ಬೆಂಗಳೂರು: ಇಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ರಾಜ್ಯಪಾಲರು ಮುಡಾ ಹಗರಣದಲ್ಲಿ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ್ದನ್ನು ಪ್ರಶ್ನಿಸಿ ಸಲ್ಲಿಸಿದ್ದಂತ ರಿಟ್ ಅರ್ಜಿಯ ವಿಚಾರಣೆ ಹೈಕೋರ್ಟ್ ನಲ್ಲಿ ನಡೆಸಲಾಯಿತು. ಹೈಕೋರ್ಟ್ ನ್ಯಾಯಮೂರ್ತಿ ನಾಗಪ್ರಸನ್ನ ಅವನ್ನೊಳಗೊಂಡ ನ್ಯಾಯಪೀಠದಲ್ಲಿ ವಿಚಾರಣೆ ನಡೆಯಿತು. ಆ ವಿಚಾರಣೆಯ ಸಂಪೂರ್ಣ ಸಾರಾಂಶ ಮುಂದೆ ಓದಿ.
ಸಿದ್ದರಾಮಯ್ಯನವರ ವಿರುದ್ಧ ವಿಚಾರಣೆಗೆ ಅನುಮತಿ ನೀಡಿದ್ದ ರಾಜ್ಯಪಾಲರ ಆದೇಶವನ್ನು ಆಧರಿಸಿ ಮುಂದಿನ ವಿಚಾರಣೆಯವರೆಗೆ ಯಾವುದೆ ಕ್ರಮ ತೆಗೆದುಕೊಳ್ಳದಂತೆ ಗೌರವಾನ್ವಿತ ಉಚ್ಚ ನ್ಯಾಯಾಲಯ ಆದೇಶ ಮಾಡಿದೆ.
1. ರಾಜ್ಯಪಾಲರು ರಾಜ್ಯದ ಮುಖ್ಯಮಂತ್ರಿಗಳ ವಿರುದ್ಧ ನೀಡಿದ್ದ ಪ್ರಾಸಿಕ್ಯೂಷನ್ ಪರ್ಮಿಷನ್ ಕುರಿತಂತೆ ಗೌರವಾನ್ವಿತ ಉಚ್ಚ ನ್ಯಾಯಾಲಯವು ಇಂದು ದೀರ್ಘ ಸಮಯ ಎರಡೂ ಕಡೆಯ ವಾದವನ್ನು ಆಲಿಸಿತು.
2. ರಾಜ್ಯಪಾಲರ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ರಾ ಅವರೆ ಅಪಿಯರ್ ಆಗಿದ್ದರು. ಅವರು ರಾಜ್ಯಪಾಲರ ಪರವಾಗಿ ವಾದ ಮಂಡಿಸುವ ಜೊತೆಗೇನೆ ಪ್ರತಿವಾದಿಗಳ ಪರವಾಗಿಯೂ ಆಗಾಗ ಮಾತನಾಡಿದರು. [ಟಿ ಜೆ ಅಬ್ರಹಾಂ, ಸ್ನೇಹ ಮಯಿ ಕೃಷ್ಣ ಮತ್ತು ಜೆಡಿಎಸ್‌ನ ಕಾನೂನು ಕೋಶದ ಪುದೀಪ್ ಕುಮಾರ್ ಅವರೂ ಸಹ ಪ್ರತಿವಾದಿಗಳಾಗಿದ್ದಾರೆ]
3. ಮುಖ್ಯಮಂತ್ರಿಗಳ ಪರ ಸುದೀರ್ಘವಾದ ವಾದ ಮಂಡಿಸಿದ ಅಭಿಷೇಕ್ ಮನು ಸಿಂಘಿಯವರು ರಾಜ್ಯಪಾಲರು ಎಲ್ಲೆಲ್ಲಿ ಮತ್ತು ಹೇಗೆ ಹೇಗೆ ತಪ್ಪು ಮಾಡಿದ್ದಾರೆ ಎಂದು ವಿವರಿಸಿದರು.
ಅಭಿಷೇಕ್ ಮನು ಸಿಂಘೀಯವರ ವಾದದ ಸಾರಾಂಶ ಇದು.
