ಬೆಂಗಳೂರು: ಕಾಂಗ್ರೆಸ್ ಪಕ್ಷದ ಶ್ಯಾಡೋ ನಾಯಕ ಡಿ.ಎಸ್.ವೀರಯ್ಯ ಅವ್ಯವಹಾರ ಆರೋಪದಡಿ ಕಾಂಗ್ರೆಸ್ ಆಶ್ರಯ ಪಡೆಯುತ್ತಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ, ಮೂಡಾ ಹಗರಣ, ST ವಿಶೇಷ ನಿಧಿ ದುರ್ಬಳಕೆಯ ಮುಖಭಂಗ ತಪ್ಪಿಸಿಕೊಳ್ಳಲು ಕಾಂಗ್ರೆಸ್ ಕುತಂತ್ರ ನಡೆಸುತ್ತಿದೆ ಅಂತ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು, ಅಖಿಲ ಭಾರತ ದಲಿತ ಕ್ರಿಯಾ ಸಮಿತಿ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ನಿಕಟಪೂರ್ವ), ಬಿಜೆಪಿ ಎಸ್ಸಿ ಮೋರ್ಚಾದ ಡಾ. ಚಿ.ನಾ ರಾಮು ಕಿಡಿಕಾರಿದ್ದಾರೆ.
ಈ ಕುರಿತಂತೆ ಇಂದು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವಂತ ಅವರು, ಮಾಜಿ ವಿಧಾನಪರಿಷತ್ ಸದಸ್ಯ, ದೇವರಾಜ ಅರಸು ಟ್ರಕ್ ಟರ್ಮಿನಲ್ಸ್ ನಿಗಮದ ಮಾಜಿ ಅಧ್ಯಕ್ಷ ಡಿ.ಎಸ್.ವೀರಯ್ಯ ಅವರನ್ನು ನಿಗಮದ ನಿಧಿ ದುರ್ಬಳಕೆ ಆರೋಪದಲ್ಲಿ ಸಿಐಡಿ ಬಂಧಿಸಿದೆ. ಈ ಬಂಧನವನ್ನು ಬಿಜೆಪಿ ಪಕ್ಷದ ಭ್ರಷ್ಟಾಚಾರ ಪ್ರಕರಣ ಎಂಬಂತೆ ಬಿಂಬಿಸಲು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ವಿಫಲ ಪ್ರಯತ್ನ ಮಾಡಿದೆ ಅಂತ ವಾಗ್ಧಾಳಿ ನಡೆಸಿದ್ದಾರೆ.
ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣದಿಂದ ರಾಜ್ಯದ ಜನರ ಮುಂದೆ ತೀವ್ರ ಮುಖಭಂಗಕ್ಕಿಡಾಗಿರುವ ಕಾಂಗ್ರೆಸ್ ಸರ್ಕಾರ ಬಿಜೆಪಿಯತ್ತಲೂ ಬೊಟ್ಟು ಮಾಡಿ ವಾಲ್ಮೀಕಿ ನಿಗಮ ಹಗರಣದ ಜನಾಕ್ರೋಶದ ಪ್ರಖರತೆಯಿಂದ ಕೊಂಚವಾದರೂ ರಕ್ಷಣೆ ಪಡೆಯೋಣ ಎಂಬ ಲೆಕ್ಕಾಚಾರದೊಂದಿಗೆ ತನ್ನ ಪರಂಪರಾಗತ ಕುಯುಕ್ತಿ ಮಾಡಿದೆ. ಆದರೆ ಡಿ.ಎಸ್.ವೀರಯ್ಯ ಪ್ರಕರಣ ಸೇರಿ ಕಾಂಗ್ರೆಸ್ ಬಿಜೆಪಿ ವಿರುದ್ಧ ಮಾಡುತ್ತಿರುವ ಯಾವುದೇ ಆರೋಪದ ಯಾವುದೇ ತನಿಖೆಗೆ ನಾವು ಸಿದ್ಧ, ಕಳೆದ ಒಂದೂಕಾಲು ವರ್ಷದಿಂದ ನಿಮ್ಮದೇ ಸರ್ಕಾರವಿದೆ. ಆಗ ಈ ಆರೋಪಗಳ ಬಗ್ಗೆ ತನಿಖೆ ಮಾಡಿಸದೇ ವಾಲ್ಮೀಕಿ ನಿಗಮ ಹಗರಣ, ಮೂಡಾ ಹಗರಣ, ಪರಿಶಿಷ್ಟರ ವಿಶೇಷ ಮೀಸಲು ನಿಧಿ ದುರ್ಬಳಕೆ ಹಗರಣ ಹೊರಬಂದ ನಂತರ ಬಿಜೆಪಿ ವಿರುದ್ಧ ಆರೋಪ ಮಾಡುತ್ತಿರುವುದು “ತಾನು ಕಳ್ಳ ಪರರ ನಂಬ” ಎಂಬ ಮಾತಿಗೆ ಅನ್ವರ್ಥದಂತಿದೆ ಅಂತ ತಿಳಿಸಿದ್ದಾರೆ.
