ಮಂಡ್ಯ : ಮದ್ದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಪ್ರಗತಿಯಲ್ಲಿರುವ ನೀರಾವರಿ ಯೋಜನೆಗಳ ಕಾಮಗಾರಿಗಳನ್ನು ಆದಷ್ಟು ಶೀಘ್ರವಾಗಿ ಪೂರ್ಣಗೊಳಿಸುವ ಮೂಲಕ ಬೇಸಿಗೆ ಬೆಳೆಗೆ ಯಾವುದೇ ರೀತಿಯ ಲೋಪವಾಗದಂತೆ ರೈತರಿಗೆ ಅನುಕೂಲ ಕಲ್ಪಿಸಬೇಕೆಂದು ಶಾಸಕ ಕೆ.ಎಂ.ಉದಯ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮದ್ದೂರು ತಾಲೂಕಿನ ಕದಲೂರು ಗ್ರಾಮದ ಶಾಸಕ ಕೆ.ಎಂ.ಉದಯ್ ಅವರ ಕಚೇರಿಯಲ್ಲಿ ಸೋಮವಾರ ನಡೆದ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಈಗಾಗಲೇ ಕಾವೇರಿ ನೀರಾವರಿ ನಿಗಮದ ಮೂಲಕ 400 ಕೋಟಿ ಗೂ ಹೆಚ್ಚಿನ ಅನುದಾನದಲ್ಲಿ ಕೆರೆಗಳ ಅಭಿವೃದ್ಧಿ, ನಾಲೆಗಳ ಆಧುನಿಕರಣ ಹಾಗೂ ಹೂಳು ತೆಗೆಯುವ ಕಾಮಗಾರಿ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಾಗಿದೆ. ಹೀಗಾಗಿ ಮುಂಬರುವ ಬೇಸಿಗೆ ಬೆಳೆ ವೇಳೆಗೆ ಕಾಮಗಾರಿಗಳನ್ನು ಪೂರ್ಣಗೊಳಿಸಿ ರೈತರ ಜಮೀನುಗಳಿಗೆ ನೀರು ಸರಾಗವಾಗಿ ಹರಿಯುವಂತೆ ಅಧಿಕಾರಿಗಳಿಗೆ ಕಟ್ಟು ನಿಟ್ಟಿನ ಸೂಚನೆ ನೀಡಿದರು.
ಕ್ಷೇತ್ರದ ವ್ಯಾಪ್ತಿಯಲ್ಲಿ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಆದ್ಯತೆ ನೀಡಿದ್ದು, ಬನ್ನಹಳ್ಳಿ ಸೇರಿದಂತೆ ಹಲವು ಏತ ನೀರಾವರಿ ಯೋಜನೆಗಳ ಕಾಮಗಾರಿಗಳು ಶೀಘ್ರದಲ್ಲೇ ಪೂರ್ಣಗೊಂಡು ರೈತಾಪಿ ಜನತೆಗೆ ಅನುಕೂಲ ಕಲ್ಪಿಸಲಾಗುವುದು ಎಂದರು.
ಬನ್ನಹಳ್ಳಿ ಏತ ನೀರಾವರಿ ಯೋಜನೆಯೂ ಸ್ವಲ್ಪ ವಿಳಂಬವಾಗಿದೆ. ಹೀಗಾಗಿ ವಿದ್ಯುತ್ ಕಾಮಗಾರಿಗೆ 5 ಕೋಟಿ ರೂ.ಗಳ ಅನುದಾನ ಬಿಡುಗಡೆಯಾಗಿದ್ದು, ತುರ್ತಾಗಿ ಪೂರ್ಣಗೊಳಿಸಿ 18 ಕೆರೆಗಳಿಗೆ ನೀರು ತುಂಬಿಸುವ ಮೂಲಕ ರೈತರ ಆರ್ಥಿಕಾಭಿವೃದ್ಧಿಗೆ ಶಕ್ತಿ ಮೀರಿ ಶ್ರಮಿಸಲಾಗುವುದು ಎಂದು ಹೇಳಿದರು.
