ಬೆಂಗಳೂರು: ಶಿಕ್ಷಣ ಇಲಾಖೆಯಿಂದ 5, 8, 9 ಮತ್ತು 11ನೇ ತರಗತಿ ಬೋರ್ಡ್ ಪರೀಕ್ಷೆ ವಿಚಾರದಲ್ಲಿ ವಿದ್ಯಾರ್ಥಿಗಳ ಭವಿಷ್ಯದ ಜೊತೆಗೆ ಚೆಲ್ಲಾಟವಾಡುತ್ತಿದೆ ಎಂಬುದಾಗಿ ಪ್ರತಿಪಕ್ಷ ನಾಯಕ ಆರ್.ಅಶೋಕ್ ಕಿಡಿಕಾರಿದ್ದಾರೆ.
ಈ ಬಗ್ಗೆ ಎಕ್ಸ್ ಮಾಡಿರುವಂತ ಅವರು, 5, 8, 9 and 11 ನೇ ತರಗತಿಗಳ ವಿದ್ಯಾರ್ಥಿಗಳಿಗೆ ಪಬ್ಲಿಕ್ ಪರೀಕ್ಷೆ ನಡೆಸುತ್ತೇವೆ ಎಂದು ಯಾವುದೇ ಪೂರ್ವಸಿದ್ಧತೆ, ಮುಂದಾಲೋಚನೆ ಇಲ್ಲದೆ ಧಿಡೀರ್ ಆದೇಶ ಹೊರಡಿಸಿದ ಕಾಂಗ್ರೆಸ್ ಸರ್ಕಾರದ ಎಡಬಿಡಂಗಿ ನಿರ್ಧಾರದಿಂದ ವಿದ್ಯಾರ್ಥಿಗಳ ಪರಿಸ್ಥಿತಿ ಅತಂತ್ರವಾಗಿದ್ದು, ಪರೀಕ್ಷೆಗಳ ದಿನಾಂಕ ಪದೇ ಪದೇ ಬದಲಾಗುತ್ತಿರುವುದರಿಂದ ಪೋಷಕರು ವಿದ್ಯಾರ್ಥಿಗಳು ಗೊಂದಲಕ್ಕೀಡಾಗಿದ್ದಾರೆ ಎಂದಿದ್ದಾರೆ.
ಶಿಕ್ಷಣ ಇಲಾಖೆ ಇಷ್ಟೊಂದು ದೊಡ್ಡ ಗೊಂದಲದ ಗೂಡಾಗಿರುವ ಸಂದರ್ಭದಲ್ಲಿ ಸಮಸ್ಯೆಗೆ ಪರಿಷ್ಕಾರ ಹುಡುಕಿ ಪೋಷಕರಿಗೆ, ವಿಧ್ಯಾರ್ಥಿಗಳಿಗೆ ಧೈರ್ಯ ತುಂಬುವುದು ಬಿಟ್ಟು, ಸಹೋದರಿಯ ಚುನಾವಣೆಯಲ್ಲಿ ಸಂಪೂರ್ಣ ಮಗ್ನರಾಗಿರುವ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟ ಮುಂದುವರೆಸಿದ್ದಾರೆ ಎಂಬುದಾಗಿ ಗುಡುಗಿದ್ದಾರೆ.
ಸಿಎಂ ಸಿದ್ಧರಾಮಯ್ಯನವರೇ, ನಿಮಗೆ ರಾಜ್ಯದ ಮಕ್ಕಳ ಭವಿಷ್ಯಕ್ಕಿಂತ ಚುನಾವಣೆಯೇ ಮುಖ್ಯವಾದರೆ ಶಿಕ್ಷಣ ಸಚಿವರಿಂದ ರಾಜೀನಾಮೆ ಪಡೆದು ಫುಲ್ ಟೈಮ್ ಪಕ್ಷದ ಕೆಲಸ ಮಾಡಲು ಹೇಳಿ. ಕಳೆದ 9 ತಿಂಗಳಿನಿಂದ ಪದೇ ಪದೇ ಎಡವಟ್ಟುಗಳ ಮೇಲೆ ಎಡವಟ್ಟುಗಳನ್ನು ಮಾಡುತ್ತಿದ್ದರೂ ಶಿಕ್ಷಣ ಸಚಿವರ ಮೇಲೆ ಯಾವ ಕ್ರಮ ಕೈಗೊಳ್ಳಲಾಗದ ನಿಮ್ಮ ಪರಿಸ್ಥಿತಿ ನೋಡಿದರೆ ತಾವು ಅಸಹಾಯಕರಾಗಿದ್ದೀರಿ ಅನ್ನಿಸುತ್ತಿದೆ ಎಂದು ವಾಗ್ಧಾಳಿ ನಡೆಸಿದ್ದಾರೆ.
ಬಿಜೆಪಿ- ಜೆಡಿಎಸ್ ಮೈತ್ರಿ ಸುಸೂತ್ರವಾಗಿ ಮುಂದುವರೆಯಲಿದೆ: ಬಿವೈ ವಿಜಯೇಂದ್ರ