ಶಿವಮೊಗ್ಗ : ಧರ್ಮಸ್ಥಳ ಕ್ಷೇತ್ರದ ಗೌರವ ಮತ್ತು ಘನತೆಯನ್ನು ಕುಗ್ಗಿಸಲು ಪ್ರಯತ್ನಿಸುತ್ತಿರುವವರ ವಿರುದ್ದ ಸೂಕ್ತಕ್ರಮ ಜರುಗಿಸಲು ಒತ್ತಾಯಿಸಿ ಸೋಮವಾರ ನಾಗರಿಕ ಸಮಿತಿ ಸೇರಿದಂತೆ ವಿವಿಧ ಸಮಿತಿಗಳ ಆಶ್ರಯದಲ್ಲಿ ಸಾಗರದ ಉಪವಿಭಾಗಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಬಿಜೆಪಿ ನಿಕಟಪೂರ್ವ ಅಧ್ಯಕ್ಷ ಟಿ.ಡಿ.ಮೇಘರಾಜ್ ಮಾತನಾಡಿ, ಧರ್ಮಸ್ಥಳ ಕ್ಷೇತ್ರಕ್ಕೆ ಮಸಿ ಬಳಿಯುವ ಕೆಲಸ ನಡೆಯುತ್ತಿದೆ. ಧರ್ಮಸ್ಥಳ ಮತ್ತು ಧರ್ಮಕರ್ತರಾದ ವೀರೇಂದ್ರ ಹೆಗ್ಗಡೆ ಅವರ ವಿರುದ್ದ ವ್ಯವಸ್ಥಿತ ಷಡ್ಯಂತ್ರ ನಡೆಯುತ್ತಿದೆ. ಯೋಜನೆಯ ಜನಪರ ಕಾರ್ಯ ಸಹಿಸದೆ ಕೆಲವರು ಕ್ಷೇತ್ರಕ್ಕೆ ಕೆಟ್ಟಹೆಸರು ತರಲು ಪ್ರಯತ್ನಿಸುತ್ತಿರುವುದು ಸ್ಪಷ್ಟವಾಗುತ್ತಿದೆ. ಮಹಿಳಾ ಸಬಲೀಕರಣ, ಮದ್ಯವರ್ಜನೆ, ಗ್ರಾಮೀಣಾಭಿವೃದ್ದಿಯಂತಹ ಉತ್ತಮ ಕೆಲಸಗಳನ್ನು ಧರ್ಮಸ್ಥಳ ಕ್ಷೇತ್ರದ ಮೂಲಕ ಮಾಡಲಾಗುತ್ತಿದೆ. ಹಿಂದಿನಿಂದಲೂ ಧರ್ಮಸ್ಥಳದ ಬಗ್ಗೆ ಇಂತಹ ಅಪಪ್ರಚಾರ ನಡೆಯುತ್ತಿದೆ. ತಕ್ಷಣ ಯೋಜನೆಯ ವಿರುದ್ದ ಅಪಪ್ರಚಾರ ಮಾಡುತ್ತಿರುವವರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕು. ಹಿಂದೂಧರ್ಮವನ್ನು ಅಸ್ಥಿರಗೊಳಿಸುವವರ ವಿರುದ್ದ ಕ್ರಮ ಜರುಗಿಸಿ ಎಂದು ಒತ್ತಾಯಿಸಿದರು.
