ಧಾರವಾಡ: ವಕೀಲರ ಆರೋಗ್ಯ ವಿಮೆ ಕೊಡದ ಆದಿತ್ಯಾ ಬಿರ್ಲಾ ವಿಮಾ ಕಂಪನಿಗೆ ದಂಡ ವಿಧಿಸಿ ಮತ್ತು ಪರಿಹಾರ ನೀಡಲು ಜಿಲ್ಲಾ ಗ್ರಾಹಕರ ಆಯೋಗ ಆದೇಶಿಸಿದೆ.
ಧಾರವಾಡದ ಮುರಗಾಮಠದ ಹತ್ತಿರದ ನಿವಾಸಿ ಸ್ಥಳೀಯ ವಕೀಲರಾದ ಚೇತನಕುಮಾರ ಈಟಿರವರು ರೂ.23,999 ಹಣಕೊಟ್ಟು ಹೊಸ ಮೊಬೈಲನ್ನು ಬಜಾಜ್ ಫೈನಾನ್ಸ್ ಕಂಪನಿಯಲ್ಲಿ ಲೋನ್ ಮಾಡಿ ಖರೀದಿಸಿದ್ದರು. ಆ ಮೊಬೈಲನ್ನು ಆದಿತ್ಯಾ ಬಿರ್ಲಾ ವಿಮಾ ಕಂಪನಿಯಲ್ಲಿ ರೂ.1 ಲಕ್ಷಕ್ಕೆ ಗ್ರೂಪ್ ಹೆಲ್ತ್ ವಿಮೆಯನ್ನು ಮಾಡಿಸಿದ್ದರು.
ದಿ:23/02/2023 ರಂದು ದೂರುದಾರರು ತಮ್ಮ ಮನೆಯಲ್ಲಿ ಅಕಸ್ಮಾತಾಗಿ ಬಿದ್ದು ಕಾಲು ನೋವಿನಿಂದ ಧಾರವಾಡದ ಮಾಳವ್ಮಡ್ಡಿಯ ಚಿರಾಯು ಮಲ್ಟಿಸ್ಪೆಶಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಅದಕ್ಕಾಗಿ ಅವರು ರೂ.1,25,000 ಆಸ್ಪತ್ರೆಯ ಖರ್ಚನ್ನು ಭರಿಸಿದ್ದರು. ಚಿಕಿತ್ಸೆಯ ನಂತ್ರ ವಿಮಾ ಪಾಲಸಿಯ ಕರಾರಿನಂತೆ ತಮ್ಮ ಆಸ್ಪತ್ರೆಯ ಖರ್ಚನ್ನು ಕೊಡುವಂತೆ ಆದಿತ್ಯಾ ಬಿರ್ಲಾ ಆರೋಗ್ಯ ವಿಮಾ ಕಂಪನಿಗೆ ಎಲ್ಲ ದಾಖಲೆಗಳೊಂದಿಗೆ ಕ್ಲೇಮು ಹಾಕಿದ್ದರು. ಯಾವುದೇ ಸಕಾರಾಣ ನೀಡದೇ ಎದುರುದಾರ ವಿಮಾ ಕಂಪನಿಯವರು ದೂರುದಾರರ ಕ್ಲೇಮನ್ನು ನಿರಾಕರಿಸಿದ್ದರು. ಅಂತಹ ವಿಮಾ ಕಂಪನಿಯವರ ನಡವಳಿಕೆ ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಅಂತ ಹೇಳಿ ವಿಮಾ ಕಂಪನಿಯವರ ಮೇಲೆ ಕ್ರಮಕೈಗೊಂಡು ಹಾಗೂ ತನಗೆ ಪರಿಹಾರ ಕೊಡಿಸಬೇಕೆಂದು ದೂರುದಾರ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದಿ:06/10/2023 ರಂದು ದೂರನ್ನು ಸಲ್ಲಿಸಿದ್ದರು.
