ಬೆಂಗಳೂರು: ಕರ್ನಾಟಕ ವಿಧಾನಸಭೆಯ ಇಂದಿನ ಕಲಾಪವು ಕೇವಲ ಗಂಭೀರ ಚರ್ಚೆಗಳಿಗೆ ಮಾತ್ರವಲ್ಲದೆ, ರಾಜಕೀಯ ಕಾಲೆಳೆಯುವಿಕೆ, ಭವಿಷ್ಯದ ಮುಖ್ಯಮಂತ್ರಿ ಅಭ್ಯರ್ಥಿಗಳ ಕುರಿತಾದ ಸ್ವಾರಸ್ಯಕರ ವಾದ-ಪ್ರತಿವಾದಗಳಿಗೆ ಸಾಕ್ಷಿಯಾಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿರೋಧ ಪಕ್ಷದ ನಾಯಕರನ್ನು ಕೆಣಕುತ್ತಲೇ, ತಮ್ಮ ಪಕ್ಷದ ಆಂತರಿಕ ರಾಜಕೀಯದ ಪ್ರಶ್ನೆಗಳಿಗೆ ಅತ್ಯಂತ ಚಾಣಾಕ್ಷತನದಿಂದ ಉತ್ತರಿಸಿದರು.
‘ನಿನಗೆ ಸಿಎಂ ಆಗೋ ಆಸೆ ಇಲ್ವಾ ಅಶೋಕ್?’
ಬಜೆಟ್ ಮೇಲಿನ ಚರ್ಚೆಯ ನಡುವೆ ಸಿಎಂ ಸಿದ್ದರಾಮಯ್ಯ ಅವರು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರನ್ನು ನೇರವಾಗಿಯೇ ಪ್ರಶ್ನಿಸಿದರು. “ನಿನಗೆ ಸಿಎಂ ಆಗೋ ಆಸೆ ಇಲ್ವಾ ಅಶೋಕ್?” ಎಂದು ಕೇಳಿದಾಗ ಇಡೀ ಸದನ ನಗೆಗಡಲಲ್ಲಿ ತೇಲಿತು. ಇದಕ್ಕೆ ಉತ್ತರಿಸಲಾಗದೆ ಅಶೋಕ್ ಕೇವಲ ನಗುವಿನ ಮೂಲಕವೇ ಪ್ರತಿಕ್ರಿಯಿಸಿದರು.
ಮಾತು ಮುಂದುವರಿಸಿದ ಸಿಎಂ, “ಅಶೋಕ್ ಆದ್ರೂ ಆಗಲಿ, ಅರವಿಂದ ಬೆಲ್ಲದ್ ಅಥವಾ ಅಶ್ವಥ್ ನಾರಾಯಣ್ ಆದ್ರೂ ನನಗೆ ಸಂತೋಷವೇ. ಆದರೆ ವಿಜಯೇಂದ್ರ ನಿಮ್ಮನ್ನು ಸಿಎಂ ಆಗಲು ಬಿಡುವುದಿಲ್ಲ” ಎನ್ನುವ ಮೂಲಕ ಬಿಜೆಪಿಯ ಆಂತರಿಕ ಭಿನ್ನಮತವನ್ನು ಕೆದಕಿದರು.
ಡಿಕೆಶಿ ಹೆಸರನ್ನು ಕೈಬಿಟ್ಟರಾ ಸಿಎಂ?
ಈ ವೇಳೆ ಬಿಜೆಪಿ ಶಾಸಕ ಸುನಿಲ್ ಕುಮಾರ್ ಮಧ್ಯಪ್ರವೇಶಿಸಿ, “ನೀವು ಎಲ್ಲರ ಹೆಸರನ್ನೂ ಹೇಳುತ್ತಿದ್ದೀರಿ, ಆದರೆ ಡಿ.ಕೆ. ಶಿವಕುಮಾರ್ ಹೆಸರನ್ನು ಯಾಕೆ ಹೇಳುತ್ತಿಲ್ಲ?” ಎಂದು ಚುಚ್ಚಿದರು. ಇದಕ್ಕೆ ಜಾಣ್ಮೆಯಿಂದ ಉತ್ತರಿಸಿದ ಸಿದ್ದರಾಮಯ್ಯ, “ಹೈಕಮಾಂಡ್ ಯಾವಾಗ ಹೇಳುತ್ತದೋ ಆಗ ಅವರು ಸಿಎಂ ಆಗುತ್ತಾರೆ. ಅಲ್ಲಿಯವರೆಗೂ ನಾನೇ ಸಿಎಂ” ಎಂದು ಸ್ಪಷ್ಟಪಡಿಸಿದರು. ಎಂ.ಬಿ. ಪಾಟೀಲ್, ಮುನಿಯಪ್ಪ, ದಿನೇಶ್ ಗುಂಡೂರಾವ್ ಅವರ ಹೆಸರುಗಳನ್ನು ಅರ್ಹರ ಪಟ್ಟಿಯಲ್ಲಿ ಸೇರಿಸಿದ ಸಿಎಂ, ಡಿಕೆಶಿ ಹೆಸರನ್ನು ಪ್ರತ್ಯೇಕವಾಗಿ ಉಲ್ಲೇಖಿಸದಿರುವುದು ಸದನದಲ್ಲಿ ಕುತೂಹಲ ಮೂಡಿಸಿತು.
