ಮೈಸೂರು: ಜಿಲ್ಲೆಯ ಜೀವನಾಡಿ ಕಾವೇರಿಯ ಕೆಆರ್ ಎಸ್ ಅಣೆಕಟ್ಟೆಗೆ ಬಾಗಿನ ಅರ್ಪಿಸಿದ ಬಳಿಕ, ಮುಖ್ಯಮಂತ್ರಿ ಸಿದ್ಧರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಕಬಿನಿ ಜಲಾಶಯಕ್ಕೆ ಬಾಗಿನವನ್ನು ಅರ್ಪಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಕೃಷ್ಣರಾಜಸಾಗರ ಜಲಾಶಯ ಭರ್ತಿಯಾಗಿರುವ ಹಿನ್ನೆಲೆಯಲ್ಲಿ ಬಾಗಿನ ಅರ್ಪಿಸಿದರು. ಉಪಮುಖ್ಯಮಂತ್ರಿ ಹಾಗೂ ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್, ಸಚಿವರಾದ ಡಾ. ಹೆಚ್.ಸಿ. ಮಹದೇವಪ್ಪ, ಎನ್. ಚೆಲುವರಾಯಸ್ವಾಮಿ, ವೆಂಕಟೇಶ್, ಮೈಸೂರು ಹಾಗೂ ಮಂಡ್ಯ ಜಿಲ್ಲೆಯ ಶಾಸಕರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.
ಈ ಬಳಿಕ ಮೈಸೂರಿನ ಕಬಿನಿ ಜಲಾಶಯಕ್ಕೆ ತೆರಳಿದಂತ ಅವರು, ಪೂಜೆ ನೆರವೇರಿಸಿ, ಕಬಿನಿ ಜಲಾಶಯಕ್ಕೆ ಬಾಗಿನವನ್ನು ಅರ್ಪಿಸಿದರು.
ಮುಂದಿನ 10 ವರ್ಷವೂ ಬಾಗಿನ ಅರ್ಪಿಸುವ ಶಕ್ತಿ ಕಾವೇರಿ ತಾಯಿ ನೀಡುತ್ತಾಳೆ: ಡಿಸಿಎಂ ಡಿ.ಕೆ.ಶಿವಕುಮಾರ್
ಮಂಡ್ಯ : “ಈ ಬಾರಿ ಉತ್ತಮ ಮಳೆಯಾಗಿರುವ ಪರಿಣಾಮ ಈಗಾಗಲೇ ತಮಿಳುನಾಡಿಗೆ 84 ಟಿಎಂಸಿಯಷ್ಟು ನೀರು ತಲುಪಿದೆ. ಮುಂದಿನ 10 ವರ್ಷವೂ ಬಾಗಿನ ಅರ್ಪಿಸುವಂತಹ ಆಶೀರ್ವಾದವನ್ನು ಕಾವೇರಿ ತಾಯಿ ನಮ್ಮ ಸರ್ಕಾರಕ್ಕೆ ಮಾಡುತ್ತಾಳೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹರ್ಷ ವ್ಯಕ್ತಪಡಿಸಿದರು.
ಕೆಆರ್ ಎಸ್ ಅಣೆಕಟ್ಟಿಗೆ ಬಾಗಿನ ಸಮರ್ಪಿಸಿದ ನಂತರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು “ಜುಲೈ ತಿಂಗಳಿನಲ್ಲಿ ಪ್ರತಿ ದಿನ 1 ಟಿಎಂಸಿಯಂತೆ ತಮಿಳುನಾಡಿಗೆ 40 ಟಿಎಂಸಿ ನೀರು ಹರಿಸಬೇಕಿತ್ತು. ಅದಕ್ಕಿಂತ ಹೆಚ್ಚಿನ ನೀರು ಹರಿದು ತಾಯಿ ಕಾವೇರಿ ನೆಮ್ಮದಿ ಶಾಂತಿ ತಂದಿದ್ದಾಳೆ” ಎಂದು ಹೇಳಿದರು.
