ಬೆಂಗಳೂರು: ಸರ್ಕಾರಿ ಶಾಲಾ ವಿದ್ಯಾರ್ಥಿಗಳನ್ನು ತಾಂತ್ರಿಕವಾಗಿ ಸದೃಢಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆಯಿಟ್ಟಿದ್ದು, ಇನ್ಮುಂದೆ 1ನೇ ತರಗತಿಯಿಂದಲೇ ಕಂಪ್ಯೂಟರ್ ಶಿಕ್ಷಣವನ್ನು (Computer Education) ಆರಂಭಿಸಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಚಿವರಾದ ಮಧು ಬಂಗಾರಪ್ಪ ತಿಳಿಸಿದರು.
ಇಂದು ನಗರದ ಜವಾಹರಲಾಲ್ ನೆಹರು ತಾರಾಲಯದಲ್ಲಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಆಯೋಜಿಸಿದ್ದ “ಗಗನಯಾತ್ರಿ ಶುಭಾಂಶು ಶುಕ್ಲಾ ವಿದ್ಯಾರ್ಥಿ ಸಂವಾದ” ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ISRO) ಐತಿಹಾಸಿಕ ‘ಗಗನಯಾನ’ ಮಾನವಸಹಿತ ಬಾಹ್ಯಾಕಾಶ ಯೋಜನೆಗೆ ಆಯ್ಕೆಯಾಗಿರುವ ಭಾರತೀಯ ವಾಯುಪಡೆಯ ಪೈಲಟ್, ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ (Group Captain Shubhanshu Shukla) ಅವರ ಉಪಸ್ಥಿತಿಯಲ್ಲಿ ಸಚಿವರು ವಿದ್ಯಾರ್ಥಿಗಳನ್ನ ಉದ್ದೇಶಿಸಿ ಮಾತನಾಡಿದರು.
1ನೇ ತರಗತಿಯಿಂದಲೇ ಕಂಪ್ಯೂಟರ್ ಕಲಿಕೆ:
ಪ್ರಸ್ತುತ ಯುಗವು ಕೃತಕ ಬುದ್ಧಿಮತ್ತೆ (AI) ಮತ್ತು ಕಂಪ್ಯೂಟರ್‌ಗಳ ಯುಗವಾಗಿದೆ. ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ಸರ್ಕಾರಿ ಶಾಲಾ ಮಕ್ಕಳು ಹಿಂದೆ ಉಳಿಯಬಾರದು ಎಂಬ ಉದ್ದೇಶದಿಂದ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ ಎಂದು ಸಚಿವರು ತಿಳಿಸಿದರು.
“900 ಕರ್ನಾಟಕ ಪಬ್ಲಿಕ್ ಶಾಲೆಗಳ ಮೂಲಕ 11 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಒಂದನೇ ತರಗತಿಯಿಂದಲೇ ಕಂಪ್ಯೂಟರ್ ಶಿಕ್ಷಣ ನೀಡಲು ಸಿದ್ಧತೆ ನಡೆಸಿದ್ದೇವೆ. ಶುಕ್ಲಾ ಅವರಂತಹ ಸಾಧಕರ ಕನಸುಗಳನ್ನು ನಮ್ಮ ಮಕ್ಕಳು ಮುಂದುವರಿಸಬೇಕಾದರೆ ಅವರಿಗೆ ಬಾಲ್ಯದಿಂದಲೇ ಭದ್ರ ಬುನಾದಿ ಹಾಕುವುದು ಶಿಕ್ಷಣ ಸಚಿವನಾಗಿ ನನ್ನ ಕರ್ತವ್ಯ,” ಎಂದು ಮಧು ಬಂಗಾರಪ್ಪ ಹೇಳಿದರು.
ಶುಭಾಂಶು ಶುಕ್ಲಾ ಯುವಜನತೆಗೆ ಸ್ಫೂರ್ತಿ:
ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಸಚಿವರು, ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರನ್ನು ಭೇಟಿಯಾಗಿರುವುದು “ಪ್ರಪಂಚದ ತುದಿಯಲ್ಲಿ ನಿಂತ ಅನುಭವ” (Top of the world) ನೀಡುತ್ತಿದೆ ಎಂದರು.
