ಶಿವಮೊಗ್ಗ : ಸಾಕುಪ್ರಾಣಿಗಳನ್ನು ಅರಣ್ಯ ಪ್ರದೇಶದಲ್ಲಿ ಮೇಯಲು ಬಿಡದಂತೆ ಅರಣ್ಯ ಸಚಿವರು ಹೊರಡಿಸಿರುವ ಆದೇಶವನ್ನು ಖಂಡಿಸಿ ಸೋಮವಾರ ಜಿಲ್ಲಾ ರೈತ ಸಂಘದ ವತಿಯಿಂದ ನೂರಾರು ಜಾನುವಾರುಗಳ ಸಹಿತ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಲಾಯಿತು.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಬೇರೆಬೇರೆ ಗ್ರಾಮದಿಂದ ರೈತರು ತಮ್ಮ ಸಾಕುಪ್ರಾಣಿಗಳಾದ ದನಕರು, ಹೋರಿ, ಎಮ್ಮೆಗಳ ಸಹಿತ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ರೈತ ಸಂಘದ ಪ್ರಮುಖರು ಮುಖ್ಯಮಂತ್ರಿ ಸಿದ್ದರಾಮಯ್ಯ, ಅರಣ್ಯ ಸಚಿವ ಈಶ್ವರ ಖಂಡ್ರೆ, ಮಧು ಬಂಗಾರಪ್ಪ, ಶಾಸಕ ಬೇಳೂರು ಅವರ ಮುಖವಾಡ ಧರಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡರು. ಇದರ ಜೊತೆಗೆ ಮುಖ್ಯಮಂತ್ರಿಗಳು, ಅರಣ್ಯ ಸಚಿವರು, ಶಾಸಕರ ನಡುವಿನ ಅಣುಕು ಪ್ರದರ್ಶನ ಸಹ ನಡೆಸಿ ಗಮನ ಸೆಳೆದರು.
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ರೈತ ಸಂಘದ ಜಿಲ್ಲಾಧ್ಯಕ್ಷ ದಿನೇಶ್ ಶಿರವಾಳ, ಸಾಕುಪ್ರಾಣಿಗಳನ್ನು ಕಾಡಿನಲ್ಲಿ ಮೇಯಲು ಬಿಡಬಾರದು ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಹೊರಡಿಸಿರುವ ಆದೇಶ ಅತ್ಯಂತ ಅವೈಜ್ಞಾನಿಕವಾಗಿ ನೂರಾರು ವರ್ಷಗಳಿಂದ ರೈತರ ಸಾಕುಪ್ರಾಣಿಗಳು ಕಾಡಿನಲ್ಲಿಯೆ ಮೇಯುವುದು ಸಂಪ್ರದಾಯದAತೆ ಬೆಳೆದು ಬಂದಿದೆ. ಆದರೆ ಅರಣ್ಯ ಸಚಿವರ ನಿರ್ಧಾರ ಆತಂಕಕಾರಿಯಾಗಿದೆ. ಮೇವಿಲ್ಲದೆ ನೂರಾರು ಜಾನುವಾರುಗಳು ನರಳುತ್ತಿದೆ. ಜಾನುವಾರುಗಳನ್ನು ಎಲ್ಲಿ ಮೇಯಿಸಬೇಕು ಎಂದು ರೈತರು ಯೋಚಿಸುತ್ತಿದ್ದಾರೆ. ಮುಂದಿನ ಒಂದು ವರ್ಷದಲ್ಲಿ ಮೇವು ಸಿಗದೆ ಲಕ್ಷಾಂತರ ಜಾನುವಾರುಗಳು ಸಾವನ್ನಪ್ಪುತ್ತದೆ ಎಂದು ವರದಿ ಹೇಳುತ್ತಿದೆ. ಇಂತಹ ಹೊತ್ತಿನಲ್ಲಿ ಸರ್ಕಾರದ ನಿರ್ಧಾರ ಇನ್ನಷ್ಟು ಆತಂಕ ಸೃಷ್ಟಿಸಿದೆ ಎಂದರು.
ಸರ್ಕಾರ ತಕ್ಷಣ ಗೋಮಾಳಗಳನ್ನು ಎಂಪಿಎಂಗೆ ನೀಡಿರುವುದನ್ನು ರದ್ದು ಮಾಡಬೇಕು. ನಡುತೋಪುಗಳನ್ನು ಕಟಾವ್ ಮಾಡಿ ಅಲ್ಲಿ ನೈಸರ್ಗಿಕ ಅರಣ್ಯ ಬೆಳೆಸಬೇಕು. ರೈತರ ಮೇಲೆ ಅರಣ್ಯಾಧಿಕಾರಿಗಳು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ತಕ್ಷಣ ಅರಣ್ಯ ಸಚಿವರು ತಮ್ಮ ಆದೇಶ ಹಿಂದಕ್ಕೆ ಪಡೆಯಬೇಕು. ರೈತರ ಮೇಲೆ ಹಾಕಿರುವ ಕೇಸ್‌ಗಳನ್ನು ರದ್ದು ಮಾಡಿ. ತಕ್ಷಣ ಆದೇಶ ಹಿಂದಕ್ಕೆ ಪಡೆಯದೆ ಹೋದಲ್ಲಿ ರೈತ ಸಂಘ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ರಮೇಶ್ ಕೆಳದಿ, ಡಾ. ರಾಮಚಂದ್ರಪ್ಪ, ಕುಮಾರ್ ಗೌಡ, ಭದ್ರೇಶ್ ಬಾಳಗೋಡು, ಶಿವು ಮೈಲಾರಿಕೊಪ್ಪ, ಚಂದ್ರು ಸಿರಿವಂತೆ, ವ.ಶಂ.ರಾಮಚಂದ್ರ ಭಟ್, ಸುದರ್ಶನ್ ಕೆ.ಎಚ್., ರಾಮಚಂದ್ರ, ಚಂದ್ರಶೇಖರ್ ಇನ್ನಿತರರು ಹಾಜರಿದ್ದರು.
ವ್ಯಾಮೋಹಕ್ಕೆ ಒಳಗಾಗಿ ಶಿಥಿಲವಾದ ಮನೆಗಳಲ್ಲಿ ವಾಸ ಮಾಡಬೇಡಿ: ಶಾಸಕ ಗೋಪಾಲಕೃಷ್ಣ ಬೇಳೂರು ಕಿವಿಮಾತು
‘ಹೋಂ ಸ್ಟೇ ನಿರ್ಮಾಣ’ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್: ಸಹಾಯಧನಕ್ಕೆ ಅರ್ಜಿ ಆಹ್ವಾನ