಳಬೇಕು. ಗೋಶಾಲೆಗಳನ್ನು ಕೂಡಲೇ ತೆರೆಯಿರಿ ಎಂದು ಅವರು ಆಗ್ರಹಿಸಿದರು.
ಎಷ್ಟು ಗೋಶಾಲೆ ತೆರೆಯಲಾಗಿದೆ ಎಂದು ರಾಜ್ಯದ ಜನತೆಗೆ ಲೆಕ್ಕ ಕೊಡಿ ಎಂದು ಒತ್ತಾಯಿಸಿದರು.
ಶಾಸಕರಾದ ಸಿ.ಕೆ. ರಾಮಮೂರ್ತಿ, ರವಿ ಸುಬ್ರಹ್ಮಣ್ಯ ಅವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
BREAKING: ದುಬೈನಿಂದ ಬೆಂಗಳೂರಿನತ್ತ ಸಂಸದ ಪ್ರಜ್ವಲ್ ರೇವಣ್ಣ ಆಗಮನ: ಇಂದೇ ಅರೆಸ್ಟ್ ಸಾಧ್ಯತೆ
‘ವುಹಾನ್’ ಲ್ಯಾಬ್ನಿಂದ ಕೋವಿಡ್ ಸೋರಿಕೆಯಾಗುವ ಸಾಧ್ಯತೆ ಹೆಚ್ಚು: ಯುಕೆಗೆ ಅಮೆರಿಕ ಎಚ್ಚರಿಕೆ