ಮಹಿಳಾ ಪ್ರಮುಖರಾದ ಡಾ. ರಾಜನಂದಿನಿ ಕಾಗೋಡು ಮಾತನಾಡಿ, ಧರ್ಮಸ್ಥಳ ಹಿಂದೂ ಧರ್ಮೀಯರ ಶ್ರದ್ಧಾಭಕ್ತಿಯ ಕೇಂದ್ರವಾಗಿದೆ. ರಾಜ್ಯಸಭಾ ಸದಸ್ಯರಾಗಿರುವ ಡಾ. ವೀರೇಂದ್ರ ಹೆಗ್ಗಡೆಯವರು ಅತ್ಯಂತ ಉತ್ತಮ ಕೆಲಸ ಮಾಡುತ್ತಿದ್ದಾರೆ. ಕ್ಷೇತ್ರದ ಬಗ್ಗೆ ಅಪಪ್ರಚಾರ ಮಾಡುವವರ ಬಗ್ಗೆ ಹಲವು ಅನುಮಾನ ಮೂಡುತ್ತಿದೆ. ಬುರುಡೆ ಅಗೆಯುತ್ತೇವೆ ಎಂದು ಹೇಳುತ್ತಾರೆ. ಆದರೆ ತನಿಖೆ ಯಾವ ಹಂತದಲ್ಲಿದೆ ಎನ್ನುವುದು ಗೊತ್ತಾಗುತ್ತಿಲ್ಲ. ತನಿಖೆಯ ಅಂಶಗಳನ್ನು ಜನರಿಗೆ ತಿಳಿಸಿ. ತಕ್ಷಣ ತನಿಖೆಯ ವರದಿ ಕೊಟ್ಟು, ಧರ್ಮಕ್ಷೇತ್ರದ ಪಾವಿತ್ರ್ಯತೆ ಹಾಳು ಮಾಡುವವರ ವಿರುದ್ದ ಕ್ರಮ ಜರುಗಿಸಿ ಎಂದು ಒತ್ತಾಯಿಸಿದರು.
ನಾಗರೀಕ ಹಿತರಕ್ಷಣಾ ವೇದಿಕೆ ಸಂಚಾಲಕ ಎಸ್.ವಿ.ಹಿತಕರ ಜೈನ್ ಮಾತನಾಡಿ, ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ ವಿರುದ್ದ ಪಿತೂರಿ ನಡೆಯುತ್ತಿದೆ. ಧರ್ಮಸ್ಥಳದ ಬಗ್ಗೆ ತನಿಖೆ ನಡೆಯಲಿ, ಇದಕ್ಕೆ ಯಾರೂ ಆಕ್ಷೇಪ ಮಾಡುವುದಿಲ್ಲ. ಆದರೆ ದಿನಕ್ಕೊಂದು ಸ್ಥಳ ಅಗೆಸುತ್ತಾರೆ. ಆದರೆ ಅಲ್ಲಿ ಯಾವ ಕುರುಹು ಸಿಗುತ್ತಿಲ್ಲ. ತನಿಖೆಯ ಗೌಪ್ಯತೆ ಕಾಪಾಡುತ್ತಿಲ್ಲ. ಧರ್ಮಸ್ಥಳದ ಬಗ್ಗೆ ಸುಳ್ಳು ಆರೋಪ ಮಾಡುತ್ತಿರುವವರನ್ನು ಮೊದಲು ತನಿಖೆಗೆ ಒಳಪಡಿಸಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾ.ಸ.ನಂಜುಂಡಸ್ವಾಮಿ, ಪ್ರಸನ್ನ ಕೆರೆಕೈ, ಗಣೇಶ್ ಪ್ರಸಾದ್, ಮಲ್ಲಿಕಾರ್ಜುನ ಹಕ್ರೆ, ಕುಮಾರಸ್ವಾಮಿ ಕೊಪ್ಪ, ಲಕ್ಷ್ಮೀನಾರಾಯಣ ಬಿ.ಸಿ., ಮೈತ್ರಿ ಪಾಟೀಲ್, ಸವಿತಾ ವಾಸು, ಕಲಸೆ ಚಂದ್ರಪ್ಪ, ದೇವೇಂದ್ರಪ್ಪ, ಪ್ರಶಾಂತ ಕೆ.ಎಸ್., ವಿ.ಮಹೇಶ್, ಮಧುರಾ ಶಿವಾನಂದ್, ಧರ್ಮೇಂದ್ರ, ಮಂಜಯ್ಯ ಜೈನ್, ಲೋಕರಾಜ್ ಜೈನ್ ಇನ್ನಿತರರು ಹಾಜರಿದ್ದರು.
ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರಾಗಿ ‘MLC ದಿನೇಶ್ ಗೂಳಿಗೌಡ’ ನೇಮಕ
ಕಾಂಗ್ರೆಸ್ ಪಕ್ಷದಲ್ಲಿ ಸತ್ಯ ಹೇಳೋರಿಗೆ ಸ್ಥಳವಿಲ್ಲ: ಸಂಸದ ಬಸವರಾಜ ಬೊಮ್ಮಾಯಿ