ಮಂಡ್ಯ : ಮದ್ದೂರು ಪುರಸಭೆಯನ್ನು ನಗರಸಭೆಯನ್ನಾಗಿ ಮಾಡಬೇಕೆಂಬುದು ನನ್ನ ಮಹತ್ವಾಕಾಂಕ್ಷಿ ಯೋಜನೆಯಾಗಿತ್ತು. ಆದರೆ, ರಾಜ್ಯ ಸರ್ಕಾರ ಇಷ್ಟು ಬೇಗ ನಮ್ಮ ಬೇಡಿಕೆಗೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಿರುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಆಭಾರಿಯಾಗಿದ್ದೇನೆ ಎಂದು ಶಾಸಕ ಕೆ.ಎಂ.ಉದಯ್ ಹೇಳಿದರು.
ಮದ್ದೂರು ಪಟ್ಟಣದ ಶ್ರೀ ಗುರುಶಾಂತಪ್ಪ ಸರ್ಕಾರಿ ಆಸ್ಪತ್ರೆ ಹಾಗೂ ವಸತಿ ಗೃಹಗಳ ಮೂಲ ಸೌಕರ್ಯಗಳ ಕಾಮಗಾರಿಗೆ ಅಂದಾಜು 1 ಕೋಟಿ 30 ಲಕ್ಷ ರೂ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದರು.
ಮದ್ದೂರು ಇತಿಹಾಸದಲ್ಲಿ ಸುವರ್ಣ ಅಕ್ಷರಗಳಲ್ಲಿ ಬರೆದಿಡಬಹುದಾದ ದಿನ ಈ ದಿನವಾಗಿದೆ. ಹಲವು ದಶಕಗಳಿಂದ ಸಣ್ಣ ಹಳ್ಳಿಯಂತ್ತಿರುವ ಮದ್ದೂರು ಪಟ್ಟಣ ಸಮಗ್ರ ಅಭಿವೃದ್ಧಿಯಿಂದ ಸಾಕಷ್ಟು ಹಿಂದುಳಿದಿದೆ. ನಾನು ಶಾಸಕನಾಗಿ ಆಯ್ಕೆಯಾದ ದಿನದಿಂದಲೇ ಮದ್ದೂರು ಪುರಸಭೆಯನ್ನು ನಗರಸಭೆಯನ್ನಾಗಿ ಮೇಲ್ದರ್ಜೆಗೆ ಏರಿಸಬೇಕೆಂಬುದು ನನ್ನ ಬಹು ದಿನಗಳ ಕನಸಾಗಿತ್ತು. ಈ ಸಂಬಂಧ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿತ್ತು. ಹೀಗಾಗಿ ಸರ್ಕಾರದ ಮಟ್ಟದಲ್ಲಿ ಸಾಕಷ್ಟು ಹೋರಾಟ, ಒತ್ತಡ ಹಾಕಿದ ಪರಿಣಾಮ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ನಗರಸಭೆಯನ್ನಾಗಿ ಮೇಲ್ದರ್ಜೆಗೆ ಏರಿಸಲಾಗಿದ್ದು, ಸರ್ಕಾರದಿಂದ ಹೆಚ್ಚಿನ ಅನುದಾನ ಸಿಗುವ ಜೊತೆಗೆ ಪಟ್ಟಣದ ಸಮಗ್ರ ಅಭಿವೃದ್ದಿಗೆ ನಾಂದಿಯಾಗಲಿದೆ.
ಹೀಗಾಗಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಅವರಿಗೆ ಶಾಸಕ ಕೆ.ಎಂ.ಉದಯ್ ಅಭಿನಂದನೆ ಸಲ್ಲಿಸಿದರು.
