ಹುಬ್ಬಳ್ಳಿ: ಸಿಎಂ ಸಿದ್ದರಾಮಯ್ಯ ಅವರು ತಪ್ಪುಗಳನ್ನು ಮುಚ್ಚಿಕೊಳ್ಳಲು ಕ್ಷೇತ್ರ ಮರು ವಿಂಗಡಣೆ ಕುರಿತು ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ. ಅವರು ಮುಖ್ಯಮಂತ್ರಿಯಾಗಿ ಇದನ್ನು ರಾಜಕೀಯ ಗೊಳಿಸುತ್ತಿರುವುದು ದುರಾದೃಷ್ಟ ಇದು ರಾಜ್ಯಕ್ಕೆ ಒಳ್ಳೆಯದಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ತಾವು ಮುಖ್ಯಮಂತ್ರಿಯಾಗಿ ವಿಫಲರಾಗಿರುವುದನ್ನು ಮುಚ್ಚಿಕೊಳ್ಳಲು ಯಾವುದಾದರೂ ವಿಷಯದ ಮಧ್ಯದಲ್ಲಿ ತಪ್ಪು ಹುಡುಕುವ ಕೆಲಸ ಮಾಡುತ್ತಾರೆ. ಕರ್ನಾಟಕ ದಿವಾಳಿ ಅಂಚಿನಲ್ಲಿದ್ದು, ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಎಸ್ಸಿ ಎಸ್ಟಿಗೆ ಮೀಸಲಿಟ್ಟಿದ್ದ ಹಣ ದುರುಪಯೋಗ ಆಗಿದೆ. ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವ ಆಡುತ್ತಿದೆ ಎಂದು ಆರೋಪಿಸಿದರು.
ಕ್ಷೇತ್ರ ಮರುವಿಂಗಡನೆ ಸಂಸತ್ತಿನ ಮೂರನೇ ಎರಡರಷ್ಟು ಬಹುಮತದೊಂದಿಗೆ ಆಗತ್ತದೆ. ಒಂದೇ ರಾತ್ರಿಗೆ ಆಗುವುದಿಲ್ಲ. ಕ್ಷೇತ್ರ ಮರುವಿಂಗಡನೆ ಮಾಡಲು ಸಂವಿಧಾನ ಬದ್ದ ಸಮಿತಿ ಇದೆ. ಅಲ್ಲದೇ ಪ್ರಧಾನಿ ನರೇಂದ್ರ ಮೋದಿಯವರು ಯಾವುದೇ ರಾಜ್ಯಕ್ಕೂ ಅನ್ಯಾಯ ಆಗುವುದಿಲ್ಲ ಎಂದು ಸಂಸತ್ತಿನಲ್ಲಿಯೇ ಸ್ಪಷ್ಟ ಪಡಿಸಿದ್ದಾರೆ. ಆದರೂ ಏನಾದರೂ ತಪ್ಪು ಹುಡುಕಿ ತಮ್ಮ ತಪ್ಪುಗಳನ್ನು ಮುಚ್ಚಿಕೊಳ್ಳಲು ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಯಾಗಿ ಇದನ್ನು ರಾಜಕೀಯ ಗೊಳಿಸುತ್ತಿರುವುದು ದುರಾದೃಷ್ಟ ಇದು ರಾಜ್ಯಕ್ಕೆ ಒಳ್ಳೆಯದಲ್ಲ ಎಂದು ಹೇಳಿದರು.
ವಿಕಸಿತ ಭಾರತ ಸಾಕಾರ
ದೇಶದ ಜನರು ವಿಕಸಿತ ಆದಾಗ ಮಾತ್ರ ದೇಶ ವಿಕಸಿತ ಆಗಲಿದೆ. ಕಾಂಗ್ರೆಸ್ ಸರ್ಕಾರ ಇದ್ದಾಗ ಆಡಳಿತ ಮಾಡುವವರ ಜೇಬು ತುಂಬಿತ್ತು. ಜನರ ಜೇಬು ಖಾಲಿ ಇತ್ತು. ನರೇಂದ್ರ ಮೋದಿ ಯವರು ಪ್ರಧಾನಿ ಆದಮೇಲೆ 25 ಕೋಟಿ ಜನರು ಬಡತನ ರೇಖೆಗಿಂತ ಮೇಲೆ ಬಂದಿದ್ದಾರೆ. ಕಾಂಗ್ರೆಸ್ ಸರ್ಕಾರ ಇದ್ದಾಗ ಅತ್ಯಂತ ಕಡಿಮೆ ಜನರು ಒಂದು ಕೋಟಿ ರೂ. ಆದಾಯ ತೆರಿಗೆ ಕಟ್ಟುತ್ತಿದ್ದರು. ಈಗ ನಾಲ್ಕು ಲಕ್ಷ ಜನರು ಒಂದು ಕೋಟಿ ರೂ. ಆದಾಯ ತೆರಿಗೆ ಕಟ್ಟುತ್ತಿದ್ದಾರೆ. ಭಾರತ ವಿಕಸಿತ ಆಗುತ್ತಿದೆ ಎನ್ನುವುದು ಭಾರತೀಯರಿಗೂ ಅನಿಸುತ್ತಿದೆ.ವಿದೇಶಿಯರಿಗೂ ಅನಿಸುತ್ತಿದೆ. ಶೇ 6.5% ಜಿಡಿಪಿ ಅಭಿವೃದ್ಧಿ ಆಗುತ್ತಿರುವುದು ಬೇರೆ ಯಾವುದೇ ದೇಶದಲ್ಲಿ ಆಗುತ್ತಿಲ್ಲ. ಕಾಂಗ್ರೆಸ್ ಮತ್ತು ಅದರ ಅಧ್ಯಕ್ಷರಿಗೆ ಕಾಂಗ್ರೆಸ್ ಅಭಿವೃದ್ಧಿ ಆದರೆ ಮಾತ್ರವೇ ದೇಶದ ಅಭಿವೃದ್ಧಿ ಎಂದುಕೊಂಡಿದ್ದಾರೆ ಎಂದರು.
ಬಡವರು, ದಲಿತರು, ಯುವಕರು, ಹೆಣ್ಣು ಮಕ್ಕಳು ಎಲ್ಲ ರಂಗದಲ್ಲಿಯೂ ಅಭಿವೃದ್ಧಿ ಆಗುತ್ತಿದೆ. ಎಲ್ಲರೂ ಮುಂದೆ ಬರುತ್ತಿದ್ದಾರೆ. ವಿಕಸಿತ ಭಾರತ ಕಲ್ಪನೆ ಈಗ ಸಾಕಾರಗೊಳ್ಳುತ್ತಿದೆ. ಇದಕ್ಕೆ ಎಲ್ಲರೂ ಕೈಜೋಡಿಸುತ್ತಿದ್ದಾರೆ. ಇದನ್ನು ಕಾಂಗ್ರೆಸ್ ನವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ ಎಂದರು.
BREAKING : ಚಿಕ್ಕಬಳ್ಳಾಪುರಲ್ಲಿ ಭೀಕರ ಮರ್ಡರ್ : ಕ್ಷುಲ್ಲಕ ಕಾರಣಕ್ಕೆ ಬಾರ್ ಸಪ್ಲೈಯರ್ ನನ್ನು ಕೊಂದ ದುಷ್ಕರ್ಮಿಗಳು