ಇಷ್ಟಕ್ಕೂ ಡಿ.ಎಸ್.ವೀರಯ್ಯ ಬಿಜೆಪಿಯಿಂದ ಕಾಲು ಹೊರಗಿಟ್ಟು ಎರಡು ವರ್ಷವಾಗುತ್ತಾ ಬರುತ್ತಿದೆ. ವೀರಯ್ಯ ಮತ್ತು ಮತ್ತೊಬ್ಬ ಪರಿಷತ್ ಮಾಜಿ ಸದಸ್ಯೆ, ಬಿಜೆಪಿ ಪಕ್ಷದ್ರೋಹಿ, ಉಂಡಮನೆಗೆ ಎರಡು ಬಗೆಯುವ ಮಹಿಳಾ ಮುಖದ ತೇಜಸ್ವಿನಿ ಗೌಡ ವಿಧಾನಸಭಾ ಚುನಾವಣೆ ಫಲಿತಾಂಶ ಬಂದ ಮರುದಿನದಿಂದಲೇ ಕಾಂಗ್ರೆಸ್ ಕದವನ್ನು ಬಡಿಯುತ್ತಿದ್ದರು. ಡಿ.ಎಸ್.ವೀರಯ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಗೃಹಮಂತ್ರಿ ಪರಮೇಶ್ವರ್ ಅವರಾದಿಯಾಗಿ ಅನೇಕ ನಾಯಕರನ್ನು ಭೇಟಿಯಾಗಿ ನಾನು ಬಿಜೆಪಿ ಬಿಟ್ಟಿದ್ದೇನೆ. ನನ್ನನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಳ್ಳಿ ಎಂದು ಮನವಿ ಮಾಡಿದಾಗ ಕಾಂಗ್ರೆಸ್ ನಾಯಕರು ಅದಕ್ಕೊಪ್ಪಿ ಪಕ್ಷ ಸೇರ್ಪಡೆಗೆ ದಿನಾಂಕವನ್ನೂ ನಿಗದಿ ಮಾಡಿದ್ದರು. ಎಲ್ಲವೂ ಅಂದುಕೊಂಡಂತೆಯೇ ಆಗಿದ್ದಾರೆ ಬೆಂಗಳೂರಿನ ಹಲವು ಮಾಜಿ ಕಾರ್ಪೋರೇಟರ್ ಗಳು, ಮಾಜಿ ಉಪಮೇಯರ್ ಗಳು ಕೆಪಿಸಿಸಿ ಕಚೇರಿಯಲ್ಲಿ ಪಕ್ಷ ಸೇರ್ಪಡೆಯಾದ ದಿನವೇ ವೀರಯ್ಯ ಕೂಡಾ ಕಾಂಗ್ರೆಸ್ ಬಾವುಟ ಹಿಡಿಯಬೇಕಿತ್ತು. ಆದರೆ ಅಂತಿಮ ಕ್ಷಣದಲ್ಲಿ ವೀರಯ್ಯಗೆ ವಿಷಯ ಮುಟ್ಟಿಸಲಾಗಿತ್ತು, ಆತ ಅಂದು ಅನ್ಯ ರಾಜ್ಯ ಪ್ರವಾಸದಲ್ಲಿ ಇದ್ದುದರಿಂದ ಬರಲಾಗಲಿಲ್ಲ ಎಂಬ ಮಾಹಿತಿ ನನಗಿದೆ ಎಂದು ಆರೋಪಿಸಿದ್ದಾರೆ.
ಟ್ರಕ್ ಟರ್ಮಿನಲ್ ಹಗರಣದಲ್ಲಿ ವೀರಯ್ಯ ತಪ್ಪಿತಸ್ಥ ಎಂದು ಗೊತ್ತಿದ್ದೂ ಆತನನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಕಾಂಗ್ರೆಸ್ ನಾಯಕರು ಮುಂದಾಗಿದ್ದು ಏಕೆ? ನೀವು ಪಕ್ಷ ಸೇರಿದರೆ ಹಗರಣದಿಂದ ಬಚಾವು ಮಾಡುತ್ತೇವೆ ಎಂದು ಅಭಯ ನೀಡಲಾಗಿತ್ತೇ ಅಥವಾ ವೀರಯ್ಯ ಅವರೇ ನಾನು ಕಾಂಗ್ರೆಸ್ ಸೇರುತ್ತೇನೆ ನನ್ನ ಬಚಾವು ಮಾಡಿ ಎಂದು ಶರಣಾಗಿದ್ದಾರೆ ಎಂಬುದನ್ನು ಕಾಂಗ್ರೆಸ್ ನಾಯಕರು ಈಗ ಹೇಳಬೇಕು. ವೀರಯ್ಯ ವಿಧಾನಸಭಾ ಚುನಾವಣೆ ನಂತರ ಸಂಪೂರ್ಣವಾಗಿ ಬಿಜೆಪಿಯಿಂದ ದೂರವಾಗಿದ್ದರು. ಪಕ್ಷದ ವೇದಿಕೆಗಳಲ್ಲಿ, ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿರಲಿಲ್ಲ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಪರ, ಡಿ.ಕೆ.ಸುರೇಶ್ ಪರ ಗುಟ್ಟಾಗಿ ಪ್ರಚಾರವನ್ನೂ ಮಾಡಿದ್ದರು. ಕೆಲಸ ಮಾಡುವಂತೆ ಉಪಮುಖ್ಯಮಂತ್ರಿಗಳೇ ಕರೆ ಮಾಡಿ ಕೋರಿದ್ದರು ಅಂತಲೂ ಹೇಳಲಾಗುತ್ತಿದೆ.
