ನವದೆಹಲಿ: ಭಯೋತ್ಪಾದನೆಯು ಮಾನವೀಯತೆಗೆ ಅತಿದೊಡ್ಡ ಬೆದರಿಕೆಯಾಗಿದೆ ಮತ್ತು ಭಯೋತ್ಪಾದಕರು ಮತ್ತು ಅವರ ಬೆಂಬಲಿಗರ ವಿರುದ್ಧ “ದೃಢ ಮತ್ತು ನಿರ್ಣಾಯಕ” ಕ್ರಮ ತೆಗೆದುಕೊಳ್ಳಲು ಭಾರತ ಬದ್ಧವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಹೇಳಿದ್ದಾರೆ.
ಅಂಗೋಲಾ ಅಧ್ಯಕ್ಷ ಜೊವಾವೊ ಮ್ಯಾನುಯೆಲ್ ಗೊನ್ಕಾಲ್ವೆಸ್ ಲೌರೆಂಕೊ ಅವರೊಂದಿಗೆ ವ್ಯಾಪಕ ಮಾತುಕತೆ ನಡೆಸಿದ ನಂತರ ಅವರು ಈ ಹೇಳಿಕೆ ನೀಡಿದ್ದಾರೆ. ಆಫ್ರಿಕಾ ರಾಷ್ಟ್ರಕ್ಕೆ 200 ಮಿಲಿಯನ್ ಡಾಲರ್ ರಕ್ಷಣಾ ಸಾಲವನ್ನು ಮೋದಿ ಘೋಷಿಸಿದರು.
ಪಾಕಿಸ್ತಾನದಿಂದ ಆಮದನ್ನು ಸಂಪೂರ್ಣವಾಗಿ ನಿಷೇಧಿಸುವುದು, ಆ ದೇಶದಿಂದ ಎಲ್ಲಾ ಅಂಚೆ ಸೇವೆಗಳನ್ನು ಸ್ಥಗಿತಗೊಳಿಸುವುದು ಮತ್ತು ಭಾರತೀಯ ಬಂದರುಗಳಲ್ಲಿ ಪಾಕಿಸ್ತಾನ ಧ್ವಜ ಹೊಂದಿರುವ ಹಡಗುಗಳ ಪ್ರವೇಶವನ್ನು ನಿಷೇಧಿಸುವುದು ಸೇರಿದಂತೆ ಪಾಕಿಸ್ತಾನದ ವಿರುದ್ಧ ಹೊಸ ದಂಡನಾತ್ಮಕ ಕ್ರಮಗಳನ್ನು ಭಾರತ ಘೋಷಿಸಿದ ನಂತರವೂ ಭಯೋತ್ಪಾದನೆಯನ್ನು ಬಲವಾಗಿ ಎದುರಿಸುವ ಬಗ್ಗೆ ಅವರ ಪ್ರತಿಪಾದನೆ ಬಂದಿದೆ.
“ಭಯೋತ್ಪಾದನೆ ಮಾನವೀಯತೆಗೆ ಅತಿದೊಡ್ಡ ಬೆದರಿಕೆಯಾಗಿದೆ ಎಂದು ನಾವು ಸರ್ವಾನುಮತದಿಂದ ಹೇಳುತ್ತೇವೆ. ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟವರಿಗೆ ಸಂತಾಪ ಸೂಚಿಸಿದ್ದಕ್ಕಾಗಿ ಅಧ್ಯಕ್ಷ ಲೌರೆಂಕೊ ಮತ್ತು ಅಂಗೋಲಾ ಅವರಿಗೆ ನನ್ನ ಕೃತಜ್ಞತೆಯನ್ನು ಅರ್ಪಿಸುತ್ತೇನೆ” ಎಂದು ಮೋದಿ ತಮ್ಮ ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
“ಭಯೋತ್ಪಾದಕರು ಮತ್ತು ಅವರನ್ನು ಬೆಂಬಲಿಸುವವರ ವಿರುದ್ಧ ದೃಢವಾದ ಮತ್ತು ನಿರ್ಣಾಯಕ ಕ್ರಮ ತೆಗೆದುಕೊಳ್ಳಲು ನಾವು ಬದ್ಧರಾಗಿದ್ದೇವೆ. ಗಡಿಯಾಚೆಗಿನ ಭಯೋತ್ಪಾದನೆಯ ವಿರುದ್ಧದ ನಮ್ಮ ಹೋರಾಟದಲ್ಲಿ ಅಂಗೋಲಾ ನೀಡಿದ ಬೆಂಬಲಕ್ಕಾಗಿ ನಾವು ಧನ್ಯವಾದಗಳನ್ನು ಅರ್ಪಿಸುತ್ತೇವೆ” ಎಂದು ಅವರು ಹೇಳಿದರು.