ದೂರುದಾರ ಟಿ ಜೆ ಅಬ್ರಾಹಾಂ ಎಂಬ ವ್ಯಕ್ತಿ ಒಬ್ಬ ಬ್ಲ್ಯಾಕ್ ಮೇಲರ್. ಆತನ ಮೇಲೆ ಸುಪ್ರೀಂ ಕೋರ್ಟಿನಲ್ಲಿ ಸಹ ಸ್ಪೆಕ್ಟರ್ ಪಾಸಾಗಿದೆ. ದಂಡ ಹಾಕಲಾಗಿದೆ. ಈ ರೀತಿಯ ಹಿನ್ನೆಲೆಯ ವ್ಯಕ್ತಿ ದೂರು ಕೊಟ್ಟ ದಿನವೆ ಪರಿಶೀಲನೆ ಕೂಡ ಮಾಡದೆ ಕೆಲವೇ ಗಂಟೆಗಳಲ್ಲಿ ರಾಜ್ಯಪಾಲರು ಮುಖ್ಯಮಂತ್ರಿಗಳಿಗೆ ಶೋ ಕಾಸ್ ನೋಟೀಸು ನೀಡಿದ್ದಾರೆ. ಆತ ಕೊಟ್ಟ ದೂರನ್ನು ಓದಲೂ ಸಹ ಕೆಲವಾರು ಘಂಟೆಗಳು ಬೇಕಾಗುತ್ತವೆ. ಆದರೆ ರಾಜ್ಯಪಾಲರು ತರಾತುರಿಯಲ್ಲಿ ಅನುಮತಿ ನೀಡಿದ್ದಾರೆ.
ಇಷ್ಟೊಂದು ತರಾತುರಿಯಲ್ಲಿ ವಿಚಾರಣೆಗೆ ಅನುಮತಿ ನೀಡುವ ರಾಜ್ಯಪಾಲರು ತಮ್ಮ ಕಛೇರಿಯಲ್ಲಿ ಹಲವು ವರ್ಷಗಳಿಂದ ಪಕರಣಗಳನ್ನು ಬಾಕಿ ಇಟ್ಟುಕೊಂಡಿದ್ದಾರೆ. 2021 ರಿಂದ ಶಶಿಕಲಾ ಜೊಲ್ಲೆಯವರ ಮೇಲೆ ವಿಚಾರಣೆ ನಡೆಸಬೇಕು, ಪ್ರಾಥಮಿಕ ವಿಚಾರಣೆಯಲ್ಲಿ ಅವರು ತಪ್ಪು ಮಾಡಿರುವುದು ಸಾಬೀತಾಗಿದೆ ಎಂದು ಲೋಕಾಯುಕ್ತ ಪೊಲೀಸರ ವರದಿ ಮತ್ತು ಮನವಿಯನ್ನು ಸಲ್ಲಿಸಿದ್ದಾರೆ. ಹಾಗೆಯೇ ಕುಮಾರಸ್ವಾಮಿಯವರ ಮೇಲೆ ತನಿಖೆ ನಡೆಸಬೇಕೆಂಬ ಕೋರಿಕೆಯು 2021 ರಿಂದ ಬಾಕಿಯಾಗಿದೆ.
ಮುರುಗೇಶ್ ನಿರಾಣಿ, ಜನಾರ್ಧನ ರೆಡ್ಡಿ ಮುಂತಾದವರ ಮೇಲಿನ ಪಕರಣಗಳಲ್ಲಿಯೂ ಪ್ರಾಥಮಿಕ ವಿಚಾರಣೆ ನಡೆಸಿ ತಪ್ಪು ಮಾಡಿದ್ದಾರೆ ಎಂದು ಕಂಡು ಬಂದ ಹಿನ್ನೆಲೆಯಲ್ಲಿ ಪ್ರಾಸಿಕ್ಯೂಷನ್ನಿಗೆ ಅನುಮತಿ ಕೊಡಿ ಎಂದು ಲೋಕಾಯುಕ್ತದವರು ಕೋರಿಕೆಗಳನ್ನು ಸಲ್ಲಿಸಿದ್ದಾರೆ. ಆದರೆ ವರ್ಷಾನುಗಟ್ಟಲೆ ಈ ಕೋರಿಕೆಗಳನ್ನು ತಮ್ಮ ಬಳಿಯೇ ಇಟ್ಟುಕೊಂಡ ರಾಜ್ಯಪಾಲರು ಟಿ. ಜೆ ಅಬ್ರಹಾಂ ದೂರು ಕೊಟ್ಟ ಕೆಲವೇ ಗಂಟೆಗಳಲ್ಲಿ ನೋಟೀಸ್ ನೀಡಿದ್ದಾರೆ.