ರಾಜ್ಯದಲ್ಲಿ ಐದಾರು ಬಾರಿ ಗೆದ್ದಿರುವ ಹಾಗೂ ಸಚಿವರ ಕ್ಷೇತ್ರಗಳಿಗೂ ಅನುದಾನ ನೀಡುತ್ತಿಲ್ಲ ಆದರೆ, ನಾನು ಕೇವಲ ಮೊದಲನೇ ಬಾರಿಗೆ ಶಾಸಕನಾಗಿದ್ದರು ಸಹ
ಈಗಾಗಲೇ ಕ್ಷೇತ್ರದಾಂದತ್ಯ 2 ಸಾವಿರ ಕೋಟಿ ಅನುದಾನ ತಂದು ಅಭಿವೃದ್ಧಿ ಪರ್ವ ಪ್ರಾರಂಭ ಮಾಡಿದ್ದೇನೆ. ರೈತರ ಅಭಿವೃದ್ಧಿ ದೃಷ್ಟಿಯಿಂದ ನೀರಾವರಿ ಯೋಜನೆಗಳಿಗೆ ಮೊದಲ ಆದ್ಯತೆ ನೀಡುತ್ತಿದ್ದೇನೆ ಇದಕ್ಕೆ ಸಾಕ್ಷಿ ಎಂಬಂತೆ ಕೆಮ್ಮಣ್ಣು ನಾಲೆಯನ್ನು ಅತ್ಯಾಧುನಿಕ ರೀತಿಯಲ್ಲಿ ಅಭಿವೃದ್ಧಿಗೊಳಿಸಲು 90 ಕೋಟಿ ರೂ ವೆಚ್ಚದಲ್ಲಿ ಚಾಲನೆ ನೀಡಲಾಗಿದೆ.
ಸೂಳೆಕೆರೆ ವ್ಯಾಪ್ತಿಯ ನಾಲೆಗಳು, ವಿ.ಸಿ ನಾಲೆ, ಬೈರನ್ ನಾಲೆ, ವೈದ್ಯನಾಥಪುರ ನಾಲೆ ಹಾಗೂ ಶಿಂಷಾ ನದಿಯ ವಿವಿಧೆಡೆ ಏತ ನೀರಾವರಿ ಯೋಜನೆ ಮೂಲಕ ಆತಗೂರು ಮತ್ತು ಸೋಮನಹಳ್ಳಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಕೆರೆಗಳಿಗೆ ನೀರು ತುಂಬಿಸುವ ಮಹಾತ್ವಾಕಾಂಕ್ಷಿ ಯೋಜನೆಗಳಿಗೆ ಚಾಲನೆ ನೀಡಲಾಗಿದ್ದು, ಇದರ ಜೊತೆಗೆ ಶಿಂಷಾ ನದಿಗೆ ಎರಡು ಕಡೆ ಬ್ರಿಜ್ ಕಂ ಬ್ಯಾರೇಜ್ ಗೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ದೊರಕಿದ್ದು, ಶೀಘ್ರದಲ್ಲೇ ಕಾಮಗಾರಿ ಪ್ರಾರಂಭವಾಗಲಿದೆ ಎಂದು ತಿಳಿಸಿದರು.
ಮದ್ದೂರು ಪಟ್ಟಣದ ರಸ್ತೆ ಅಗಲೀಕರಣ, ಕೆಮ್ಮಣ್ಣು ನಾಲೆ ಅಭಿವೃದ್ಧಿ, ಪುರಸಭೆಯನ್ನು ನಗರಸಭೆಯನ್ನಾಗಿ ಮಾಡುವ ಇಂಗಿತ ವ್ಯಕ್ತಪಡಿಸಿದ್ದ ಸಂದರ್ಭದಲ್ಲಿ ಕೆಲವರು ಅಪಪ್ರಚಾರದ ಜೊತೆಗೆ ಕುಹುಕದ ಮಾತುಗಳನ್ನಾಡಿದರು. ಆದರೆ, ಇಂತಹ ಮಾತುಗಳಿಗೆ ನಾನು ತಲೆಕೆಡಿಸಿಕೊಳ್ಳಲ್ಲ ಇದಕ್ಕೆಲ್ಲ ನಮ್ಮ ಸರ್ಕಾರದಿಂದ ಅನುಮೋದನೆ ಪಡೆಯುವುದರ ಜೊತೆಗೆ ಅನುದಾನವನ್ನು ತಂದು ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡುತ್ತಿದ್ದೇನೆ. ಕ್ಷೇತ್ರದಲ್ಲಿ ಇನ್ನು ಹತ್ತು ಹಲವು ಅಭಿವೃದ್ಧಿ ಯೋಜನೆಗಳನ್ನು ಕೈಗೊಳ್ಳಲಾಗುತ್ತಿದ್ದು, ಹಂತ ಹಂತವಾಗಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಮುನ್ನುಡಿ ಬರೆಯಲಾಗುವುದು ಎಂದು ಶಾಸಕ ಕೆ.ಎಂ.ಉದಯ್ ವಿರೋಧಿಗಳಿಗೆ ತಿರುಗೇಟು ನೀಡಿದರು.
