ಬೆಂಗಳೂರು: ರಾಜ್ಯದ ಆಶಾ ಕಾರ್ಯಕರ್ತೆಯರಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಸಿಹಿಸುದ್ದಿ ನೀಡಿದ್ದಾರೆ. ಆಶಾ ಕಾರ್ಯಕರ್ತೆಯರಿಗೆ ರೂ.1000 ತಂಡ ಆಧಾರಿತ ಪ್ರೋತ್ಸಾಹಧನವನ್ನು ಪಾವತಿಸಲು ಆಡಳಿತಾತ್ಮಕ ಅನುಮೋದನೆ ನೀಡಿದ್ದಾರೆ.
ಇಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದಲ್ಲಿ ರಾಜ್ಯ ಸಚಿವ ಸಂಪುಟ ಸಭೆ ನಡೆಯಿತು. ಈ ಸಭೆಯಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಅಡಿ ವಿಶೇಷ ಚೇತನ ಅಧಿಕಾರಿ/ ನೌಕರರಿಗೆ ಗುಂಪು-ಎ (ಕಿರಿಯ ಶ್ರೇಣಿ) ಮತ್ತು ಗುಂಪು-ಬಿ ವೃಂದಗಳಿಗೆ ನೀಡುವ ಮುಂಬಡ್ತಿಯಲ್ಲಿ ಶೇ 4ರಷ್ಟು ಮೀಸಲಾತಿ ಕಲ್ಪಿಸಲು ಕ್ಯಾಬಿನೆಟ್ ಅನುಮೋದನೆ ನೀಡಲಾಯಿತು.
ಆಶಾ ಕಾರ್ಯಕರ್ತೆಯರಿಗೆ ರೂ.1000/-ಗಳ ತಂಡ ಆಧಾರಿತ ಪ್ರೋತ್ಸಾಹಧನವನ್ನು ಪಾವತಿಸಲು ಹಾಗೂ ಇದಕ್ಕಾಗಿ ರೂ.18 ಕೋಟಿ ವೆಚ್ಚವನ್ನು ಭರಿಸಲು ಆಡಳಿತಾತ್ಮಕ ಅನುಮೋದನೆ ನೀಡಿದೆ.
ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆವರಣದಲ್ಲಿ ನಿರ್ಮಿಸಿರುವ 450 ಹಾಸಿಗೆಗಳ ಹೊಸ ಆಸ್ಪತ್ರೆಗೆ ಅವಶ್ಯವಿರುವ ವೈದ್ಯಕೀಯ ಯಂತ್ರೋಪಕರಣಗಳು ಹಾಗೂ ಪೀಠೋಪಕರಣಗಳನ್ನು ರೂ.26.98 ಕೋಟಿಗಳ ಮೊತ್ತದಲ್ಲಿ ಖರೀದಿಸಲು ಅನುಮೋದನೆ ನೀಡಲಾಗಿದೆ.
ಬೆಂಗಳೂರು ಪೂರ್ವ ತಾಲ್ಲೂಕು, ಬೆಳ್ಳಂದೂರು ಕೆರೆಯ ಪುನಶ್ವೇತನ ಮತ್ತು ಅಭಿವೃದ್ಧಿ ಕಾಮಗಾರಿ ಅಡಿಯಲ್ಲಿ ವಿಸ್ತೃತ ಯೋಜನೆ ವರದಿಯಂತೆ ಯೋಜಿತ ಉಳಿಕ ಕಾಮಗಾರಿಗಳನ್ನು ರೂ.79.67 ಕೋಟಿಗಳ ಹೆಚ್ಚುವರಿ ಮೊತ್ತದಲ್ಲಿ ಅನುಮೋದಿಸಿದೆ.
ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ, 2024ನ್ನು ಜಾರಿಗೆ ತರುವ ದಿನಾಂಕ 15-5-2025 ರಿಂದ ಹಾಗೂ ಹಾಲಿ ಇರುವ ಬಿಬಿಎಂಪಿ ಪ್ರದೇಶವನ್ನು “ಗ್ರೇಟರ್ ಬೆಂಗಳೂರು ಪ್ರದೇಶ” ಎಂದು ಅಧಿಸೂಚಿಸುವ ಬಗ್ಗೆ ಕ್ಯಾಬಿನೆಟ್ ಅನುಮೋದಿಸಿದೆ.
ಚಿಕ್ಕಬಳ್ಳಾಪುರ ಜಿಲ್ಲಾ ಕಾಂಗ್ರೆಸ್ ಭವನದ ಕಟ್ಟಡ ನಿರ್ಮಾಣ ಮಾಡುವ ಉದ್ದೇಶಕ್ಕಾಗಿ ಚಿಕ್ಕಬಳ್ಳಾಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಣಕನೂರು ಗ್ರಾಮದ ಅನುಮೋದಿತ ಬಡಾವಣೆಯಲ್ಲಿ 3404.26 ಚ.ಮೀ. ವಿಸ್ತೀರ್ಣದ ನಾಗರಿಕ ಸೌಲಭ್ಯಗಳ ನಿವೇಶನವನ್ನು ಚಿಕ್ಕಬಳ್ಳಾಪುರದ ಕಾಂಗ್ರೆಸ್ ಭವನ ಟ್ರಸ್ಟ್ ಇವರಿಗೆ ಉಚಿತವಾಗಿ ಮಂಜೂರು ಮಾಡುವ ಬಗ್ಗೆ ಕ್ಯಾಬಿನೆಟ್ ಅನುಮೋದನೆ ನೀಡಲಾಗಿದೆ.
BREAKING: ಮೇ.15ರವರೆಗೆ ಭಾರತದ 24 ವಿಮಾನ ನಿಲ್ದಾಣ ಮುಚ್ಚುವಿಕೆ ಮುಂದುವರೆಸಿ ಕೇಂದ್ರ ಸರ್ಕಾರ ಆದೇಶ
BREAKING: ಭಾರತ-ಪಾಕಿಸ್ತಾನ ನಡುವೆ ಉದ್ವಿಗ್ನತೆ: IPL ಪಂದ್ಯಾವಳಿ ಒಂದು ವಾರ ಮುಂದೂಡಿಕೆ | IPL Match 2025