ಬೆಂಗಳೂರು: ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಕಂಪನಿಗಳ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ. ಈ ಬೆನ್ನಲ್ಲೇ ಮೈಕ್ರೋ ಫೈನಾನ್ಸ್ ಕಂಪನಿಗಳಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಖಡಕ್ ವಾರ್ನಿಂಗ್ ನೀಡಿದ್ದಾರೆ.
ಇಂದು ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಕಂಪನಿಗಳ ಕಾರ್ಯಾಚರಣೆ ಮತ್ತು ಪರಿಣಾಮಗಳ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೃಹ ಕಚೇರಿ ಕೃಷ್ಣದಲ್ಲಿ ಸಭೆ ನಡೆಸಿದರು. ಮೈಕ್ರೋ ಫೈನಾನ್ಸ್ ಕಂಪನಿಗಳ ಬಗ್ಗೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದೇವೆ. ಹೊಸ ಕಾನೂನು ಜಾರಿಗೆ ನಿರ್ಧಾರ ಕೈಗೊಳ್ಳಲಾಗಿದೆ ಎಂಬುದಾಗಿ ಹೇಳಿದ್ದಾರೆ.
ಅನಧಿಕೃತವಾಗಿ ವ್ಯವಹಾರ ನಡೆಸುತ್ತಿರುವಂತ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ಹೊಸ ಕಾನೂನನ್ನು ಕೂಡಲೇ ಜಾರಿಗೊಳಿಸುತ್ತೇವೆ. ಮೆಕ್ರೋ ಫೈನಾನ್ಸ್ ಅಟ್ಟಹಾಸಕ್ಕೆ ಬ್ರೇಕ್ ಹಾಕಲಿದ್ದೇವೆ ಎಂಬುದಾಗಿ ತಿಳಿಸಿದ್ದಾರೆ.
ಮೈಕ್ರೋ ಫೈನಾನ್ಸ್ ಗಳು ಆರ್ ಬಿ ಐ ನಿಯಮಗಳ ಅಡಿಯಲ್ಲಿ ಬರುತ್ತವೆ. ಹೀಗಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಸಲಹೆ ಪಡೆಯುತ್ತೇವೆ. ಸಾಲ ಕೊಡಬೇಡಿ ಎಂದು ಯಾರಿಗೂ ಹೇಳುವುದಿಲ್ಲ. ಆದರೇ ವಸೂಲಿ ಮಾಡುವಾಗ ಕಿರುಕುಳ ಕೊಡಬಾರದು. ಆರ್ ಬಿ ಐ ನಿಯಮದಂತೆ ನಡೆದುಕೊಳ್ಳಬೇಕು. ಸಂಜೆ 5 ಗಂಟೆಯ ನಂತ್ರ ಸಾಲ ವಸೂಲಾಗಿಗೆ ಹೋಗಬಾರದು. ಸಾಲ ವಸೂಲಾತಿಗಾಗಿ ಔಟ್ ಸೋರ್ಸ್ ನೀಡಬಾರದು ಎಂದರು.
ಮೈಕ್ರೋ ಫೈನಾನ್ಸ್ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಭೆಯ ಮುಂದಿಟ್ಟ ಖಾರವಾದ ಪ್ರಶ್ನೆಗಳು
ನಿಮ್ಮ ಸಿಬ್ಬಂದಿ ನಿಯಮ ಬಾಹಿರವಾಗಿ ಸಾಲ ವಸೂಲಿಗೆ ಇಳಿಯುತ್ತಿರುವುದನ್ನು ನಿಯಂತ್ರಿಸಲು ಏನು ಮಾಡಿದ್ದೀರಿ? ಅಂಥಾ ಸಿಬ್ಬಂದಿ ವಿರುದ್ಧ ನಿಮ್ಮ ಸಂಸ್ಥೆಗಳಿಂದ ಏನು ಕ್ರಮ ಕೈಗೊಂಡಿದ್ದೀರಿ: ನೋಂದಣಿ ಆಗಿ ಪರವಾನಗಿ ಪಡೆದಿರುವ ಮೈಕ್ರೋ ಫೈನಾನ್ಸ್ ಕಂಪನಿಗಳ ಮುಖ್ಯಸ್ಥರನ್ನು ಖಾರವಾಗಿ ಪ್ರಶ್ನಿಸಿದ ಸಿ.ಎಂ ಸಿದ್ದರಾಮಯ್ಯ.
*ಸಾಲಗಾರರ ಮನೆ ಜಪ್ತಿ ಮಾಡುವ ಮೊದಲು ನೀವು ನ್ಯಾಯಾಲಯದಿಂದ ಅನುಮತಿ ಪಡೆದಿದ್ದೀರಾ?
