ಬೆಂಗಳೂರು: ನವೆಂಬರ್ 27 ರಂದು ನಡೆದ ಮೊದಲ ಜನಸ್ಪಂದನ ಕಾರ್ಯಕ್ರಮದಲ್ಲಿ ಸ್ವೀಕರಿಸಲಾದ ಅರ್ಜಿಗಳ ಪೈಕಿ ಶೇ. 98 ರಷ್ಟು ಅರ್ಜಿಗಳನ್ನು ವಿಲೇವಾರಿ ಮಾಡಿ, ಜನರಿಗೆ ಪರಿಹಾರಗಳನ್ನು ಒದಗಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸದರು.
ಅವರು ಇಂದು ವಿಧಾನಸೌಧದ ಮುಂಭಾಗದಲ್ಲಿ ರಾಜ್ಯಮಟ್ಟದ ಎರಡನೇ ಜನಸ್ಪಂದನ ಕಾರ್ಯಕ್ರಮದಲ್ಲಿ ಮಾತನಾಡಿದರು. ಸರ್ಕಾರವನ್ನು ಜನರ ಬಳಿಗೇ ಒಯ್ಯಬೇಕೆಂಬುದು ಸರ್ಕಾರದ ಆಶಯ. ಈ ನಿಟ್ಟಿನಲ್ಲಿ ಎಲ್ಲ ಜಿಲ್ಲೆಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಈ ವರೆಗೆ ಒಟ್ಟು 108 ಜನಸ್ಪಂದನ ಕಾರ್ಯಕ್ರಮಗಳನ್ನು ನಡೆಸಿದ್ದಾರೆ ಎಂದು ವಿವರಿಸಿದರು. ತಾಲ್ಲೂಕು, ಜಿಲ್ಲಾ ಮಟ್ಟದಲ್ಲಿಯೂ ಜನಸ್ಪಂದನ ಕಾರ್ಯಕ್ರಮ ನಡೆಸಲಾಗುತ್ತಿದ್ದು, ಇಲ್ಲಿ ಬಗೆಹರಿಯದ ಸಮಸ್ಯೆಗಳನ್ನು ರಾಜ್ಯಮಟ್ಟದ ಜನಸ್ಪಂದನ ಕಾರ್ಯಕ್ರಮದಲ್ಲಿ ಜನರು ಸಲ್ಲಿಸಬಹುದಾಗಿದೆ. ಕಾನೂನುಬದ್ಧವಾದ ಸಮಸ್ಯೆಗಳಿಗೆ ನಮ್ಮ ಸರ್ಕಾರ ಪರಿಹಾರ ಒದಗಿಸಲಿದೆ ಎಂದು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದರು. ಸಮಸ್ಯೆ ಬಗೆಹರಿಸಲು ಕಾನೂನು ತೊಡಕು ಇದ್ದಲ್ಲಿ, ಈ ಕುರಿತು ಅರ್ಜಿದಾರರಿಗೆ ಕಾರಣ ಸಹಿತ ಹಿಂಬರಹ ನೀಡಲಾಗುವುದು ಎಂದು ತಿಳಿಸಿದರು.