ನೋಟೀಸಿಗೆ ರಾಜ್ಯ ಸಚಿವ ಸಂಪುಟವು [ಮುಖ್ಯ ಮಂತ್ರಿಗಳನ್ನು ಹೊರತು ಪಡಿಸಿ] ದೀರ್ಘವಾದ ಪ್ರತಿಕ್ರಿಯೆಯನ್ನು ಸಿದ್ಧಪಡಿಸಿ ಕಳಿಸಿದೆ ಹಾಗೂ ಸರ್ವಾನುಮತದಿಂದ ರಾಜ್ಯಪಾಲರು ನೋಟೀಸನ್ನು ತಿರಸ್ಕರಿಸಲು ತೀರ್ಮಾನಿಸಿದೆ ಹಾಗೂ ನೋಟೀಸನ್ನು ವಿತ್‌ಡ್ರಾ ಮಾಡಲು ರಾಜ್ಯಪಾಲರಿಗೆ ಆಗ್ರಹಿಸಿದೆ. ಇದರ ಜೊತೆಗೆ ಮುಖ್ಯಮಂತ್ರಿಗಳು ಒಂದು ಎಳ್ಳು, ಕಾಳಿನಷ್ಟೂ ತಪ್ಪು ಮಾಡಿಲ್ಲ ಎಂಬುದಕ್ಕೆ ದಾಖಲೆಗಳನ್ನೂ ಸಹ ಕಳುಹಿಸಿ ಕೊಟ್ಟಿದೆ.
ಇದಾದ ಮೇಲೆ ಸ್ನೇಹಮಯಿ ಕೃಷ್ಣ ಮತ್ತು ಪುದೀಪ್ ಕುಮಾರ್ ಎಂಬುವವರು ರಾಜ್ಯಪಾಲರಿಗೆ ದೂರುಗಳನ್ನು ನೀಡಿದ್ದಾರೆ. ಆ ದೂರುಗಳಲ್ಲೇನಿದೆ ಎಂದು ರಾಜ್ಯಪಾಲರು ಸರ್ಕಾರಕ್ಕೆ ಮುಖ್ಯಮಂತ್ರಿಗಳಿಗೆ ಕಳುಹಿಸಲಿಲ್ಲ. ಆದರೆ ಪ್ರಾಸಿಕ್ಯೂಷನ್ನಿಗೆ ವರ್ಮಿಷನ್ ಕೊಡುವಾಗ ಆ ಎರಡೂ ದೂರು ಅರ್ಜಿಗಳನ್ನು ಉಲ್ಲೇಖ ಮಾಡಿದ್ದಾರೆ. ಇಲ್ಲಿ ನ್ಯಾಯದ ಸಹಜ ತತ್ವವನ್ನು ಉಲ್ಲಂಘಿಸಿದ್ದಾರೆ.
ರಾಜ್ಯಪಾಲರು ಪ್ರಾಸಿಕ್ಯೂಷನ್ನಿಗೆ ಅನುಮತಿ ನೀಡುವಾಗ ಯಾಕೆ ನೀಡುತ್ತಿದ್ದೇನೆ ಎಂದು ಎಲ್ಲಿಯೂ ಹೇಳಿಲ್ಲ. ರಾಜ್ಯದ ಸಚಿವ ಸಂಪುಟವು ರಾಜ್ಯಪಾಲರು ನೋಟೀಸು ನೀಡಿರುವ ಕ್ರಮ ಹೇಗೆ ಅಸಾಂವಿಧಾನಿಕ ಎಂದು ಹೇಳಿ ದೀರ್ಘವಾಗಿ ಮನವರಿಕೆಯಾಗುವಂತೆ ಉತ್ತರ/ ಪ್ರತಿಕ್ರಿಯೆಯನ್ನು ನೀಡಿದ್ದರೂ ಸಹ ಅದನ್ನು ಪರಿಗಣಿಸಿಲ್ಲ. ಯಾಕೆ ಪರಿಗಣಿಸಿಲ್ಲ ಎಂಬುದರ ಕುರಿತು ಯಾವ ಆದೇಶವನ್ನೂ ಮಾಡಿಲ್ಲ.