ಹೀಗಿರುವಾಗ ಬಿಜೆಪಿ ಡಿ.ಎಸ್.ವೀರಯ್ಯ ಅವರನ್ನು ಸಮರ್ಥನೆ ಮಾಡುವ ಪ್ರಶ್ನೆಯೇ ಇಲ್ಲ ಅಂತ ಪ್ರಶ್ನಿಸಿದ್ದಾರೆ.
ಉಪ್ಪು ತಿಂದವರು ಯಾರೇ ಆದರೂ ನೀರು ಕುಡಿಯಲೇ ಬೇಕು. ಡಿ.ಎಸ್.ವೀರಯ್ಯ ಕಾಂಗ್ರೆಸ್ ಪಕ್ಷದ ಶ್ಯಾಡೋ ನಾಯಕ. ಅವರ ಅವ್ಯವಹಾರ, ಬಂಧನ ಇಟ್ಟುಕೊಂಡು ಬಿಜೆಪಿಗೆ ಮುಜುಗರ ಮಾಡಿದೆವು ಅಂದುಕೊಂಡರೆ ಅದು ಕಾಂಗ್ರೆಸ್ ಪಕ್ಷದ ತಪ್ಪು ಎಣಿಕೆ. ಅದಲ್ಲ ಯಾವುದೇ ಆರೋಪದ ಯಾವುದೇ ತನಿಖೆಗೆ ಸಿದ್ಧ ಎಂದು ನಮ್ಮ ಪಕ್ಷದ ಹಿರಿಯ ನಾಯಕರೇ ಹೇಳಿರುವಾಗ ಕಾಂಗ್ರೆಸ್ ತನ್ನ ಬ್ರಹ್ಮಾಂಡ ಭ್ರಷ್ಟಾಚಾರ ಹಗರಣಗಳನ್ನು ಮರೆಮಾಚಲು ಕುತಂತ್ರದ ಛತ್ರಿಯಡಿ ಆಶ್ರಯ ಪಡೆಯುವುದನ್ನು ಅರಿಯದಷ್ಡು ಅಮಾಯಕರಲ್ಲ ನಾಡಿನ ಜನ ಅಂತ ತಿಳಿಸಿದ್ದಾರೆ.
ವಾಲ್ಮೀಕಿ ನಿಗಮದ ಹಗರಣ, ಮೂಡಾ ಹಗರಣ, ಪರಿಶಿಷ್ಟರ ವಿಶೇಷ ಘಟಕ ಯೋಜನೆಗಳ ಹಣ ದುರ್ಬಳಕೆ, ಹೀಗಿ ಸಾಲು ಸಾಲು ಅವ್ಯವಹಾರಗಳಲ್ಲಿ ರೆಡ್ ಹ್ಯಾಂಡಾಗಿ ಸಿಕ್ಕಿಕೊಂಡಿರುವ ಕಾಂಗ್ರೆಸ್ ಸರ್ಕಾರ ಈ ನಾಡಿನ ಜನರಿಗೆ ದ್ರೋಹವೆಸಗಿದೆ. ಕೂಡಲೇ ಮುಖ್ಯಮಂತ್ರಿಗಳು ರಾಜೀನಾಮೆ ಕೊಡಬೇಕು. ಹಗರಣಗಳ ಭಾಗೀದಾರ ಸಚಿವರು, ಶಾಸಕರು ಅಧಿಕಾರದಿಂದ ತೊಲಗಬೇಕು ಅಂತ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
BREAKING: ಬೆಂಗಳೂರಲ್ಲಿ ಠಾಣೆಯಲ್ಲಿ ‘ಪೊಲೀಸ್ ಸಿಬ್ಬಂದಿ’ಗಳ ನಡುವೆ ಗಲಾಟೆ: ‘ASI’ ಮೇಲೆ ‘HC’ ಹಲ್ಲೆಗೆ ಯತ್ನ.?