ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತರ ಕರ್ನಾಟಕ ಹಾಗೂ ರೈತರ ವಿಚಾರದಲ್ಲಿ ನುಡಿದಂತೆ ನಡೆದಿಲ್ಲ. ಈ ಸರ್ಕಾರಕ್ಕೆ ಸಂವೇದನೆ ಇಲ್ಲ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ದೂರಿದರು.
ವಿಧಾನಸಭೆಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಪದೇ ಪದೆ ನುಡಿದಂತೆ ನಡೆದ ಸರ್ಕಾರ ಎಂದು ಹೇಳುತ್ತಾರೆ. 2008 ರ ಮೇ 20 ರಂದು ರೈತರ ಉತ್ಪನ್ನ ವೆಚ್ಚ ಆಧರಿಸಿ ಬೆಲೆ ನಿಗದಿಪಡಿಸಬೇಕು, 5,000 ಕೋಟಿ ರೂ. ಆವರ್ತ ನಿಧಿ ಸ್ಥಾಪಿಸಬೇಕು ಎಂದು ಸಿದ್ದರಾಮಯ್ಯ ಹೇಳಿದ್ದರು. ಎರಡೂವರೆ ವರ್ಷದ ಅವಧಿಯಲ್ಲಿ ಈ ಕೆಲಸವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡಿಲ್ಲ. ಚುನಾವಣೆಗೆ ಮುನ್ನ ಪ್ರಣಾಳಿಕೆಯಲ್ಲಿ, ಪ್ರಕೃತಿ ವಿಕೋಪ ನಿರ್ವಹಣೆಗೆ 5,000 ಕೋಟಿ ರೂ. ನಿಧಿ ಸ್ಥಾಪಿಸಲಾಗುವುದು ಎಂದು ಹೇಳಿದ್ದರು. ಉತ್ತರ ಕರ್ನಾಟಕದ ಬಹಳ ಕಡೆ ಪ್ರವಾಹವಾದರೂ ನಿಧಿ ನೀಡಿಲ್ಲ. ಸಾಲ ಮರುಪಾವತಿ ಮುಂದೂಡಲಾಗುವುದು ಎಂದು ಹೇಳಿದ್ದರು. ಹಾಲಿನ ಪ್ರೋತ್ಸಾಹಧನವನ್ನು 7 ರೂ.ಗೆ ಏರಿಸಲಾಗುವುದು ಎಂದಿದ್ದರು. ಉತ್ತರ ಕರ್ನಾಟಕದಲ್ಲಿ ದ್ರಾಕ್ಷಿ ಬೆಳೆಗಾರರಿಗಾಗಿ 500 ಕೋಟಿ ರೂ. ನೀಡಲಾಗುವುದು ಎಂದಿದ್ದರು. ಆದರೆ ಈ ಸರ್ಕಾರ ರೈತರ ಪರವಾಗಿ ನಿಂತಿಲ್ಲ ಎಂದರು.
ಕಬ್ಬಿನ ದರವನ್ನು ಕೇಂದ್ರ ಸರ್ಕಾರ ನಿಗದಿಪಡಿಸುತ್ತದೆ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆ. ರಾಜ್ಯ ಸರ್ಕಾರ ಹೆಚ್ಚುವರಿಯಾಗಿ ನೀಡಬೇಕೆಂದು ಸುಪ್ರೀಂ ಕೋರ್ಟ್ ಆದೇಶವಿದೆ. ರಾಜ್ಯ ಸರ್ಕಾರದಿಂದ ಸಚಿವರು ಅಥವಾ ಮುಖ್ಯಮಂತ್ರಿ ಪ್ರಧಾನಿಗೆ ಮನವಿ ಮಾಡಬೇಕು. ಸಚಿವ ದಿನೇಶ್ ಗುಂಡೂರಾವ್ ಶಿಷ್ಟಾಚಾರಕ್ಕಾಗಿ ಪ್ರಧಾನಿಯನ್ನು ವಿಮಾನ ನಿಲ್ದಾಣದಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ. ಮನವಿ ಕೊಟ್ಟಿದ್ದೇವೆ ಎಂದು ಸಾಬೀತುಪಡಿಸಲು ಹೀಗೆ ಮಾಡಿದ್ದಾರೆ ಎಂದರು.
ರಾಜ್ಯದಲ್ಲಿ 86.81 ಲಕ್ಷ ರೈತ ಕುಟುಂಬಗಳಿವೆ. ಶೇ.70 ರಷ್ಟು ಜನರು ರೈತ ಕುಟುಂಬದವರಾಗಿದ್ದಾರೆ. ಕೃಷಿ ಇಲಾಖೆಯ ವಿಶನ್ ವರದಿಯಲ್ಲಿ ಆಹಾರ ಭದ್ರತೆ ಕಾಪಾಡಲಾಗುವುದು ಎನ್ನಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಏನೇ ಕೇಳಿದರೂ 2,000 ರೂ. ಕೊಟ್ಟಿಲ್ಲವೇ ಎಂದು ಪ್ರಶ್ನೆ ಮಾಡುತ್ತಾರೆ. ಮದ್ಯದ ದರ ಏರಿಕೆ ಮಾಡಿ ಕುಟುಂಬಕ್ಕೆ ಹಣ ನೀಡಲಾಗುತ್ತಿದೆ ಎಂದರು.
ರೈತರ ಆತ್ಮಹತ್ಯೆ
ಎರಡೂವರೆ ವರ್ಷಗಳಲ್ಲಿ 2,422 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಪೈಕಿ 32 ಕಬ್ಬು ಬೆಳೆಗಾರರಿದ್ದಾರೆ. ಇಡೀ ದೇಶದಲ್ಲಿ ಕರ್ನಾಟಕದ ಪಾಲು ಶೇ.22.5 ರಷ್ಟಿದ್ದು, ಎರಡನೇ ಸ್ಥಾನದಲ್ಲಿದೆ. ತಮಿಳುನಾಡು ಶೇ.5.9 ಹಾಗೂ ಆಂಧ್ರಪ್ರದೇಶ ಶೇ.8 ರಷ್ಟು ಪಾಲು ಹೊಂದಿದೆ. ಇದೇ ಸರ್ಕಾರದ ಅಂಕಪಟ್ಟಿಯಾಗಿದೆ. ಇವರಿನ್ನೂ ಗ್ಯಾರಂಟಿ ಭ್ರಮೆಯಿಂದ ಹೊರಗೆ ಬಂದಿಲ್ಲ. ಗ್ಯಾರಂಟಿಗಳಿಂದ ಖಜಾನೆ ಖಾಲಿಯಾಗಿದ್ದರಿಂದಲೇ ಬರಗಾಲಕ್ಕೆ ಪರಿಹಾರ ಕೊಡದೆ ಮುಂದೂಡಿದ್ದರು ಎಂದರು.








