ನವದೆಹಲಿ:ಆದಾಯ ತೆರಿಗೆ ಇಲಾಖೆ ತನ್ನ ಖಾತೆಗಳನ್ನು ಸ್ಥಗಿತಗೊಳಿಸಿದೆ ಎಂದು ಕಾಂಗ್ರೆಸ್ ಆರೋಪಿಸಿದ ಕೆಲವು ದಿನಗಳ ನಂತರ, ಆಡಳಿತಾರೂಢ ಬಿಜೆಪಿ ಶನಿವಾರ ಪಕ್ಷದ ಪ್ರಧಾನ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ನಡೆಸಿದ ಸಂವಾದದಲ್ಲಿ ಈ ಆರೋಪವನ್ನು ತಳ್ಳಿಹಾಕಿದೆ.
ಉದ್ದೇಶಪೂರ್ವಕವಾಗಿ ತೆರಿಗೆ ಬಾಕಿ ಪಾವತಿಸದ ಕಾರಣ ಕಾಂಗ್ರೆಸ್ ಪಕ್ಷದ ಮೂರರಿಂದ ನಾಲ್ಕು ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ,ಸ್ಥಗಿತಗೊಳಿಸಲಾಗಿಲ್ಲ ಎಂದು ಬಿಜೆಪಿ ಹೇಳಿದೆ.
ಈ ಬ್ಯಾಂಕ್ ಖಾತೆಗಳು ಸದ್ಯ ಕಾರ್ಯಾಚರಣೆಯಲ್ಲಿದ್ದು, ಯಾವುದನ್ನೂ ಸ್ಥಗಿತಗೊಳಿಸಿಲ್ಲ. ಈ ಖಾತೆಗಳಿಗೆ ಹಣ ಹಾಕಲೂ ಬಹುದು, ತೆಗೆಯಲೂ ಬಹುದು. ಆದರೆ ಆದಾಯ ತೆರಿಗೆ ಕಾಯ್ದೆಯಡಿ ತೆರಿಗೆ ಬಾಕಿ ಇರುವ ವಿವಾದಿತ ₹125 ಕೋಟಿಯನ್ನು ಹೊರತುಪಡಿಸಿ ಉಳಿದ ಮೊತ್ತವನ್ನು ತೆಗೆಯಲು ಯಾವುದೇ ನಿರ್ಬಂಧವಿಲ್ಲ’ ಎಂದಿದ್ದಾರೆ.
‘ಮಾಧ್ಯಮಗಳಲ್ಲಿ ವರದಿಯಾಗಿರುವಂತೆ ಕಾಂಗ್ರೆಸ್ನ ಹಲವು ಖಾತೆಗಳಲ್ಲಿ ಸುಮಾರು ₹1 ಸಾವಿರ ಕೋಟಿ ಇದೆ. ಇವುಗಳಿಗೆ ಹಲವು ಪ್ಯಾನ್ ಸಂಖ್ಯೆಯನ್ನು ನೀಡಲಾಗಿದೆ. ಇದು ಆ ಪಕ್ಷದ ಸಿದ್ಧಾಂತಕ್ಕೇ ವಿರುದ್ಧವಾದದ್ದು. ಇದರೊಂದಿಗೆ ಅವರ ಸ್ಥಿರಾಸ್ತಿ ಮೊತ್ತ ₹500 ಕೋಟಿಯಷ್ಟಿದೆ’ ಎಂದು ಸಂಬಿತ್ ಹೇಳಿದ್ದಾರೆ.
ರೈಲು ಟಿಕೆಟ್ ಖರೀದಿಸಲು ತಮ್ಮ ಪಕ್ಷದ ಬಳಿ ಈಗ ಹಣವಿಲ್ಲ ಎಂಬ ರಾಹುಲ್ ಗಾಂಧಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಪಾತ್ರಾ, “ರಾಹುಲ್ ಗಾಂಧಿ ತಮ್ಮ ಪಕ್ಷಕ್ಕೆ ಹಣದ ಕೊರತೆಯಿದೆ ಎಂದು ಹೇಳುತ್ತಾರೆ. ರೈಲು ಟಿಕೆಟ್ ಖರೀದಿಸಲು ಸಹ ಅವರ ಪಕ್ಷದ ಬಳಿ ಹಣವಿಲ್ಲ. ಆದರೆ ಅವರು ಹೆಚ್ಚಾಗಿ ಚಾರ್ಟರ್ಡ್ ವಿಮಾನಗಳಲ್ಲಿ ಪ್ರಯಾಣಿಸುವುದನ್ನು ಕಾಣಬಹುದು ಎಂದರು.