ದುಬೈ : ಕರ್ನಾಟಕದಲ್ಲಿ ನಡೆಯಲಿರುವ ಬೆಂಗಳೂರು ಅಂತಾರಾಷ್ಟ್ರೀಯ ಉದ್ಯೋಗ ಮೇಳದಲ್ಲಿ ಭಾಗವಹಿಸಲು ದುಬೈ ಸೇರಿದಂತೆ ಯುಎಇಯ ಹಲವಾರು ಕಂಪನಿಗಳು ಆಸಕ್ತಿ ತೋರಿವೆ ಎಂದು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಜೀವನೋಪಾಯ ಮತ್ತು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಶರಣಪ್ರಕಾಶ್ ಆರ್. ಪಾಟೀಲ್ ತಿಳಿಸಿದ್ದಾರೆ.
ಜನವರಿ-ಫೆಬ್ರವರಿ 2026 ರಲ್ಲಿ ನಡೆಯಲಿರುವ ಬೆಂಗಳೂರು ಅಂತಾರಾಷ್ಟ್ರೀಯ ಉದ್ಯೋಗ ಮೇಳ ನಡೆಯಲಿವೆ.
ಸಚಿವರಾದ ಶರಣಪ್ರಕಾಶ್ ಪಾಟೀಲ್ ಹಾಗೂ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ನೇತೃತ್ವದಲ್ಲಿ ಗುರುವಾರ ದುಬೈನಲ್ಲಿ ರೋಡ್ ಶೋ ನಡೆಯಿತು.
ಸಾರಿಗೆ, ಮಾನವ ಸಂಪನ್ಮೂಲ ತಂತ್ರಜ್ಞಾನ, ಸಾಫ್ಟ್ ಸೇವೆಗಳು, ಮಾಧ್ಯಮ ತಂತ್ರಜ್ಞಾನ, ಗೇಮಿಂಗ್, ರಿಯಲ್ ಎಸ್ಟೇಟ್, ಇಂಧನ ಮತ್ತು ಸಂಬಂಧಿತ ಆರೋಗ್ಯ ವಿಜ್ಞಾನಗಳಂತಹ ಕ್ಷೇತ್ರಗಳ ಕಂಪನಿಗಳು ಆಸಕ್ತಿಯನ್ನು ತೋರಿಸಿದವು ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ಶಿಕ್ಷಣ ಮತ್ತು ಕೌಶಲ್ಯತೆ ವಿಷಯದಲ್ಲಿ ಕರ್ನಾಟಕ ವಿಶೇಷ ಸಾಮರ್ಥ್ಯ ಹೊಂದಿದೆ. ರಾಜ್ಯದ ಯುವಕರನ್ನು ನೇಮಿಸಿಕೊಳ್ಳಲು ಕಂಪನಿಗಳು ಮುಂದಾಗಬೇಕು ಎಂದು ಮನವಿ ಮಾಡಿದರು.
“ನಮ್ಮ ರಾಜ್ಯದ ಕೌಶಲ್ಯ ಭರಿತ ಪದವೀಧರರು ಜಾಗತಿಕ ಮಟ್ಟದಲ್ಲಿ ಉದ್ಯೋಗ ಪಡೆಯಲು ಅರ್ಹರಾಗಿದ್ದಾರೆ. ನಮ್ಮ ರಾಜ್ಯ ಸರ್ಕಾರ ವಿಶೇಷ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಿದೆ. ಇದರಲ್ಲಿ ಹಲವಾರು ವಿದ್ಯಾರ್ಥಿಗಳು ಪೂರ್ಣ ತರಬೇತಿ ಪಡೆದು ಸಜ್ಜಾಗಿದ್ದಾರೆ ” ಎಂದು ಡಾ. ಪಾಟೀಲ್ ತಿಳಿಸಿದರು.
ದುಬೈ ಮೂಲದ ಉದ್ಯೋಗದಾತರು ಕರ್ನಾಟಕದ ಈ ಪ್ರತಿಭಾವಂತರಿಗೆ ಉದ್ಯೋಗಾವಕಾಶ ಒದಗಿಸಬೇಕು ಎಂದು ಸಚಿವರು ಒತ್ತಾಯಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಸಚಿವ ಡಾ. ಸುಧಾಕರ್, ತಾಂತ್ರಿಕ ಶಿಕ್ಷಣ ಮತ್ತು ಆಧುನಿಕ ಕೌಶಲ್ಯ ಅಭಿವೃದ್ಧಿಯಲ್ಲಿ ನಮ್ಮ ರಾಜ್ಯ ಪ್ರಗತಿಯತ್ತ ಸಾಗಿದೆ. ತಾಂತ್ರಿಕ ತರಬೇತಿಗೆ ಕರ್ನಾಟಕದ ವಿಧಾನವು ಭಾರತದಲ್ಲಿ ಅತ್ಯುತ್ತಮವಾಗಿದೆ. ನಮ್ಮ ರಾಜ್ಯದ ಪ್ರತಿಭಾವಂತರು ಜಾಗತಿಕ ಮಾನದಂಡ ಪೂರೈಸುವ ಐಟಿ ಮತ್ತು ಕೃತಕ ಬುದ್ಧಿಮತ್ತೆ ಕೌಶಲ್ಯ ಕ್ಷೇತ್ರದಲ್ಲಿ ತರಬೇತಿ ಪಡೆದು ಸಜ್ಜಾಗಿದ್ದಾರೆ ಎಂದು ಹೇಳಿದರು.
ದುಬೈನಲ್ಲಿ ನಡೆದ ಕಾರ್ಯಕ್ರಮದ ವೇಳೆ ಹವಾಮಾನ,, ನವೀಕರಿಸಬಹುದಾದ ಇಂಧನ ಮತ್ತು ಸುಸ್ಥಿರತೆ ಹಾಗೂ ಡಿಜಿಟಲೀಕರಣ ಮತ್ತು ಜಾಗತಿಕ ಕೌಶಲ್ಯ ವಿನಿಮಯದ ಕುರಿತು ಉಭಯ ಸಚಿವರು ವಿವಿಧ ಚರ್ಚೆಗಳಲ್ಲಿ ಪಾಲ್ಗೊಂಡರು.
ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ (ಕೆಎಸ್‌ಡಿಸಿ) ಅಧ್ಯಕ್ಷೆ ಶಿವಕಾಂತಮ್ಮ ನಾಯಕ್ ಮತ್ತು ಕೌಶಲ್ಯ ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಮನೋಜ್ ಕುಮಾರ್ ಮೀನಾ, ಕೆಎಸ್‌ಡಿಸಿ ವ್ಯವಸ್ಥಾಪಕ ನಿರ್ದೇಶಕ ಎನ್.ಎಂ. ನಾಗರಾಜ್ ಕೂಡ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ರೈಲುಗಳಲ್ಲಿ ‘ಹಲಾಲ್ ಮಾಂಸ’ ಮಾತ್ರ ಪೂರೈಕೆ ನಿಷೇಧ ; ವರದಿ ಕೋರಿ ರೈಲ್ವೆಗೆ NHRC ನೋಟಿಸ್








