ಬೆಂಗಳೂರು: ಪರಿಸರ ಅಭಿವೃದ್ಧಿ ಮತ್ತು ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ ಹಾಗೂ ವಡ್ಡರ್ಸೆ ರಘುರಾಮ ಶೆಟ್ಟಿ ಪ್ರಶಸ್ತಿ ಪ್ರದಾನಕ್ಕೆ ದಿನಾಂಕ ನಿಗದಿ ಮಾಡಲು ಕ್ರಮ ವಹಿಸಲಾಗಿದೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಅವರು ತಿಳಿಸಿದ್ದಾರೆ.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (ಕೆಯುಡಬ್ಲೂಜೆ)ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರು ವಿಧಾನಸೌಧದಲ್ಲಿ ಪ್ರಭಾಕರ್ ಅವರನ್ನು ಭೇಟಿ ಮಾಡಿ ವಾರ್ತಾ ಇಲಾಖೆಯಿಂದ ಪ್ರತಿ ವರ್ಷ ಕೊಡ ಮಾಡುವ ಈ ಪ್ರಶಸ್ತಿಗಳು ಕಳೆದ 7 ವರ್ಷಗಳಿಂದ ಬಾಕಿ ಉಳಿದಿವೆ ಎನ್ನುವುದನ್ನು ಗಮನಕ್ಕೆ ತಂದರು.
ಪ್ರಶಸ್ತಿ ಪುರಸ್ಕೃತರ ಆಯ್ಕೆ ಪ್ರಕ್ರಿಯೆ ಮುಗಿದು ಈಗಾಗಲೇ 8 ತಿಂಗಳಾಗಿದ್ದರೂ ಪ್ರಶಸ್ತಿ ಪ್ರದಾನಕ್ಕೆ ದಿನಾಂಕ ನಿಗಧಿಯಾಗಿಲ್ಲ. ಮುಂದೆ ಈ ರೀತಿ ಆಗದಂತೆ ಆಯಾ ವರ್ಷದ ಪ್ರಶಸ್ತಿಯನ್ನು ಆಯಾ ವರ್ಷವೇ ಪ್ರದಾನ ಮಾಡಲು ಕ್ರಮ ವಹಿಸಬೇಕು ಎಂದು ಮನವಿ ಮಾಡಿದರು.
ಈ ತಿಂಗಳ 19ರಂದು ಪ್ರಶಸ್ತಿ ಪ್ರದಾನ ಮಾಡಲು ಮುಖ್ಯಮಂತ್ರಿಗಳ ದಿನಾಂಕ ನಿಗದಿಗೊಳಿಸಲು ತಿಳಿಸಲಾಗಿದೆ. ಮುಂದೆ ಆಯಾ ವರ್ಷವೇ ಪ್ರಶಸ್ತಿ ಪ್ರದಾನ ಮಾಡಲು ಕ್ರಮ ವಹಿಸಲಾಗುವುದು ಎಂದು ಪ್ರಭಾಕರ್ ಅವರು ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಆರೋಗ್ಯ ಸಂಜೀವಿನಿ ಯೋಜನೆಯನ್ನು ಎಲ್ಲ ಪತ್ರಕರ್ತರಿಗೂ ವಿಸ್ತರಿಸಿ ಆದಷ್ಟು ಬೇಗ ಜಾರಿಗೊಳಿಸಬೇಕು. ಗ್ರಾಮೀಣ ಪತ್ರಕರ್ತರ ಬಸ್ ಪಾಸ್ ಷರತ್ತು ಸಡಿಲಿಸಬೇಕು ಎಂದು ಒತ್ತಾಯಿಸಿದ ಮನವಿಯನ್ನು ಇದೇ ಸಂದರ್ಭದಲ್ಲಿ ಸಲ್ಲಿಸಲಾಯಿತು.
ಹಿರಿಯ ಪತ್ರಕರ್ತರುಗಳಾದ ರಮೇಶ ಹಿರೇಜಂಬೂರ, ಸುಂದರೇಶ್ ಜೊತೆಯಲ್ಲಿದ್ದರು.
EVM ಬಗ್ಗೆ ಸಂಶಯವಿದ್ದರೇ ನೀವು ಅಸೆಂಬ್ಲಿ ವಿಸರ್ಜಿಸಿ ಚುನಾವಣೆ ಎದುರಿಸಿ: ಬಿಜೆಪಿ ಶಾಸಕ ಎಸ್.ಸುರೇಶ್ ಕುಮಾರ್ ಆಗ್ರಹ