ಇನ್ನು 40 ಕೋಟಿ ರೂ ವೆಚ್ಚದಲ್ಲಿ ತಾಲೂಕು ಆಸ್ಪತ್ರೆಗೆ ನೂತನ ಕಟ್ಟಡ ಹಾಗೂ ಮೇಲ್ದರ್ಜೆಗೆ ಏರಿಸುವ ಸಂಬಂಧ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಮೊದಲ ಹಂತದ ಕಾಮಗಾರಿಗೆ 1.30 ಕೋಟಿ ರೂ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗಿದೆ. ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ತಾಲೂಕು ಆಸ್ಪತ್ರೆಯಲ್ಲಿ ವೈದ್ಯರು ಮತ್ತು ಸಿಬ್ಬಂದಿಗಳ ಕೊರತೆ ಇದ್ದು, ಆದಷ್ಟು ಬೇಗ ಪರಿಹರಿಸಲಾಗುವುದು ಭರವಸೆ ನೀಡಿದರು.
ಇದೇ ವೇಳೆ ಡಿಎಚ್ಓ ಕೆ.ಮೋಹನ್, ಟಿಎಚ್ಓ ಡಾ. ರವೀಂದ್ರ ಬಿ.ಗೌಡ, ಆಸ್ಪತ್ರೆ ಆಡಳಿತಾಧಿಕಾರಿ ಡಾ.ಬಾಲಕೃಷ್ಣ, ಪುರಸಭಾ ಉಪಾಧ್ಯಕ್ಷ ಟಿ.ಆರ್.ಪ್ರಸನ್ನಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷೆ ವನಿತಾ, ಪುರಸಭಾ ಸದಸ್ಯರಾದ ಸಿದ್ದರಾಜು, ಸರ್ವಮಂಗಳ, ಪ್ರಮೀಳಾ ತಾಲೂಕು ಕಾಂಗ್ರೆಸ್ ಎಸ್ಸಿ ವಿಭಾಗದ ಅಧ್ಯಕ್ಷ ಮಹದೇವಯ್ಯ, ಮುಖಂಡರಾದ ಕೆ.ಎಂ.ರವಿ, ಮಹಾಲಿಂಗಯ್ಯ, ವಿಜಯ್ ಕುಮಾರ್, ಲೋಕೇಶ್, ಮರಿದೇವರು, ನಿತೀನ್, ಸುರೇಶ್ ಮತ್ತಿತರರು ಇದ್ದರು.
ವರದಿ : ಗಿರೀಶ್ ರಾಜ್, ಮಂಡ್ಯ
ಉದ್ಯೋಗವಾರ್ತೆ: 51,000 ಅತಿಥಿ ಶಿಕ್ಷಕರ ನೇಮಕಕ್ಕೆ ರಾಜ್ಯ ಸರ್ಕಾರದಿಂದ ಆದೇಶ , ಇಲ್ಲಿದೆ ಸಂಪೂರ್ಣ ಮಾಹಿತಿ..!