ಇನ್ನು ಐದು ತಿಂಗಳೊಳಗೆ ನಗರದ ಪೇಟೆ ಬೀದಿ ಅಗಲೀಕರಣ ಕಾಮಗಾರಿ ಆರಂಭವಾಗಲಿದೆ. ಪೇಟೆ ಬೀದಿಯನ್ನು 100 ಅಡಿಗೆ ವಿಸ್ತರಣೆ ಮಾಡಲು ಈ ಹಿಂದೆ ಅನುಮೋದನೆ ಪಡೆಯಲಾಗಿತ್ತು. ಅದರಂತೆ ಸಂಬಂಧಪಟ್ಟ ಆಧಿಕಾರಿಗಳು ಕೂಡ ಡಿಪಿಆರ್ ಕೂಡ ಸಿದ್ಧಪಡಿಸಿದ್ದರು. ಆದರೆ, ಪ್ರವಾಸಿ ಮಂದಿರದಲ್ಲಿ ನಡೆದ ಸಾರ್ವಜನಿಕರ ಸಭೆಯಲ್ಲಿ 80 ಅಡಿಗಳಿಗೆ ವಿಸ್ತರಣೆ ಮಾಡಲು ಒಕ್ಕೋರಲಿನಿಂದ ತೀರ್ಮಾನ ಕೈಗೊಳ್ಳಲಾಯಿತು. ಹೀಗಾಗಿ ಪೇಟೆ ಬೀದಿಯನ್ನು 80 ಅಡಿಗಳಿಗೆ ವಿಸ್ತರಿಸಲು ಡಿಪಿಆರ್ ಸಿದ್ದಪಡಿಸಿ ಶೀಘ್ರವೇ ಸರ್ಕಾರಕ್ಕೆ ಕಳುಹಿಸಲಾಗುವುದು ಎಂದರು. ಹೀಗಾಗಿ, ತಹಸೀಲ್ದಾರ್, ಪೌರಾಯುಕ್ತೆ, ಪಿಡಬ್ಲ್ಯೂಡಿ, ಸರ್ವೆ, ಚೆಸ್ಕಾಂ, ಅರಣ್ಯ ಸೇರಿದಂತೆ ವಿವಿಧ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದೇನೆ, ರಸ್ತೆಯ ವಿನ್ಯಾಸ ಸೇರಿದಂತೆ ಹಲವು ವಿಷಯದ ಬಗ್ಗೆ ಚರ್ಚಿಸಲಾಗಿದೆ ಎಂದರು.
ಮುಂದಿನ ದಿನಗಳಲ್ಲಿ ರಸ್ತೆ ಅಗಲೀಕರಣವಾದ ಜಾಗವನ್ನು ಕಳೆದುಕೊಳ್ಳುವವವರಿಗೆ ಈಗಿರುವ ಮೌಲ್ಯಕ್ಕಿಂತ 2 ಪಟ್ಟು ಪರಿಹಾರ ಹಾಗೂ ತೆರವು ಮಾಡಿಕೊಳ್ಳಲು ಹೆಚ್ಚುವರಿಯಾಗಿ 5ಲಕ್ಷ ರೂ.ಗಳನ್ನು ನೀಡುವುದಾಗಿ ತಿಳಿಸಿದರು. ರಸ್ತೆ ವಿಸ್ತರಣೆ ಕಾಮಗಾರಿ ಶೀಘ್ರವಾಗಿ ಆರಂಭಿಸಬೇಕು ಎಂಬ ಉದ್ದೇಶದಿಂದ ವಿವಿಧ ಇಲಾಖೆಗಳ ಸುಮಾರು 20 ಅಧಿಕಾರಿಗಳು ನಿರಂತರವಾಗಿ ಕೆಲಸ ಮಾಡುತ್ತಿದ್ದು, ಇನ್ನೂ ಐದು ತಿಂಗಳಲ್ಲಿ ಕಾನೂನಾತ್ಮಕವಾಗಿ ಕಾಮಗಾರಿ ಆರಂಭಗೊಳ್ಳಲಿದೆ ಎಂದು ಭರವಸೆ ನೀಡಿದರು.
ಸಭೆಯಲ್ಲಿ ತಹಸೀಲ್ದಾರ್ ಪರಶುರಾಮ್ ಸತ್ತಿಗೇರಿ, ನಗರಸಭೆ ಪೌರಾಯುಕ್ತೆ ರಾಧಿಕಾ, ಲೋಕೋಪಯೋಗಿ ಎಇಇ ದೇವಾನಂದ್, ನೀರಾವರಿ ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ನಾಗರಾಜು ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.
ವರದಿ : ಗಿರೀಶ್ ರಾಜ್, ಮಂಡ್ಯ
BREAKING: ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಿಗೆ ಆಡಳಿತಾಧಿಕಾರಿ ನೇಮಕ ರದ್ದುಗೊಳಿಸಲು ಹೈಕೋರ್ಟ್ ನಕಾರ
BREAKING: ಸಕಲ ಸರ್ಕಾರಿ ಗೌರವಗಳೊಂದಿಗೆ ಶಾಮನೂರು ಶಿವಶಂಕರಪ್ಪ ಅಂತ್ಯಕ್ರಿಯೆ: ಇನ್ನೂ ಕೊಡುಗೈ ದಾನಿ ನೆನಪು ಮಾತ್ರ
ನೀವು ಈ ತಪ್ಪು ಮಾಡ್ತಿದ್ದೀರಾ.? ಎಚ್ಚರ, ನಿಮ್ಮ ‘IRCTC’ ಖಾತೆ ಬ್ಯಾನ್ ಆಗುತ್ತೆ! 3 ಕೋಟಿಗೂ ಹೆಚ್ಚು ಖಾತೆ ನಿರ್ಬಂಧ








