ಬೆಂಗಳೂರು : ಕಾಂಗ್ರೆಸ್ ಸರ್ಕಾರ ಕ್ಕೆ ಬಡವರ ಪರ ಕಾಳಜಿ ಇದೆ. ಆದಕ್ಕಾಗಿಯೇ ಗ್ಯಾರಂಟಿ ಆರ್ಥಿಕ ಹೊರೆ ನಡುವೆಯೂ 1,80,253 ಬಡ ಕುಟುಂಬಗಳಿಗೆ ಸೂರು ಕಲ್ಪಿಸುವ ಮಹತ್ವದ ತೀರ್ಮಾನ ಕೈಗೊಂಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಕೆ ಆರ್ ಪುರದ ನಗರೇಶ್ವರ ನಾಗೇನಹಳ್ಳಿ ಬಳಿ ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮ ದಲ್ಲಿ ರಾಜ್ಯಾ ದ್ಯಂತ ಏಕ ಕಾಲದಲ್ಲಿ 36.789 ಮನೆಗಳ ಹಂಚಿಕೆಗೆ ಚಾಲನೆ ನೀಡಿ ಮಾತನಾಡಿ, ಬಡವರು ಸಂಕಷ್ಟ ದಲ್ಲಿದ್ದಾರೆ ಎಂದು ಜಮೀರ್ ಅಹಮದ್ ಖಾನ್ ಹೇಳಿದ ತಕ್ಷಣ ಫಲಾನುಭವಿಗಳ ವಂತಿಕೆ ಐದು ಲಕ್ಷ ರೂ ಸರ್ಕಾರವೇ ಭರಿಸುವ ತೀರ್ಮಾನ ಕೈಗೊಂಡಿತು. ಇಂದು 36.789 ಮನೆ ನೀಡಿದ್ದು ಉಳಿದ ಮನೆ ಮುಂದಿನ ದಿನಗಳಲ್ಲಿ ನೀಡಲಾಗುವುದು ಎಂದು ತಿಳಿಸಿದರು.
ಬಿಜೆಪಿ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎಂದು ಹೇಳುತ್ತದೆ. ಆದರೆ, ಪ್ರಧಾನ ಮಂತ್ರಿ ಅವಾಸ್ ಯೋಜನೆ ಎಂದು ಬಡವರು ಮನೆ ಕಟ್ಟಿಕೊಳ್ಳಲು 1.50 ಲಕ್ಷ ಸಬ್ಸಿಡಿ ನೀಡಿ 1 ಲಕ್ಷ 38 ಸಾವಿರ ಜಿ ಎಸ್ ಟಿ ಕಟ್ ಮಾಡುತ್ತದೆ. ಇದು ಇವರ ಕಾಳಜಿ ನಾ ಎಂದು ಪ್ರೆಶ್ನೆ ಮಾಡಿದರು.
ನಾವು ನುಡಿದಂತೆ ನಡೆದಿದ್ದೇವೆ. ಪ್ರತಿ ಕುಟುಂಬ ಕ್ಕೆ ನಮ್ಮ ಗ್ಯಾರಂಟಿ ಯೋಜನೆ ಯಿಂದ ತಿಂಗಳಿಗೆ ಕನಿಷ್ಠ ಐದು ಸಾವಿರ ರೂ. ದೊರೆಯುತ್ತಿದೆ. ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ಬಡವರ ಪರ ಬದ್ಧತೆ. ಬಿಜೆಪಿ ಬರೀ ಸುಳ್ಳು ಹೇಳುವುದು ಬಿಟ್ಟರೆ ಅವರ ಅವಧಿಯಲ್ಲಿ ಒಂದೇ ಒಂದು ಮನೆ ಕೊಟ್ಟಿಲ್ಲ. ಬುರುಡೆ ಬಿಟ್ಟುಕೊಂಡು ಹೋಗುತ್ತಿದ್ದಾರೆ. ವಿಧಾನ ಸಭೆ ಚುನಾವಣೆ ಯಲ್ಲಿ ಅವರಿಗೆ ಪಾಠ ಕಲಿಸಿದ್ದೀರಿ, ಲೋಕಸಭೆ ಚುನಾವಣೆ ಯಲ್ಲೂ ತಕ್ಕ ಪಾಠ ಕಳಿಸಿ ಎಂದು ಹೇಳಿದರು.
ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮಾತನಾಡಿ, ಅನ್ನ, ಆರೋಗ್ಯ, ಅಕ್ಷರ, ಆಶ್ರಯ ಇವು ನಮ್ಮ ಸರ್ಕಾರದ ಮೂಲಮಂತ್ರ. ಅಸಹಾಯಕರ, ಬಡವರ ಏಳಿಗೆಯೇ ನಮ್ಮ ಆದ್ಯತೆ. ಉದ್ಯೋಗ, ಕುಡಿಯುವ ನೀರಿಗೆ ಮೊದಲು ಪ್ರಾಶಸ್ತ್ಯ ನೀಡುತ್ತೇವೆ ಎಂದು ಹೇಳಿದರು.
ಈ ದೇಶದ ಬಡವರಿಗೆ ಮನೆ ನೀಡಬೇಕು ಎಂದು ಮೊದಲು ಕಾನೂನು ತಂದಿದ್ದು ಇಂದಿರಾಗಾಂಧಿ ಅವರು. ಮನೆ ಬಾಗಿಲಿಗೆ ಬಂತು ಸರ್ಕಾರ ಕಾರ್ಯಕ್ರಮದಲ್ಲಿ ಸಾಕಷ್ಟು ಜನ ರಾಜೀವ್ ಗಾಂಧಿ ವಸತಿ ನಿಗಮದ ಮನೆಗಳಿಗೆ ಸರ್ಕಾರ ನಿಗಧಿ ಮಾಡಿರುವಷ್ಟು ಹಣ ನೀಡಲು ಆಗುವುದಿಲ್ಲ ಎಂದು ಮನವಿ ಸಲ್ಲಿಸಿದ್ದರು. ವಸತಿ ಸಚಿವರಾದ ಜಮೀರ್ ಅವರು ಕ್ಯಾಬಿನೆಟ್ ಮುಂದೆ ಇಟ್ಟು 5 ಲಕ್ಷವನ್ನು ಸರ್ಕಾರವೇ ನೀಡಿ ಬಡವರಿಗೆ ಮನೆ ನೀಡುವಂತೆ ಮಾಡಿದ್ದಾರೆ. ಇದು ಕರ್ನಾಟಕದ ಇತಿಹಾಸದಲ್ಲೇ ಐತಿಹಾಸಿಕ ತೀರ್ಮಾನ ಎಂದು ಹೇಳಿದರು.
ಬಡವರ ಮನೆ ಮೇಲೆಯೂ ಕೇಂದ್ರ ಸರ್ಕಾರ ಜಿಎಸ್‌ಟಿ ಹಾಕಿದೆ. ಇದು ದುರ್ದೈವದ ಸಂಗತಿ. ಪ್ರಧಾನ ಮಂತ್ರಿಗಳು, ಕೇಂದ್ರ ಸಚಿವರಿಗೆ ಇಲ್ಲಿಂದಲೇ ಮನವಿ ಮಾಡುತ್ತೇನೆ. ಬಡವರ ಮನೆ ಮೇಲೆ ಜಿಎಸ್ ಟಿ ಹಾಕಬೇಡಿ ಎಂದು ಒತ್ತಾಯಿಸಿದರು.
ಈ ದೇಶದ ಬಡವರಿಗೆ ಅಕ್ಕಿ, ಮನೆ, ಭೂಮಿ ನೀಡುವ ಕಾರ್ಯಕ್ರಮ ಪ್ರಾರಂಭ ಮಾಡಿದ್ದೇ ಕಾಂಗ್ರೆಸ್ ಸರ್ಕಾರ. ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳನ್ನು ನೋಡಿ ಮೋದಿಯವರು ಪ್ರತಿ ದಿನ ನಮ್ಮ ಗ್ಯಾರಂಟಿ ಯೋಜನೆಗಳು ಎಂದು ಜಾಹಿರಾತು ನೀಡುತ್ತಿದ್ದಾರೆ. ಬಿಜೆಪಿ ಗ್ಯಾರಂಟಿ ಎಂದು ಹೇಳದೆ ಮೋದಿ ಗ್ಯಾರಂಟಿ ಎಂದು ಕರೆಯುತ್ತಿದ್ದಾರೆ ಎಂದು ಲೇವಡಿ ಮಾಡಿದರು.