ರಾಜ್ಯಪಾಲರು ತಮಗೆ ಅನುಕೂಲವಾಗುವ ನ್ಯಾಯಾಲಯದ ತೀರ್ಪುಗಳನ್ನು ಮಾತ್ರ ಉಲ್ಲೇಖಿಸಿದ್ದಾರೆ. ಸಂವಿಧಾನ ಪೀಠಗಳ ಹಲವು ಮುಖ್ಯ ತೀರ್ಪುಗಳನ್ನು ಬೈಪಾಸ್ ಮಾಡಿದ್ದಾರೆ.
ಪಿಸಿ ಆಕ್ಟ್ 17ಎಗೆ ಸಂಬಂಧಿಸಿದಂತೆ ಅನುಮತಿ ನೀಡಲು ಅನುಸರಿಸಬೇಕಾದ ಕ್ರಮಗಳ ಕುರಿತು ಕೇಂದ್ರ ಸರ್ಕಾರವು 2021 ರಲ್ಲಿ ಹೊರಡಿಸಿರುವ ಮಾರ್ಗಸೂಚಿಗಳನ್ನು ರಾಜ್ಯಪಾಲರು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ.
ರಾಜ್ಯಪಾಲರು ಸಂಪೂರ್ಣವಾಗಿ ಅಸಾಂವಿಧಾನಿಕವಾಗಿ ನಡೆದುಕೊಂಡಿದ್ದಾರೆ. ಚುನಾಯಿತ ಸರ್ಕಾರದ ತೀರ್ಮಾನಗಳನ್ನು ಉಲ್ಲಂಘಿಸಿ ಫೆಡರಲ್ ತತ್ತ್ವವನ್ನು ಗಾಳಿಗೆ ತೂರಿದ್ದಾರೆ. ನ್ಯಾಯಾಲಯಗಳು ಮಾಡಿರುವ ಆದೇಶಗಳನ್ನು ಮೂಲೆಗೆ ಎಸೆದಿದ್ದಾರೆ.
ರಾಜ್ಯಪಾಲರು ಸಹಜ ನ್ಯಾಯ ತತ್ತ್ವವನ್ನು ಪಾಲಿಸಿಲ್ಲ.
ಸಿದ್ದರಾಮಯ್ಯನವರು 1992 ರಿಂದ 2022ರಲ್ಲಿ ನಿವೇಶನಗಳನ್ನು ಪಡೆದುಕೊಳ್ಳುವವರೆಗೆ ಒಂದು ಎಳ್ಳು ಕಾಳಿನಷ್ಟೂ ತಪ್ಪು ಮಾಡಿಲ್ಲ. ಅವರು ಸಹಿ ಮಾಡಿರುವುದಾಗಲಿ, ಪ್ರಭಾವ ಬೀರುವುದಾಗಲಿ ಮಾಡಿಲ್ಲ. ಹಾಗಾಗಿ 17 ಎ ಈ ಪ್ರಕರಣದಲ್ಲಿ ಅನ್ವಯವಾಗುವುದೇ ಇಲ್ಲ.
ಪ್ರತಿವಾದಿಗಳು ದುರುದ್ದೇಶದಿಂದ ಹಲವಾರು ಸತ್ಯಾಂಶಗಳನ್ನು ಮುಚ್ಚಿಟ್ಟು ದಾರಿ ತಪ್ಪಿಸುತ್ತಿದ್ದಾರೆ.
