ಬೆಂಗಳೂರು: ರಾಜ್ಯದ ಮುಖ್ಯಮಂತ್ರಿಗಳ ಮತ್ತು ಉಪ ಮುಖ್ಯಮಂತ್ರಿಗಳ ಕುರ್ಚಿ ಗುದ್ದಾಟದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಎಳ್ಳುನೀರು ಬಿಟ್ಟಿದ್ದಾರೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಟೀಕಿಸಿದ್ದಾರೆ.
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಯಾವುದೇ ಕಾರ್ಯಕ್ರಮಗಳು ನಡೆಯುತ್ತಿಲ್ಲ; ಪರಿಶಿಷ್ಟ ಜಾತಿ, ವರ್ಗಗಳಿಗೆ ಇಟ್ಟ ಹಣ ಸಂಪೂರ್ಣ ಪೋಲಾಗಿದೆ. ಈ ವರ್ಷದಲ್ಲಿ ಅವರಿಗೆ ಇಟ್ಟ ಹಣದ ಒಂದು ರೂಪಾಯಿಯೂ ಬಿಡುಗಡೆ ಆಗಿಲ್ಲ ಎಂದು ಆಕ್ಷೇಪಿಸಿದರು.
ಪರಿಸ್ಥಿತಿ ಇಷ್ಟೊಂದು ಹದಗೆಟ್ಟಿದೆ. ಗ್ಯಾರಂಟಿ ಹಣ ಸಕಾಲದಲ್ಲಿ ಜನರನ್ನು ತಲುಪುತ್ತಿಲ್ಲ. ನರೇಗಾದಡಿ ಕೆಲಸ ಆಗಿ ಆರು ತಿಂಗಳಾದರೂ ಪಾವತಿ ಮಾಡಲು ಸರಕಾರಕ್ಕೆ ಆಗುತ್ತಿಲ್ಲ; ಪ್ರತಿಯೊಂದಕ್ಕೂ ಕೇಂದ್ರ ಸರಕಾರದ ಮೇಲೆ ಆಪಾದನೆ ಮಾಡುತ್ತಾರೆ; ಆದರೆ, ಈ ವಿಷಯದಲ್ಲಿ ಹಣ ಕೊಡಬೇಕಾಗಿಲ್ಲ. ಎಲ್ಲವೂ ಬಂದಿದೆ ಎಂದು ತಿಳಿಸಿದರು. ರಾಜಕಾರಣಕ್ಕಾಗಿ ಕೇಂದ್ರದ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ದೂರಿದರು.
5 ವರ್ಷವೂ ನಾನೇ ಮುಖ್ಯಮಂತ್ರಿ, 2028ರ ನಂತರವೂ ನಾನೇ ಎಂದು ಸಿದ್ದರಾಮಯ್ಯನವರು ಏರುಧ್ವನಿಯಲ್ಲಿ ಹೇಳಿದ್ದಾರೆ. 2015ರಲ್ಲೇ ಮುಂದಿನ ಚುನಾವಣೆಯಲ್ಲಿ ನನ್ನ ಸ್ಪರ್ಧೆ ಇಲ್ಲ ಎಂದಿದ್ದರು. ಇವರು ಸುಳ್ಳು ಹೇಳುತ್ತಾರೆಂದು ಗೊತ್ತಾಗಿದೆ. ಸ್ವಂತ ಕ್ಷೇತ್ರದಲ್ಲಿ ಸೋತಿದ್ದರು. ಬಾದಾಮಿಗೆ ಓಡಿ ಹೋಗಿ ಅಲ್ಪಮತದಲ್ಲಿ ಬಚಾವ್ ಆಗಿದ್ದರು ಎಂದು ವಿವರಿಸಿದರು. 2023ರಲ್ಲಿ ಸ್ಪರ್ಧಿಸಿದ್ದರು. ಮತ್ತೆ ಇನ್ಯಾವ ಚುನಾವಣೆಯಲ್ಲೂ ಸ್ಪರ್ಧೆ ಮಾಡುವುದಿಲ್ಲ ಎಂದಿದ್ದರು ಎಂದರು.
ಡಿ.ಕೆ.ಶಿವಕುಮಾರ್ ಟವೆಲ್ಲೇ ನಾಪತ್ತೆ..
ಪ್ರಶ್ನೆಗೆ ಉತ್ತರ ಕೊಟ್ಟ ಅವರು, ಈಗ ಡಿ.ಕೆ.ಶಿವಕುಮಾರ್ ಸಿಎಂ ಆಗುವುದು ಕಷ್ಟ; ಪಾಪ ಹೆಚ್ಚುಕಡಿಮೆ ಅವರಿಗೂ ಎಳ್ಳು ನೀರು ಬಿಟ್ಟಂತಾಗಿದೆ. ಎಂಥ ಅನ್ಯಾಯ ಪಾಪ ಅಲ್ಲವೇ ಎಂದು ಛಲವಾದಿ ನಾರಾಯಣಸ್ವಾಮಿ ಅವರು ಹೇಳಿದರು.
