ಕೋಲಾರ : ಲೋಕಸಭಾ ಚುನಾವಣೆಯ ನಂತರ ಸರ್ಕಾರ ಬಿದ್ದುಹೋಗುವುದಲ್ಲ, ಇನ್ನಷ್ಟು ಸುಭದ್ರವಾಗಲಿದೆ. ಐದು ವರ್ಷಗಳೂ ಸರ್ಕಾರ ಸುಭದ್ರವಾಗಿರಲಿದೆ ಜೊತೆಗೆ ಗ್ಯಾರಂಟಿಗಳು ಜಾರಿಯಲ್ಲಿರಲಿವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಮುಳಬಾಗಿಲು ನಗರದಲ್ಲಿ ಕೋಲಾರ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾದ ಡಾ|| ಕೆ.ವಿ. ಗೌತಮ್ ಅವರ ಪರ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡು, ಮಾತನಾಡಿದ ಸಿಎಂಸಿದ್ದರಾಮಯ್ಯ, ಕೋಲಾರದಿಂದ ಇಂದು ಅಧಿಕೃತವಾಗಿ ಪ್ರಚಾರ ಆರಂಭಿಸಿದ್ದು, ಜನರ ಪ್ರತಿಕ್ರಿಯೆ ಬಹಳ ಚೆನ್ನಾಗಿದೆ. ಎಲ್ಲಾ ಜಾತಿಯ ಜನರು, ಮಧ್ಯಮ ವರ್ಗದವರು ನಮ್ಮ ಪರವಾಗಿದ್ದಾರೆ. ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಅತ್ಯಧಿಕ ಅಂತರದಿಂದ ಗೆಲ್ಲಲಿದ್ದಾರೆ ಎಂದರು.
ಲೋಕಸಭಾ ಚುನಾವಣೆಯ ನಂತರ ಸರ್ಕಾರ ಬಿದ್ದುಹೋಗುವುದಲ್ಲ, ಇನ್ನಷ್ಟು ಸುಭದ್ರವಾಗಲಿದೆ. 136 ಸ್ಥಾನಗಳನ್ನು ಗೆದ್ದು 43% ಮತಗಳನ್ನು ಕಾಂಗ್ರೆಸ್ ಗಳಿಸಿದ್ದೇವೆ. ಬಿಜೆಪಿ ಪಕ್ಷದವರು 64 ಸ್ಥಾನ ಗೆದ್ದಿದ್ದಾರೆ. ಇನ್ನಷ್ಟು ಜನ ನಮ್ಮ ಪಕ್ಷವನ್ನು ಸೇರಲಿದ್ದಾರೆ. ಸರ್ಕಾರ ಬಿದ್ದುಹೋಗುವ ಪ್ರಶ್ನೆ ಉದ್ಭಿಸುವುದಿಲ್ಲ. ಐದು ವರ್ಷಗಳೂ ಸರ್ಕಾರ ಸುಭದ್ರವಾಗಿರಲಿದೆ ಜೊತೆಗೆ ಗ್ಯಾರಂಟಿಗಳು ಜಾರಿಯಲ್ಲಿರಲಿವೆ ಎಂದು ಹೇಳಿದರು.
ಭದ್ರಾ ಮೇಲ್ದಂಡೆ ಯೋಜನೆಗೆ ₹5,300 ಕೋಟಿ ಕೊಡುವುದಾಗಿ ಕೇಂದ್ರ ಸರ್ಕಾರದ ಬಜೆಟ್ ನಲ್ಲಿ ಹೇಳಿದ್ದರು. ಒಂದು ರೂಪಾಯಿಯನ್ನಾದರೂ ಕೊಟ್ಟಿದ್ದಾರೆಯೇ? 15ನೇ ಹಣಕಾಸು ಆಯೋಗವು ₹5,495 ಕೋಟಿ ವಿಶೇಷ ಅನುದಾನ ಶಿಫಾರಸು ಮಾಡಿತ್ತು, ಅದನ್ನು ಕೊಟ್ಟಿದ್ದಾರಾ? ಪೆರಿಫೆರಲ್ ರಿಂಗ್ ರೋಡ್ ಹಾಗೂ ಕೆರೆಗಳ ಅಭಿವೃದ್ಧಿಗೆ ತಲಾ ₹3000 ಕೋಟಿ ಕೊಡುವುದಾಗಿ ಹೇಳಿದ್ದರು. ಕೊಟ್ಟರೇ?
15 ಲಕ್ಷ ರೂ ವಿದೇಶಗಳಿಂದ ತಂದು ಪ್ರತಿಯೊಬ್ಬರಿಗೂ ಕೊಟ್ಟರೇ? ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿದ್ದರು. ರೈತರ ಆದಾಯ ದ್ವಿಗುಣ ಮಾಡಲಾಗುವುದೆಂದು ಹೇಳಿದ್ದರು, ಮಾಡಿದರೆ? ಅಚ್ಚೇ ದಿನ್ ಆಯೇಗಾ, ಎಂದರು, ಬೆಲೆ ಕಡಿಮೆ ಮಾಡುವುದಾಗಿ ಹೇಳಿದ್ದರು. ಮಾಡಿದರೆ? ಬಿಜೆಪಿಗೆ ಏತಕ್ಕಾಗಿ ಮತ ನೀಡಬೇಕು? ಎಂದು ಪ್ರಶ್ನಿಸಿದ್ದಾರೆ.