“ಸುಮಾರು 40 ವರ್ಷಗಳ ಹಿಂದೆ ರಾಕೇಶ್ ಶರ್ಮಾ ಅವರು ಬಾಹ್ಯಾಕಾಶಕ್ಕೆ ಹೋದಾಗ ನಮಗೆ ಉಂಟಾದ ರೋಮಾಂಚನವನ್ನು ಶುಕ್ಲಾ ಅವರು ಮತ್ತೆ ನೆನಪಿಸುತ್ತಿದ್ದಾರೆ. ಅಂದು ನಮ್ಮ ದೇಶದ ಜನಸಂಖ್ಯೆ 100 ಕೋಟಿಗಿಂತ ಕಡಿಮೆಯಿತ್ತು, ಇಂದು 140 ಕೋಟಿ ಜನರ ಕನಸನ್ನು ಶುಕ್ಲಾ ಅವರು ಹೊತ್ತು ಸಾಗುತ್ತಿದ್ದಾರೆ. ಲಕ್ನೋದಲ್ಲಿ ಕಷ್ಟಪಟ್ಟು ಓದಿ, ಇಂದು ಈ ಸ್ಥಾನಕ್ಕೆ ಏರಿರುವ ಅವರ ಸಾಧನೆ ಮಕ್ಕಳಿಗೆ ಮಾದರಿಯಾಗಬೇಕು,” ಎಂದು ಸಚಿವರು ಬಣ್ಣಿಸಿದರು.
ವಿದ್ಯಾರ್ಥಿಗಳು ದೊಡ್ಡ ಕನಸುಗಳನ್ನು ಕಾಣಬೇಕು, ಆಕಾಶವೇ ಮಿತಿ (Sky is the limit) ಎಂಬಂತೆ ಸಾಧನೆ ಮಾಡಬೇಕು ಎಂದು ಅವರು ಕರೆ ನೀಡಿದರು.
ವಿದ್ಯಾರ್ಥಿಗಳೊಂದಿಗೆ ಗಗನಯಾತ್ರಿಯ ಸಂವಾದ:
ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರು ಶಾಲಾ ವಿದ್ಯಾರ್ಥಿಗಳೊಂದಿಗೆ ನೇರ ಸಂವಾದ ನಡೆಸಿದರು. ಬಾಹ್ಯಾಕಾಶ, ವಿಜ್ಞಾನ ಮತ್ತು ಪೈಲಟ್ ಜೀವನದ ಕುರಿತು ವಿದ್ಯಾರ್ಥಿಗಳು ಕೇಳಿದ ಕುತೂಹಲಕಾರಿ ಪ್ರಶ್ನೆಗಳಿಗೆ ಶುಕ್ಲಾ ಅವರು ಉತ್ತರಿಸಿದರು.
ಈ ಸಂದರ್ಭದಲ್ಲಿ ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್.ಎಸ್. ಬೋಸರಾಜು, ಎಲೆಕ್ಟ್ರಾನಿಕ್ಸ್, ಐಟಿ-ಬಿಟಿ ಮತ್ತು ವಿಜ್ಞಾನ ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಡಾ. ಮಂಜುಳಾ ಎನ್., ಕೆಎಸ್‌ಟಿಇಪಿಎಸ್ ವ್ಯವಸ್ಥಾಪಕ ನಿರ್ದೇಶಕ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ನಿರ್ದೇಶಕರಾದ ಸದಾಶಿವ ಪ್ರಭು ಬಿ., ಹಾಗೂ ಜವಾಹರಲಾಲ್ ನೆಹರು ತಾರಾಲಯದ ನಿರ್ದೇಶಕರಾದ ಬಿ.ಆರ್. ಗುರುಪ್ರಸಾದ್ ಉಪಸ್ಥಿತರಿದ್ದರು.
ಪೊಲೀಸ್ ಕಸ್ಟಡಿ ಹಿಂಸೆ ಮತ್ತು ಸಾವು ಕಪ್ಪು ಚುಕ್ಕೆ, ದೇಶ ಇದನ್ನು ಸಹಿಸುವುದಿಲ್ಲ: ಸುಪ್ರೀಂ ಕೋರ್ಟ್
ತಾತ್ಕಾಲಿಕ ಸಿಎಂ ಬೇಡ; ರೈತರ ಸಮಸ್ಯೆಗೆ ಸ್ಪಂದಿಸುವ ಮುಖ್ಯಮಂತ್ರಿ ಬೇಕು: ಬಿ.ವೈ.ವಿಜಯೇಂದ್ರ