ಸ್ಪೀಕರ್ ಖಾದರ್ ಮಂತ್ರಿ ಆಗ್ತಾರಾ?
ಶಾಸಕರ ಗ್ರೂಪ್ ಫೋಟೋ ಶೂಟ್ ವಿಚಾರವನ್ನೂ ಅಶೋಕ್ ಪ್ರಸ್ತಾಪಿಸಿದರು. “ಐದು ವರ್ಷಕ್ಕೊಮ್ಮೆ ಫೋಟೋ ತೆಗಿಸುತ್ತಾರೆ, ಸ್ಪೀಕರ್ ಖಾದರ್ ಅವರು ಈಗಲೇ ಯಾಕೆ ತೆಗಿಸಿದರು? ಇವರು ಮಂತ್ರಿ ಆಗೋಕೆ ಹೊರಟಿದ್ದಾರಾ?” ಎಂದು ಪ್ರಶ್ನಿಸಿದರು. ಇದಕ್ಕೆ ಟಾಂಗ್ ನೀಡಿದ ಸಿಎಂ, “ಖಾದರ್ ಎಲ್ಲಿಗೂ ಹೋಗಲ್ಲ, ಅವರು 2028ರಲ್ಲೂ ಗೆಲ್ಲುತ್ತಾರೆ. ನೀನು ಜಾಕ್ ಹಾಕಬೇಡ, ನಿನ್ನ ಕಿತಾಪತಿಗೆ ಅವರು ತಲೆ ಕೆಡಿಸಿಕೊಳ್ಳಲ್ಲ” ಎಂದು ಸಮಾಧಾನಪಡಿಸಿದರು.
224 ಶಾಸಕರೂ ಸಿಎಂ ಆಗಲು ಅರ್ಹರು!
ಚರ್ಚೆಯ ಅಂತ್ಯದಲ್ಲಿ ತತ್ವಜ್ಞಾನಿಯಂತೆ ಮಾತನಾಡಿದ ಸಿದ್ದರಾಮಯ್ಯ, “ಈ ಸದನದಲ್ಲಿರುವ 224 ಶಾಸಕರೂ ಮುಖ್ಯಮಂತ್ರಿಯಾಗಲು ಅರ್ಹರೇ. ಎಂ.ಬಿ. ಪಾಟೀಲ್, ಮುನಿಯಪ್ಪ ಸೇರಿದಂತೆ ಎಲ್ಲರಿಗೂ ಆ ಯೋಗ್ಯತೆ ಇದೆ. ಆದರೆ ಯೋಗ್ಯತೆ ಇದ್ದವರಿಗೂ ಅವಕಾಶಗಳು ಸಿಗಬೇಕು ಅಷ್ಟೇ” ಎಂದು ಮಾರ್ಮಿಕವಾಗಿ ನುಡಿದರು.
ಒಟ್ಟಾರೆಯಾಗಿ, ಮುಂದಿನ ಮುಖ್ಯಮಂತ್ರಿ ಯಾರು ಎಂಬ ಗಂಭೀರ ಪ್ರಶ್ನೆಯನ್ನು ಸಿದ್ದರಾಮಯ್ಯ ಅವರು ತಮ್ಮ ವಾಗ್ಚಾತುರ್ಯದ ಮೂಲಕ ಹಾಸ್ಯದ ಕಡೆಗೆ ತಿರುಗಿಸುವಲ್ಲಿ ಯಶಸ್ವಿಯಾದರು.
ಬೆಂಗಳೂರಿನ ಸರ್ವಜ್ಞನಗರದಲ್ಲಿ ‘ಹಸಿರು ಕ್ರಾಂತಿ’: ‘ಸಚಿವ ಕೆ.ಜೆ. ಜಾರ್ಜ್’ ಅವರ ದೂರದೃಷ್ಟಿಯ ಫಲವಿದು!








