ಬೆಂಗಳೂರು : ರಾಸಲೀಲೆ ಪೆನ್ ಡ್ರೈವ್ ಪ್ರಕರಣದ ಕುರಿತಂತೆ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಸ್ಪೋಟಕ ಹೇಳಿಕೆ ನೀಡಿದ್ದು, ಮಹಾನಾಯಕ ಆಯ್ತು, ಇದೀಗ ಪೆನ್ ಡ್ರೈವ್ ಪ್ರಕರಣದಲ್ಲಿ ದೊಡ್ಡ ತಿಮಿಂಗಿಲ ಇದೆ ಎಂದು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೆನ್ ಡ್ರೈವ್ ಹಂಚಿಕೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಇದ್ದಾನೆ. ದೊಡ್ಡ ತಿಮಿಂಗಿಲ ಹಿಡಿದ್ರೆ ಎಲ್ಲಾ ಗೊತ್ತಾಗುತ್ತೆ. ಆ ದೊಡ್ಡ ತಿಮಿಂಗಿಲ ಸರ್ಕಾರದಲ್ಲೇ ಇದ್ದಾರೆ. ಎಲ್ಲಿ ಹಿಡಿತೀರಿ? ದೊಡ್ಡ ತಿಮಿಂಗಿಲದ ಆಡಿಯೋ ಬಿಟ್ಟಿದ್ದಕ್ಕೆ ಕೇಸ್ ಹಾಕಿದ್ರು. ದೇವರಾಜೇಗೌಡನ ಮೇಲೆ ಕೇಸ್ ಹಾಕಿದ್ರು ಎಂದು ವಾಗ್ದಾಳಿ ನಡೆಸಿದ್ದಾರೆ.
ರೇವಣ್ಣಗೆ ಜಾಮೀನು ಸಿಕ್ಕಿದೆ ಎಂದು ಸಂಭ್ರಮ ಬೇಡ. ನಾನು ಸಂತೋಷ ಪಡುತ್ತೇನೆ ಎಂದು ಭಾವಿಸಬೇಡಿ. ಕಾರ್ಯಕರ್ತರು ಸಂಭ್ರಮಿಸುವ ಸಮಯ ಇದಲ್ಲ. ರಾಜ್ಯದಲ್ಲಿ ಹೀನಾಯ ಘಟನೆ ನಡೆದಿದೆ. ರಾಜ್ಯವೇ ತಲೆ ತಗ್ಗಿಸುವ ಘಟನೆ ಇದು ಎಂದು ಹೇಳಿದರು.