ಸಿದ್ದರಾಮಯ್ಯ ಅವರಿಂದ ಮಾತ್ರ ಸಾಧ್ಯ
ಜಮೀರ್ ಅಹಮದ್ ಖಾನ್ ಮಾತನಾಡಿ, ಇಂದು ವಸತಿ ಸಚಿವನಾಗಿ ನನಗೆ ಅತ್ಯಂತ ಸಂತೋಷದ ದಿನ. 1,80,253 ಕುಟುಂಬಗಳು 2015 ರಿಂದ ಮನೆ ಇಲ್ಲದೆ ಸಂಕಷ್ಟ ದಲ್ಲಿದ್ದವು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದಾಗಿ ಮನೆ ಸಿಕ್ಕಂತಾಗಿದೆ. ಬೇರೆ ಯಾರೇ ಇದ್ದರೂ ಇದು ಸಾಧ್ಯವಾಗುತ್ತಿರಲಿಲ್ಲ. ಸಿದ್ದರಾಮಯ್ಯ ಅವರ ಬಳಿ ನಾನು ಪ್ರಸ್ತಾಪ ಮಾಡಿದಾಗ ಐದು ಗ್ಯಾರಂಟಿ ಯಿಂದ ಒಪ್ಪುವರೋ ಇಲ್ಲವೋ ಎಂಬ ಅತಂಕದಲ್ಲಿದ್ದೆ. ಆದರೆ ಅವರಿಗೆ ಬಡವರ ಬಗ್ಗೆ ಕಾಳಜಿ ಇರುವುದರಿಂದ ಒಪ್ಪಿ 6170 ಕೋಟಿ ರೂ. ಪೈಕಿ ಮೊದಲ ಕಂತು 500 ಕೋಟಿ ರೂ. ಬಿಡುಗಡೆ ಮಾಡಿದರು. ಮುಂದಿನ ವರ್ಷದ ವೇಳೆಗೆ 1,80,253 ಮನೆ ಸಹ ಹಂಚಿಕೆ ಮಾಡಲಾಗುವುದು ಎಂದು ತಿಳಿಸಿದರು.
ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್, ಶಾಸಕ ಭೈರತಿ ಬಸವರಾಜ್, ಮುಖ್ಯಮಂತ್ರಿ ಯವರ ರಾಜಕೀಯ ಕಾರ್ಯದರ್ಶಿ ಗಳಾದ ನಸೀರ್ ಅಹಮದ್, ಗೋವಿಂದ ರಾಜು, ಪರಿಷತ್ ಸದಸ್ಯ ಪುಟ್ಟಣ್ಣ, ಕೆ ಎಂ ಡಿಸಿ ಅಧ್ಯಕ್ಷ ಅಲ್ತಾಫ್ ಖಾನ್, ಮಾಜಿ ಶಾಸಕಿ ಪೂರ್ಣಿಮಾ, ಮುಖಂಡ ರಾದ ಡಿ. ಕೆ. ಮೋಹನ್ , ಹಣಕಾಸು ಇಲಾಖೆ ಹೆಚ್ಚುವರಿ ಕಾರ್ಯದರ್ಶಿ ಅತೀಕ್, ವಸತಿ ಇಲಾಖೆ ಕಾರ್ಯದರ್ಶಿ ನವೀನ್ ರಾಜ್ ಸಿಂಗ್, ಕೊಳಗೇರಿ ಅಭಿವೃದ್ಧಿ ಮಂಡಳಿ ಆಯುಕ್ತ ವೆಂಕಟೇಶ್, ಪ್ರಧಾನ ಅಭಿಯಂತರ ಬಾಲರಾಜ್, ಗೃಹ ಮಂಡಳಿ ಆಯುಕ್ತರಾದ ಕವಿತಾ ಮಣ್ಣಿಕೇರಿ, ರಾಜೀವ್ ಗಾಂಧಿ ವಸತಿ ನಿಗಮ ವ್ಯವಸ್ಥಾಪಕ ನಿರ್ದೇಶಕರಾದ ಸುಶೀಲಮ್ಮ ಉಪಸ್ಥಿತರಿದ್ದರು.
BIG NEWS: ಲೋಕಸಭಾ ಚುನಾವಣೆ: ‘ಕರ್ನಾಟಕದ ಕ್ಷೇತ್ರ’ಗಳಿಗೆ ‘ಬಿಜೆಪಿ ಮೊದಲ ಪಟ್ಟಿ’ಯಲ್ಲಿ ಘೋಷಣೆಯಾಗದ ಟಿಕೆಟ್
ಭಾರತದಾದ್ಯಂತ 1.62 ಲಕ್ಷ ಕೋಟಿ ವೆಚ್ಚದ ‘ತೈಲ ಮತ್ತು ಅನಿಲ ಯೋಜನೆ’ಗೆ ಪ್ರಧಾನಿ ಮೋದಿ ಚಾಲನೆ