ಜನಸ್ಪಂದನದಲ್ಲಿ ಸ್ವೀಕರಿಸಲಾದ ಅರ್ಜಿಗಳಿಗೆ ಮೂರು ತಿಂಗಳೊಳಗೆ ವಿಲೇವಾರಿ ಮಾಡಬೇಕು; ಜನರ ಸಮ್ಸಯೆಗಳಿಗೆ ಪರಿಹಾರ ಒದಗಿಸಬೇಕು ಎಂದು ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಆಡಳಿತ ವ್ಯವಸ್ಥೆ ಚುರುಕುಗೊಳ್ಳಬೇಕು; ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎನ್ನುವ ಆಶಯದೊಂದಿಗೆ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸರ್ಕಾರ ರೂಪಿಸುವ ಜನೋಪಯೋಗಿ ಕಾರ್ಯಕ್ರಮಗಳು ನೇರವಾಗಿ ಫಲಾನುಭವಿಗಳಿಗೆ ತಲುಪಬೇಕು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದು ಎಂಟು ತಿಂಗಳೊಳಗಾಗಿ ಎಲ್ಲ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದ್ದೇವೆ. ಬಿಜೆಪಿಯವರು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಲು ಸಾಧ್ಯವಿಲ್ಲ. ಕರ್ನಾಟಕ ಆರ್ಥಿಕವಾಗಿ ದಿವಾಳಿಯಾಗುತ್ತದೆ ಎಂದು ಟೀಕಿಸಿದ್ದರು. ಯೋಜನೆ ಜಾರಿಗೊಳಿಸಿದಾಗ ವಿರೋಧ ಪಕ್ಷಗಳ ನಾಯಕರು ಈಗ ಯೋಜನೆ ಜಾರಿಗೊಳಿಸಿ ಆಮೇಲೆ ನಿಲ್ಲಿಸುತ್ತಾರೆ ಎಂದು ತಿಳಿಸಿದ್ದಾರೆ. ಆದರೆ ಇಂತಹ ಅಪಪ್ರಚಾರಗಳಿಗೆ ಕಿವಿಗೊಡಬಾರದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಗ್ಯಾರಂಟಿ ಯೋಜನೆಗಳು ಬಡವರ ಕಾರ್ಯಕ್ರಮ; ಅಸಮಾನತೆ ನಿವಾರಿಸುವ ಕಾರ್ಯಕ್ರಮ. ನಾವು ಸಂವಿಧಾನದಲ್ಲಿ, ಬಸವಾದಿ ಶರಣರಲ್ಲಿ ನಂಬಿಕೆ ಇಟ್ಟುಕೊಂಡಿರುವವರು. ಸಮಾಜದಲ್ಲಿ ಭ್ರಾತೃತ್ವ ಬೆಳೆಯಬೇಕು. ಸಮಾನತೆ ಮೂಡಬೇಕು. ಆಗ ಮಾತ್ರ ಸಮಾಜದಲ್ಲಿ ಶಾಂತಿ, ನೆಮ್ಮದಿ ಕಾಪಾಡಲು ಸಾಧ್ಯ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ರಾಜ್ಯದ ನಾಯಕರು ಈಗ ಕೊಟ್ಟು ಆಮೇಲೆ ನಿಲ್ಲಿಸುತ್ತಾರೆ ಎಂದಿದ್ದಾರೆ. ಇದು ಬಡವರ ಕಾರ್ಯಕ್ರಮ. ಜೊತೆಗೆ ಅಸಮಾನತೆ ಹೋಗಲಾಡಿಸಲು ಮಾಡಿದ ಕಾರ್ಯಕ್ರಮಗಳು. ನಾವು ಸಂವಿಧಾನ, ಬಸವಾದಿ ಶರಣರಲ್ಲಿ ನಂಬಿಕೆ ಇಟ್ಟುಕೊಂಡಿರವವರು. ಭ್ರಾತೃವ ಬೆಳೆಯಬೇಕು, ಸಮಾನತೆ ಬೆಳೆಯಬೇಕು. ಆಗ ಮಾತ್ರ ಸಮಾಜದಲ್ಲಿ ಶಾಂತಿ ನೆಮ್ಮದಿ ಕಾಪಾಡಲು ಸಾಧ್ಯ. ರಾಜ್ಯದಲಿ ಕಾನೂನು ಸುವ್ಯವಸ್ಥೆ ಇದ್ದರೆ ಬಂಡವಾಳ ಹೂಡಿಕೆ ಸಾಧ್ಯವಾಗುತ್ತದೆ. ರಾಜ್ಯದಲ್ಲಿ ಸಾಮಾಜಿಕ ಆರ್ಥಿಕ ಬದಲಾವಣೆ ತರಲು ಜನಸ್ಪಂದನ ಅಗತ್ಯ ಎಂದು ನುಡಿದರು.