ಬೆಂಗಳೂರು: ದೇವದಾಸಿ ಪದ್ಧತಿ ನಿಷೇಧ ಆಗಿದೆ. ಎಲ್ಲಿಯಾದರೂ ನಡೆದದ್ದು ಗಮನಕ್ಕೆ ಬಂದರೆ SP-DC ವಿರುದ್ಧ ಮುಲಾಜಿಲ್ಲದೆ ಕ್ರಮಕೊಳ್ಳುವುದಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಎಚ್ಚರಿಕೆ ನೀಡಿದ್ದಾರೆ.
ಇಂದು ವಿಧಾನಸೌಧದಲ್ಲಿ ರಾಜ್ಯ ಮಟ್ಟದ ಜಾಗೃತ ಮತ್ತು ಉಸ್ತುವಾರಿ ಸಮಿತಿ ಸಭೆ ನಡೆಸಿದಂತ ಅವರು, ಜಾತಿ ದೌರ್ಜನ್ಯ ಪ್ರಕರಣಗಳಲ್ಲಿ ಆರೋಪಿಗಳಿಗೆ ಸಲೀಸಾಗಿ ಬೇಲ್ ಸಿಕ್ಕರೆ ಅದು ನಿಮ್ಮ ದೌರ್ಬಲ್ಯ. ಹೀಗಾದರೆ ಜಾತಿ ದೌರ್ಜನ್ಯ ತಡೆಗಟ್ಟುವುದು ಸಾಧ್ಯವಿಲ್ಲ ಎಂದರು.
ಗಂಭೀರ ಪ್ರಕರಣಗಳಲ್ಲಿ ಆರೋಪಿಗಳಿಗೆ ಸಲೀಸಾಗಿ ಜಾಮೀನು ಸಿಕ್ಕರೆ, ಮೇಲ್ಮನವಿ ಹೋಗಿ ಜಾಮೀನು ರದ್ದುಪಡಿಸಿ ಆರೋಪಿಗೆ ಶಿಕ್ಷೆ ಕೊಡಿಸಿದ ಪ್ರಕರಣಗಳು ಎಷ್ಟಿವೆ ? ಈ ಬಗ್ಗೆ ವಿವರ ಕೊಡಿ ಎಂದು ಗರಂ ಆಗಿ ಅಧಿಕಾರಿಗಳಿಗೆ ಸಿಎಂ ಸಿದ್ಧರಾಮಯ್ಯ ಪ್ರಶ್ನಿಸಿದರು.
ಪೊಲೀಸ್ ಇಲಾಖೆಯಲ್ಲಿ ಸೀನಿಯರಿಟಿ ಲೀಸ್ಟ್ ಉಲ್ಲಂಘನೆ ಆಗಿ ಪರಿಶಿಷ್ಠರಿಗೆ ಅನ್ಯಾಯ ಆಗುತ್ತಿದೆ. ಸಮಿತಿ ಮುಂದೆ ದೂರು ಬಂದು ನಾವು ಹಿರಿಯ ಅಧಿಕಾರಿಗಳ ಗಮನಕ್ಕೂ ತಂದರೂ ಸಮಸ್ಯೆ ಬಗೆಹರಿಸುತ್ತಿಲ್ಲ ಏಕೆ ? ADGP ಅಡ್ಮಿನ್ ಅವರು ಸರಿಯಾಗಿ ನಡೆದುಕೊಳ್ಳುತ್ತಿಲ್ಲ ಎಂದು ಸಂಸದ ಈ.ತುಕಾರಾಮ್ ಮತ್ತು ಶಾಸಕ ನರೇಂದ್ರಸ್ವಾಮಿ ಅವರು ಸಭೆಯ ಗಮನಕ್ಕೆ ತಂದರು. ಇದರಿಂದ ಅಸಮಾಧಾನಗೊಂಡ ಸಿಎಂ ಈ ವಿಚಾರವನ್ನು ಮುಂದಿನ ಕ್ಯಾಬಿನೆಟ್ ಗೆ ತರಲು ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರಿಗೆ ಸಿಎಂ ಸೂಚಿಸಿದರು.
ಬ್ಯಾಕ್ ಲಾಗ್ ಮತ್ತು ಬಡ್ತಿ ವಿಚಾರದಲ್ಲಿ ಆಗುತ್ತಿರುವ ಅನ್ಯಾಯಗಳನ್ನು ಸಬ್ ಕಮಿಟಿ ಪತ್ತೆ ಹಚ್ಚಿ ಸಮಸ್ಯೆಗಳನ್ನು ನಿಮ್ಮ ಗಮನಕ್ಕೆ ತಂದರೂ ಸಮಸ್ಯೆ ಬಗೆಹರಿಸದೆ ನಿರ್ಲಕ್ಷ್ಯ ತೋರಿಸುತ್ತಿದ್ದೀರಿ. ಹಾಗಾದರೆ ಸಬ್ ಕಮಿಟಿ ಕೊಡುವ ವರದಿಗಳಿಗೆ ಬೆಲೆ ಇಲ್ಲವೇ ಎಂದು ವಿಧಾನ ಪರಿಷತ್ ಸದಸ್ಯ ಸುಧಾಮ್ ದಾಸ್ ಅವರು ಸಭೆಯ ಗಮನಕ್ಕೆ ತಂದರು.