ಬೆಂಗಳೂರು: ರಾಜ್ಯದ ಕಾಂಗ್ರೆಸ್ ಸರಕಾರವು ಗ್ಯಾರಂಟಿಗಳಿಗೆ ಕೊಕ್ ಕೊಡುವ ಕೆಲಸಕ್ಕೆ ಈಗ ಕೈ ಹಾಕಲಿದೆ ಎಂಬುದಾಗಿ ನನಗೆ ಅನಿಸುತ್ತಿದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ತಿಳಿಸಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಿನ್ನೆ ಕಾಂಗ್ರೆಸ್ ಶಾಸಕ ಹರಿಪ್ರಸಾದ್ ಅವರು ಹೇಳಿಕೆ ನೀಡಿದ್ದಾರೆ. ಈ ಗ್ಯಾರಂಟಿಗಳು ಸಾಕು; ಅಭಿವೃದ್ಧಿ ಕಡೆಗೆ ಗಮನ ಕೊಡಿ ಎಂದಿದ್ದಾರೆ ಎಂದು ಗಮನ ಸೆಳೆದರು.
ರಾಜ್ಯದ ಕಾಂಗ್ರೆಸ್ ಸರಕಾರವು ಮೆಟ್ರೋ ದರವನ್ನೂ ಏರಿಸಿದೆ; ಹಾಲಿನ ದರ ಏರಿಕೆ, ಸ್ಟಾಂಪ್ ಡ್ಯೂಟಿ ಹೆಚ್ಚಳ, ಪೆಟ್ರೋಲ್, ಡೀಸೆಲ್ ದರ ಏರಿಕೆ ಮಾಡಿದ್ದು, ದವಸ ಧಾನ್ಯಗಳ ಬೆಲೆ ಗಗನಕ್ಕೆ ಏರಿದೆ. ಇಷ್ಟೆಲ್ಲ ಆದರೂ ಯಾವುದಕ್ಕೆ ದರ ಏರಿಸಬೇಕು ಎಂಬುದರಲ್ಲಿ ಸರಕಾರ ಬ್ಯುಸಿ ಇದೆ ಎಂದು ಟೀಕಿಸಿದರು. ಈ ಭಾರವನ್ನು ಬಿಸಾಕಿ ಹೋಗುವ ಪರಿಸ್ಥಿತಿ ಇದೆ ಎಂದು ತಿಳಿಸಿದರು.
ಈ ಸರಕಾರ ಎಲ್ಲ ವಿಚಾರದಲ್ಲೂ ಕೈಚೆಲ್ಲಿ ಕುಳಿತಿದೆ. ಇವರಿಗೆ ಗ್ಯಾರಂಟಿ ಒಂದು ಕಡೆ, ಯಾವುದೇ ಕಾರಣಕ್ಕೂ ಅದನ್ನು ರದ್ದು ಮಾಡುವುದಿಲ್ಲ ಎಂಬ ವಾದ ಒಂದೆಡೆ, ಇನ್ನೊಂದೆಡೆ ಬೆಲೆ ಏರಿಕೆ ಮೂಲಕ ಜನರ ತಲೆ ಬೋಳಿಸುವ ಕೆಲಸವನ್ನು ಸರಕಾರ ಮಾಡುತ್ತಿದೆ ಎಂದು ಆಕ್ಷೇಪಿಸಿದರು.
ರಾಜ್ಯಪಾಲರು ಸಿಲ್ಲಿ ಕಾರಣಕ್ಕಾಗಿ ಸುಗ್ರೀವಾಜ್ಞೆಯನ್ನು ವಾಪಸ್ ಕಳಿಸಿದ್ದಾರೆ ಎಂಬ ಉಗ್ರಪ್ಪ ಅವರ ಹೇಳಿಕೆÉ ಕುರಿತು ಪತ್ರಕರ್ತರು ಗಮನ ಸೆಳೆದರು. ‘ಸಿಲ್ಲಿ ಪೀಪಲ್ ಸ್ಟಾರ್ಟ್ ಸಿಲ್ಲಿ ಥಿಂಗ್ಸ್ ಓನ್ಲಿ’ ಎಂದರಲ್ಲದೆ, ಈ ಸರಕಾರ ಅದಾಗಲೇ ಹೆಚ್ಚು ಕಡಿಮೆ ಸ್ಮಶಾನ ಸೇರುವ ಪರಿಸ್ಥಿತಿ ಬಂದಿದೆ. ಈ ಸರಕಾರದ ಕೆಟ್ಟ ಹೆಸರು ಶೇ 99ಕ್ಕೆ ಹೋಗಿದೆ ಎಂದು ಉತ್ತರ ನೀಡಿದರು. ಇವರಿಗೆ ಒಳ್ಳೆಯ ಹೆಸರು ಎಲ್ಲಿ ಬಂದು ಬಿಡುತ್ತದೆ ಎಂದು ಕೇಳಿದರು.
ಮಾನ್ಯ ರಾಜ್ಯಪಾಲರಿಗೆ, ಈ ಫೈನಾನ್ಸ್ ವಿಚಾರದಲ್ಲಿ ಅಥವಾ ಮೈಕ್ರೋ ಫೈನಾನ್ಸ್ ಮಾಡುವವರಿಗೂ ಇವರಿಗೂ ಏನು ಸಂಬಂಧ ಇರುತ್ತದೆ ಎಂದು ಪ್ರಶ್ನಿಸಿದರು. ಬಹಳ ಕಾಲದಿಂದ ನಾವು ಕ್ರಮಕ್ಕೆ ಆಗ್ರಹಿಸಿ ಹೋರಾಟ ಮಾಡುತ್ತಿದ್ದೇವೆ. ಇವತ್ತಿನ ವರೆಗೆ ಕ್ರಮ ಜರುಗಿಸಲು ಈ ಸರಕಾರಕ್ಕೆ ಆಗಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಈಗ 10 ವರ್ಷಗಳ ಶಿಕ್ಷೆಯನ್ನು ಅದರಲ್ಲಿ ನಮೂದಿಸಿ ಕಳಿಸಿದ್ದಾರೆ. ಇಂಥ ತೀರ್ಮಾನ ತೆಗೆದುಕೊಳ್ಳಲು ಅದು ಸದನದಲ್ಲಿ ಚರ್ಚೆ ಆಗಬೇಕಿತ್ತು ಎಂದು ವಿಶ್ಲೇಷಿಸಿದರು.
ಸದನದಲ್ಲಿ ಏನೂ ಚರ್ಚೆ ಆಗದೇ ನೀವು ಇಷ್ಟಾನುಸಾರ ಮಾಡುವುದು ಕಾನೂನುಬಾಹಿರ ಮತ್ತು ಅಸಾಂವಿಧಾನಿಕ ಕೂಡ. ಆದ್ದರಿಂದಲೇ ಅವರು ವಾಪಸ್ ಕಳಿಸಿದ್ದಾರೆ ಎಂದು ತಿಳಿಸಿದರು.