ಬೆಂಗಳೂರು: ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಆಸ್ತಿಗಳಿಗೆ ಇ-ಸ್ವತ್ತು ನೀಡುವ ಸಂಬಂಧದಲ್ಲಿ ಸರ್ಕಾರ ಮಸೂದೆ ಅಂಗೀಕರಿಸಿರುವ ಹಿನ್ನೆಲೆಯಲ್ಲಿ ಇ-ಸ್ವತ್ತು ಪದ್ಧತಿಯಲ್ಲಿಸುಧಾರಣೆ ತರಲು ಹಾಗೂ ಅವಶ್ಯವಿದ್ದಲ್ಲಿ ಸೂಕ್ತ ನೀತಿ ನಿಯಮಗಳನ್ನು ರೂಪಿಸುವ ಸಲುವಾಗಿ ಸಮಿತಿಯೊಂದನ್ನು ರಚಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಸರ್ಕಾರ ಈ ವರ್ಷದ ಜನಸ್ನೇಹಿ ಆಯವ್ಯಯವನ್ನು ಮಂಡಿಸಿದ ನಂತರ ನೂತನ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಜಾರಿಗೆ ತರುವ ಸಂಬಂಧದಲ್ಲಿ ಅಧಿಕಾರಿಗಳ ಸಭೆ ನಡೆಸಿದ ಸಚಿವರು ಈ ಅಂಶವನ್ನು ಪ್ರಕಟಿಸಿದರು.
ಉದ್ದೇಶಿತ ಸಮಿತಿಯಲ್ಲಿ ಅಧಿಕಾರಿಗಳು ಮಾತ್ರವಲ್ಲದೆ ಸಂಬಂಧಿಸಿದ ಕ್ಷೇತ್ರದಲ್ಲಿ ಪರಿಣಿತರಾದ ಅಧಿಕಾರೇತರ ಸದಸ್ಯರೂ ಇರುತ್ತಾರೆ, ಸಮಿತಿಯ ಕಾರ್ಯವ್ಯಾಪ್ತಿ, ಕಾಲಾವಧಿ ಮುಂತಾದ ನಿಯಮಗಳನ್ನು ರೂಪಿಸಿ ಸಮಿತಿಯನ್ನು ರಚಿಸಲಾಗುವುದು ಎಂದೂ ಸಚಿವರು ಸಭೆಗೆ ತಿಳಿಸಿದರು.
ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರೂಪಿಸಲಾದ ಬಡಾವಣೆಗಳಲ್ಲಿ ಹಾಗೂ ಗ್ರಾಮಠಾಣ ಹೊರತು ಪಡಿಸಿದಂತೆ ನಿರ್ಮಿಸಿದ ಕಟ್ಟಡಗಳನ್ನು ಸಕ್ರಮ ಗೊಳಿಸುವ ಸಲುವಾಗಿ ಇ-ಸ್ವತ್ತುಖಾತ ಒದಗಿಸಲು ಅವಕಾಶ ಮಾಡಿಕೊಡುವ ಮಸೂದೆಗೆ ವಿಧಾನಮಂಡಲದ ಉಭಯ ಸದನಗಳೂ ಈಚೆಗೆ ಒಪ್ಪಿಗೆ ನೀಡಿವೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇಂತಹ ಸುಮಾರು 96 ಲಕ್ಷ ಸ್ವತ್ತುಗಳು ಇದೆ ಎಂದು ಅಂದಾಜು ಮಾಡಲಾಗಿದೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಅಂಜುಂ ಪರವೇಜ್, ಪಂಚಾಯತ್ ರಾಜ್ ಆಯುಕ್ತೆ ಅರುಂಧತಿ ಚಂದ್ರಶೇಖರ್, ನರೇಗಾ ವ್ಯವಸ್ಥಾಪಕ ನಿರ್ದೇಶಕ ಪವನ್ ಕುಮಾರ್ ಮಾಲಪಟ್ಟಿ, ಗ್ರಾಮೀಣ ನೀರು ಸರಬರಾಜು ಇಲಾಖೆಯ ನಿರ್ದೇಶಕ ಕೆ.ನಾಗೇಂದ್ರ ಪ್ರಸಾದ್ ಇನ್ನಿತರ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.
BIG NEWS: ರಾಜ್ಯದಲ್ಲಿ ‘ಅಕ್ರಮ ಮರ ಕಡಿತಲೆ’ ಮಾಡೋರಿಗೆ ಶಾಕ್: ದಂಡ, ಶಿಕ್ಷೆ ಪ್ರಮಾಣ ಹೆಚ್ಚಳಕ್ಕೆ ಸಚಿವರ ಸೂಚನೆ