*ಕಾನೂನು ಕೈಗೆತ್ತಿಕೊಳ್ಳಲು ನಿಮ್ಮ ಸಿಬ್ಬಂದಿಗೆ ಅನುಮತಿ ಕೊಟ್ಟವರು ಯಾರು?
*ಸಾಲ ವಸೂಲಿಗೆ ರೌಡಿಗಳನ್ನು ಬಳಸುತ್ತಿದ್ದೀರಾ ?
*ರಿಸರ್ವ್ ಬ್ಯಾಂಕಿನ ಷರತ್ತು ಮತ್ತು ನಿಬಂಧನೆಗಳನ್ನು ಸಾಲಗಾರರಿಗೆ ಅವರ ಆಡು ಭಾಷೆಯಲ್ಲಿ ಅರ್ಥ ಮಾಡಿಸಿದ್ದೀರಾ?
*RBI ನಿಯಮ ಮೀರಿ ಸಾಲ ಕೊಡುತ್ತಿದ್ದೀರಾ ? ಮರುಪಾವತಿಯ ಕೆಪಾಸಿಟಿ ಗಮನಿಸದೆ ಒಬ್ಬರೇ ಸಾಲಗಾರರಿಗೆ ಪದೇ ಪದೇ ಸಾಲ ಕೊಡುತ್ತಿರುವುದು ಏಕೆ?
*ಸಾಲಗಾರರಿಗೆ ಸಾಲ ಕೊಡುವ ಮೊದಲು ಆಧಾರ್ KYC ಮಾಡಿಸುತ್ತಿಲ್ಲ ಏಕೆ ? ಇದನ್ನು ಮಾಡಿಸಿದ್ದರೆ ಒಬ್ಬರೇ ಸಾಲಗಾರರಿಗೆ ಪದೇ ಪದೇ ಸಾಲ ಕೊಡುವುದು ತಪ್ಪುತ್ತಿತ್ತು
*ನಿಮ್ಮ ವ್ಯವಹಾರ ಹೆಚ್ಚಿಸಿಕೊಳ್ಳಲು ನಿಯಮ ಮೀರಿ ಒಬ್ಬರೇ ಸಾಲಗಾರರಿಗೆ ಮೇಲಿಂದ ಮೇಲೆ ಸಾಲ ಕೊಡುತ್ತಿದ್ದೀರಿ. ಸಾಲ ತೀರಿಸಲು ಸಾಧ್ಯವಾಗದಿದ್ದಾಗ ನಿಯಮ ಬಾಹಿರ ಕ್ರಮಕ್ಕೆ ಮುಂದಾಗುತ್ತಿದ್ದೀರಿ. ಇದನ್ನು ನಮ್ಮ ಸರ್ಕಾರ ಸಹಿಸುವುದಿಲ್ಲ.
*ಆರ್ ಬಿ ಐ ನಿಯಮಗಳನ್ನು ಉಲ್ಲಂಘಿಸಿ ಸಾಲ ನೀಡಿದ ಮೈಕ್ರೋ ಫೈನಾನ್ಸ್ ಕಂಪನಿಗಳ ಪರವಾನಗಿ ರದ್ದುಗೊಳಿಸಲು ಏನು ಕ್ರಮ ಕೈಗೊಂಡಿದ್ದೀರಿ?: ಆರ್ ಬಿ ಐ ಅಧಿಕಾರಿಗಳಿಗೆ ಪ್ರಶ್ನಿಸಿದ ಸಿಎಂ.
ಒಬ್ಬರೇ ಸಾಲಗಾರರು ಬೇರೆ ಬೇರೆ ಗುರಿತಿನ ಚೀಟಿ ( ಐ ಡಿ ಕಾರ್ಡ್ ಗಳು) ಕೊಟ್ಟು ಸಾಲ ಪಡೆದಿರುವುದು ನಿಮ್ಮ ದಾಖಲೆಗಳಲ್ಲಿದೆ. ಆದರೆ ಸಾಲಗಾರರು ಈ ರೀತಿ ದುರುಪಯೋಗ ಪಡಿಸಿಕೊಳ್ಳುವುದನ್ನು ತಪ್ಪಿಸಲು ಯಾವ ಪದ್ಧತಿ ಪಾಲಿಸುತ್ತಿದ್ದೀರಿ: ಕಂಪನಿಗಳಿಗೆ ಕೇಳಿದ ಸಿಎಂ
*ಆರ್ ಬಿ ಐ ಪರವಾನಗಿ ಪಡೆದಿರುವ ಕಂಪನಿಗಳು ನಿಯಮಬಾಹಿರ ವಸೂಲಿಗೆ ಇಳಿದಿಲ್ಲ, ಆ ರೀತಿ ಮಾಡುತ್ತಿರುವುದು ಪರವಾನಗಿ ಇಲ್ಲದ ಕಂಪನಿಗಳು ಎನ್ನುವ ಉತ್ತರ ಮೈಕ್ರೋ ಕಂಪನಿಯವರಿಂದ ಬಂತು.