1992 ರಲ್ಲಿ ಮುಡಾದವರು ಈ ಜಾಗವನ್ನು ಸ್ವಾಧೀನ ಪಡಿಸಿಕೊಳ್ಳಲು ಪ್ರಾಥಮಿಕ ಅಧಿಸೂಚನೆ ಹೊರಡಿಸಿದರು. 1998 ರಲ್ಲಿ ಡಿನೋಟಿಫಿಕೇಶನ್ ಮಾಡಲಾಯಿತು. ಅದಾಗಿ 6 ವರ್ಷದ ನಂತರ ಮಲ್ಲಿಕಾರ್ಜುನಸ್ವಾಮಿ ಎನ್ನುವವರು ಜಮೀನು ಖರೀದಿ ಮಾಡಿದರು. ಮತ್ತೆ 6 ವರ್ಷಗಳ ನಂತರ 2010 ರಲ್ಲಿ ಈ ಜಮೀನು ಬಿ. ಎಂ ಪಾರ್ವತಿ ಎನ್ನುವವರಿಗೆ ದಾನ ರೂಪದಲ್ಲಿ ವರ್ಗಾವಣೆಯಾಯಿತು. 2020 ರಲ್ಲಿ ಶೇ.50;50ರ ಅನುಪಾತದಲ್ಲಿ ಭೂಮಿ ಕಳೆದುಕೊಂಡವರಿಗೆ ಪರಿಹಾರ ಕೊಡಲು ಮುಡಾದವರು ತೀರ್ಮಾನಿಸಿದ್ದಾರೆ. 2021-22 ರಲ್ಲಿ ನಿವೇಶನಗಳನ್ನು ಕೊಟ್ಟಿದ್ದಾರೆ. ಇದೇ ರೀತಿ ನೂರಾರು ನಿವೇಶನಗಳನ್ನು ಇತರೆ ಭೂಮಿ ಕಳೆದುಕೊಂಡವರಿಗೂ ಕೊಟ್ಟಿದ್ದಾರೆ. ಇದರಲ್ಲಿ ಸಿದ್ದರಾಮಯ್ಯನವರ ಪಾತ್ರ ಕಿಂಚಿತ್ತೂ ಇಲ್ಲ.
ಇಷ್ಟೆಲ್ಲ ತಿಳಿದಿದ್ದರೂ ರಾಜ್ಯಪಾಲರು ವಿಚಾರಣೆಗೆ ಅನುಮತಿ ನೀಡುವ ಮೂಲಕ ತಪ್ಪು ಆದೇಶವನ್ನು ನೀಡಿದ್ದಾರೆ ಹಾಗೂ ತಪ್ಪು ಸಂದೇಶವನ್ನು ಹೊರಡಿಸಿದ್ದಾರೆ.
ಆದ್ದರಿಂದ ಈ ತಪ್ಪು ಆದೇಶವನ್ನು ರದ್ದು ಪಡಿಸಬೇಕು ಎಂದು ವಾದ ಮಾಡಿದರು.
ಎರಡೂ ಕಡೆಯ ವಾದಗಳನ್ನು ಆಲಿಸಿದ ಉಚ್ಛ ನ್ಯಾಯಾಲಯವು ” No precipitative action be taken pursuant to the impugned sanction” ಎಂದು ಆದೇಶ ಮಾಡಿದೆ. ಆ ಮೂಲಕ ಪ್ರಾಥಮಿಕ ವಿಚಾರಣೆಯಲ್ಲಿಯ ಗೌರವಾನ್ವಿತ ನ್ಯಾಯಾಲಯವು ರಾಜ್ಯಪಾಲರ ಆದೇಶವು Impugned ಎಂದು ಅರ್ಥೈಸಿಕೊಂಡಿದೆ. ಮುಂದಿನ ವಿಚಾರಣೆಯವರೆಗೆ ಯಾವುದೇ ವಿಚಾರಣೆ ಮಾಡದಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಸೂಚಿಸಿ, ವಿಚಾರಣೆಯನ್ನು ಆಗಸ್ಟ್.29ಕ್ಕೆ ಮುಂದೂಡಿತು.
ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: JEE/NEET ಪರೀಕ್ಷಾ ಪೂರ್ವ ‘ಉಚಿತ ತರಬೇತಿ’ಗೆ ಅರ್ಜಿ ಅಹ್ವಾನ
BREAKING: ಕರ್ನಾಟಕದಲ್ಲಿ ‘ಝೀಕಾ ವೈರಸ್’ಗೆ ಮೊದಲ ಬಲಿ | Zika Virus Case
BREAKING : ಹಾವೇರಿಯಲ್ಲಿ ಭೀಕರ ಅಪಘಾತ : ‘NWKRTC’ ಬಸ್ ಪಲ್ಟಿಯಾಗಿ 13 ಪ್ರಯಾಣಿಕರಿಗೆ ಗಂಭೀರ ಗಾಯ!