ಎರಡೂವರೆ ವರ್ಷ ಮುಖ್ಯಮಂತ್ರಿ ಎಂದು ಇಲ್ಲಿನವರೆಗೆ ಬರುತ್ತಿತ್ತು. ಪಾಪ ಡಿ.ಕೆ.ಶಿವಕುಮಾರ್ ಟವೆಲ್ ಹಾಕಿದ್ದೇ ಹಾಕಿದ್ದು. ಆ ಟವೆಲ್ಲೇ ನಾಪತ್ತೆಯಾಗಿ ಬಿಡುತ್ತಿತ್ತು ಎಂದು ಹೇಳಿದರು. ಕಾಂಗ್ರೆಸ್‍ನಲ್ಲಿ ನಾಯಕತ್ವ ಬದಲಾವಣೆ ನಮ್ಮ ಕಾರಣಕ್ಕಲ್ಲ. ಅವರು ಆದರೇನು ಬಿಟ್ಟರೇನು? ಕಾಂಗ್ರೆಸ್ ಶಾಸಕರೇ ಮುಖ್ಯಮಂತ್ರಿಗಳ ವಿರುದ್ಧವಾಗಿ ಭ್ರಷ್ಟಾಚಾರದಿಂದ ಆರಂಭಿಸಿ ಅವರ ಮಾನಸಿಕ ಸ್ಥಿತಿಯೂ ಸರಿ ಇಲ್ಲ, ಅವರು ರಾಜೀನಾಮೆ ಕೊಟ್ಟು ಮನೆಯಲ್ಲಿರಲಿ ಎಂದಿದ್ದಾರೆ ಎಂದು ಗಮನ ಸೆಳೆದರು.
ಸಿದ್ದರಾಮಯ್ಯನವರೇ ಕಾಂಗ್ರೆಸ್ ಹೈಕಮಾಂಡ್..
ರಾಜಣ್ಣನವರು ಸೆಪ್ಟೆಂಬರ್‍ನಲ್ಲಿ ಕ್ರಾಂತಿಯ ಮಾತನಾಡಿದರು. ನವೆಂಬರ್‍ನಲ್ಲಿ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಶಿವಕುಮಾರರ ಕಡೆಯವರು ಹೇಳಿದರು. ಇವತ್ತು ಸಿದ್ದರಾಮಯ್ಯನವರು 5 ವರ್ಷಕ್ಕೂ ನಾನೇ; 2028ಕ್ಕೂ ನಾನೇ ಎಂದಿದ್ದಾರೆ ಎಂದು ತಿಳಿಸಿದರು. ಇದನ್ನು ದೆಹಲಿಯ ಹೈಕಮಾಂಡ್ ಮುಂದೆ ಕುಳಿತು ಹೇಳಿದ್ದಾರೆ. ಅಂದ ಮೇಲೆ ಇವರ ಹೈಕಮಾಂಡ್ ಬದುಕಿದೆಯೇ ಎಂದು ಕೇಳಿದರು. ಕಾಂಗ್ರೆಸ್ ಹೈಕಮಾಂಡ್ ಯಾರೆಂದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಬಹಳ ಜನರು ಹೇಳುತ್ತಾರೆ ಎಂದು ತಿಳಿಸಿದರು. ಸಿದ್ದರಾಮಯ್ಯ ಅವರು ಏನು ಮಾತನಾಡಿದರೂ ಅದನ್ನು ಎಐಸಿಸಿಯವರು ಕೇಳಲೇಬೇಕು ಎಂಬಂತಾಗಿದೆ ಎಂದು ವಿಶ್ಲೇಷಿಸಿದರು. ಸಿದ್ದರಾಮಯ್ಯರನ್ನು ಮುಟ್ಟಿದರೆ ಕಾಂಗ್ರೆಸ್ ಇಲ್ಲಿ ಉಳಿಯುವುದಿಲ್ಲ ಎಂಬ ಪರಿಸ್ಥಿತಿ ಇದೆ. ಇದು ಕೋಮಾ ಸ್ಥಿತಿಯಲ್ಲಿರುವ ಕಾಂಗ್ರೆಸ್ ಹೈಕಮಾಂಡಿಗೂ ಗೊತ್ತಾಗಿದೆ ಎಂದು ವಿವರಿಸಿದರು.