ಸದರಿ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗ ಅಧ್ಯಕ್ಷರಾದ ಈಶಪ್ಪ ಭೂತೆ ಹಾಗೂ ವಿಶಾಲಾಕ್ಷಿ. ಅ. ಬೋಳಶೆಟ್ಟಿ ಸದಸ್ಯರು, ದೂರುದಾರ ತನ್ನ ಮೊಬೈಲ ಮೇಲೆ ಎದುರುದಾರ ವಿಮಾ ಕಂಪನಿಯಿಂದ ರೂ. 1 ಲಕ್ಷ ಮೊತ್ತಕ್ಕೆ ಆರೋಗ್ಯ ವಿಮೆ ಮಾಡಿಸಿದ್ದಾರೆ. ಆ ವಿಮಾ ಅವಧಿ ಚಾಲ್ತಿಯಿರುವಾಗ ದೂರುದಾರ ದಿ:23/02/2023 ರಂದು ಅಕಸ್ಮಾತಾಗಿ ಬಿದ್ದು ಕಾಲಿಗೆ ಪೆಟ್ಟು ಮಾಡಿಕೊಂಡಿದ್ದಾರೆ. ಅದಕ್ಕಾಗಿ ಅವರು ಧಾರವಾಡದ ಚಿರಾಯು ಆಸ್ಪತ್ರೆಯಲ್ಲಿ ರೂ.1,25,000 ಖರ್ಚು ಮಾಡಿ ಚಿಕಿತ್ಸೆ ಪಡೆದಿದ್ದಾರೆ.
ಆ ಚಿಕಿತ್ಸಾ ವೆಚ್ಚದ ಹಣ ಸಂದಾಯ ಮಾಡುವುದು ಎದುರುದಾರ ಆದಿತ್ಯಾ ಬಿರ್ಲಾ ವಿಮಾ ಕಂಪನಿಯ ಕರ್ತವ್ಯವಾಗಿದೆ. ಆದರೆ ಆರೋಗ್ಯ ವಿಮಾ ಪರಿಹಾರ ನಿರಾಕರಿಸಿ ಎದುರುದಾರರು ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಎಸಗಿದ್ದಾರೆ ಅಂತ ಅಭಿಪ್ರಾಯಪಟ್ಟು ಆಯೋಗ ತೀರ್ಪು ನೀಡಿದೆ.
ವಿಮಾ ಪಾಲಸಿ ನಿಯಮದಂತೆ ಎದುರುದಾರ ಆದಿತ್ಯ ಬಿರ್ಲಾ ವಿಮಾ ಕಂಪನಿಯವರು ದೂರುದಾರರಿಗೆ ರೂ.1 ಲಕ್ಷ ಆರೋಗ್ಯ ವಿಮಾ ಪರಿಹಾರ ತೀರ್ಪು ನೀಡಿದ 30 ದಿವಸಗಳೊಳಗಾಗಿ ಸಂದಾಯ ಮಾಡುವಂತೆ ಆದೇಶಿಸಿದೆ. ದೂರುದಾರರಿಗೆ ಆಗಿರುವ ಅನಾನುಕೂಲ ಮತ್ತು ಮಾನಸಿಕ ತೊಂದರೆಗಾಗಿ ರೂ.25,000 ಪರಿಹಾರ ಮತ್ತು ಪ್ರಕರಣದ ಖರ್ಚು ವೆಚ್ಚ ರೂ.10,000 ದೂರುದಾರರಿಗೆ ಕೊಡುವಂತೆ ಬಿರ್ಲಾ ವಿಮಾ ಕಂಪನಿಗೆ ಆಯೋಗ ನಿರ್ದೇಶಿಸಿದೆ.
ಅಪಘಾತದಲ್ಲಿ ಮೃತಪಟ್ಟ BMTC ನೌಕರರ ಕುಟುಂಬಕ್ಕೆ 1 ಕೋಟಿ ಪರಿಹಾರ ವಿಮೆ ವಿತರಣೆ