“ಮೇಕೆದಾಟು ಯೋಜನೆಯಿಂದ ತಮಿಳುನಾಡಿಗೆ ಹೆಚ್ಚಿನ ಪ್ರಯೋಜನವಿದೆ. ಸಂಕಷ್ಟ ಕಾಲದಲ್ಲಿ ಅವರ ಪಾಲಿನ 177 ಟಿಎಂಸಿ ನೀರನ್ನು ಅವರಿಗೆ ಹರಿಸಬಹುದು. ಸುಮಾರು 400 ಮೆ.ವ್ಯಾ ವಿದ್ಯುತ್ ತಯಾರಿಸಬಹುದು. ಈ ಅಣೆಕಟ್ಟು ಕಟ್ಟಲು ನ್ಯಾಯಲಯ ಅನುವು ಮಾಡಿಕೊಡುತ್ತದೆ ಎಂದು ನಂಬಿದ್ದೇವೆ. ತಮಿಳುನಾಡಿನ ಜನತೆಗೆ ಭಗವಂತನ ಕೃಪೆಯಿಂದ ಜ್ಞಾನೋದಯವಾಗುತ್ತದೆ. ನಮ್ಮ ಕಾಲದಲ್ಲಿ ಅಣೆಕಟ್ಟು ನಿರ್ಮಾಣಕ್ಕೆ ಅನುವು ಮಾಡಿಕೊಡುತ್ತಾರೆ ಎಂದು ನಂಬಿದ್ದೇವೆ” ಎಂದರು.
“2018- 19 ರಲ್ಲಿ 404 ಟಿಎಂಸಿ, 2019-20 ರಲ್ಲಿ 275, 2020- 21 ರಲ್ಲಿ 211, 2021-22 ರಲ್ಲಿ 281, 2022- 23 ರಲ್ಲಿ 667 ಹಾಗೂ 2023-24 ರಲ್ಲಿ 87 ಟಿಎಂಸಿ ನೀರು ತಮಿಳುನಾಡಿಗೆ ಹರಿದಿದೆ. ಈ ವರ್ಷ 84 ಟಿಎಂಸಿ ನೀರು ಹರಿದಿದ್ದು, ಇದೇ ರೀತಿ ಮಳೆ ಬರಲಿ ಎಂದು ಎಲ್ಲರೂ ಪ್ರಾರ್ಥನೆ ಮಾಡಬೇಕು” ಎಂದು ಹೇಳಿದರು.
ಕನ್ನಂಬಾಡಿ ಕಟ್ಟೆ, ನಮ್ಮೆಲ್ಲರ ಅನ್ನದ ತಟ್ಟೆ
“ಕನ್ನಂಬಾಡಿ ಕಟ್ಟೆ ನಮ್ಮೆಲ್ಲರ ಅನ್ನದ ತಟ್ಟೆ. ಮೈಸೂರು, ಚಾಮರಾಜನಗರ, ಹಾಸನ, ಮಂಡ್ಯ ಮತ್ತು ತಮಿಳುನಾಡಿನವರು ಈ ನದಿಯ ಮೂಲಕ ಅನ್ನ ಬೆಳೆಯುತ್ತಿದ್ದೇವೆ. ಎಲ್ಲರ ಪಾಲಿನ ಜೀವನದಿ ಕಾವೇರಿಗೆ 92 ವರ್ಷ ಕಳೆದರೂ ನಮನ ಸಲ್ಲಿಸುತ್ತಿದ್ದೇವೆ. ತಾಯಿ ಚಾಮುಂಡೇಶ್ವರಿಯಲ್ಲಿ ಈ ವರ್ಷ ಉತ್ತಮ ಮಳೆಯಾಗಲಿ ಎಂದು ಬೇಡಿಕೊಂಡಿದ್ದೆವು. ನಮ್ಮ ಬದುಕು ಉಳಿಸು ಎಂದು ಭಕ್ತಿಯಿಂದ ಪ್ರಾರ್ಥನೆ ಸಲ್ಲಿಸಿದ್ದೆವು, ಮನುಷ್ಯ ಪ್ರಯತ್ನಕ್ಕೆ ಸೋಲಾಗಬಹುದು ಆದರೆ ಪ್ರಾರ್ಥನೆಗೆ ಎಂದೂ ಸೋಲಾಗುವುದಿಲ್ಲ ಎನ್ನುವುದಕ್ಕೆ ಕಾವೇರಿ ತಾಯಿ ತುಂಬಿ ಹರಿಯುತ್ತಿರುವುದೇ ಸಾಕ್ಷಿ. ಸ್ವರ್ಣಗೌರಿ ಹಬ್ಬದ ದಿನ ಮನೆಯ ಹೆಣ್ಣುಮಕ್ಕಳಿಗೆ ಬಾಗಿನ ಅರ್ಪಿಸಿದಂತೆ ಶುಭಗಳಿಗೆಯ ಅಭಿಜಿನ್ ಲಗ್ನದಲ್ಲಿ ಕಾವೇರಿ ತಾಯಿಗೆ ಬಾಗಿನ ಅರ್ಪಿಸಲಾಗಿದೆ” ಎಂದರು.
ರಾಜ್ಯದ ಅಲ್ಪ ಸಂಖ್ಯಾತ ವಿದ್ಯಾರ್ಥಿಗಳ ಗಮನಕ್ಕೆ: ವಿದೇಶಿ ವಿದ್ಯಾಭ್ಯಾಸಕ್ಕಾಗಿ ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