ಇದಕ್ಕೆ ಸಚಿವ ಕೃಷ್ಣಬೈರೇಗೌಡರು, ಎಚ್.ಕೆ.ಪಾಟೀಲ್, ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಕರಾರು ವ್ಯಕ್ತಪಡಿಸಿ, ಪರವಾನಗಿ ಇದ್ದವರೇ ಈ ರೀತಿ ಮಾಡುತ್ತಿದ್ದಾರೆ ಎನ್ನುವ ವರದಿ ನಮಗೆ ಗ್ರೌಂಡ್ ರಿಪೋರ್ಟ್ ನಲ್ಲಿ ಬಂದಿದೆ. ಆದ್ದರಿಂದ ಬಡ ಜನರ ಹಿತಕಾಯಲು ನಾವು ನಿಯಮ ಉಲ್ಲಂಘಿಸುವ ಕಂಪನಿ ಎಂ.ಡಿ ಗಳ ವಿರುದ್ಧ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗುತ್ತದೆ ಎಂದು ಸಚಿವರು ಸಭೆಯಲ್ಲಿ ಗುಡುಗಿದರು.
*ಮಹಿಳೆಯರ, ವೃದ್ಧರ ಮೇಲೆ ದಬ್ಬಾಳಿಕೆ ನಡೆಸಿರುವ ಪತ್ರಿಕಾ ವರದಿಗಳೂ ನಿತ್ಯ ಬರುತ್ತಿವೆ. ನಾನು ಇದನ್ನೆಲ್ಲಾ ಸಹಿಸುವುದಿಲ್ಲ. ನನ್ನ ಜನರ ರಕ್ಷಣೆಗೆ ನಾನು ಕಠಿಣ ಕ್ರಮ ಕೈಗೊಳ್ಳುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಭೆಯಲ್ಲೇ ಕಠಿಣ ಎಚ್ಚರಿಕೆ ನೀಡಿದರು.
ಮೊದಲ ಹಂತದ ಸಭೆ ಬಳಿಕ ಬ್ಯಾಂಕಿಂಗ್, ಫೈನಾನ್ಸ್, ಮೈಕ್ರೋ ಫೈನಾನ್ಸ್ ಕಂಪನಿಗಳ ಪ್ರತಿನಿಧಿಗಳನ್ನು ಸಭೆಯಿಂದ ಹೊರಗಿರಲು ಹೇಳಿ, ಕಾನೂನು ಇಲಾಖೆ, ಗೃಹ ಇಲಾಖೆ, ಕಂದಾಯ ಇಲಾಖೆಗಳ ಸಚಿವರು ಮತ್ತು ಅಧಿಕಾರಿಗಳೊಂದಿಗೆ ಎರಡನೇ ಹಂತದ ಸಭೆ ಮುಂದುವರೆದಿದೆ.
ಈ ಸಭೆಯಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಗೃಹ ಸಚಿವರಾದ ಜಿ.ಪರಮೇಶ್ವರ್, ಕಾನೂನು ಸಚಿವರಾದ ಎಚ್.ಕೆ.ಪಾಟೀಲ್, ಕಂದಾಯ ಸಚಿವ ಕೃಷ್ಣಬೈರೇಗೌಡ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಎಸಿಎಸ್ ಅತೀಕ್ ಅಹಮದ್, ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಅಲೋಕ್ ಮೋಹನ್ ಸೇರಿ ಗೃಹ ಇಲಾಖೆ, ಒಳಾಡಳಿತ, ಕಂದಾಯ, ಗುಪ್ತಚರ ಇಲಾಖೆಗಳ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದಾರೆ.
ಪ್ರಧಾನಿ-ಗೃಹಮಂತ್ರಿ ಜೋಡಿಯಿಂದ ಚುನಾವಣಾ ಆಯೋಗದ ಸ್ವಾತಂತ್ರ್ಯಕ್ಕೆ ತೀವ್ರ ಧಕ್ಕೆ: ಕಾಂಗ್ರೆಸ್
BIG NEWS : ಬಾಲಿವುಡ್ ನಟ `ಸೈಫ್ಅಲಿ ಖಾನ್’ಗೆ ಚಾಕು ಇರಿತ ಕೇಸ್ : ಅನಿಮೇಟೆಡ್ `3D ವಿಡಿಯೋ’ ವೈರಲ್.!