ಚಿತ್ರದುರ್ಗ: ರಾಜ್ಯದಲ್ಲಿ ಗ್ರಾಮೀಣ ಭಾಗದ ಜನರಿಗೂ ಗುಣಮಟ್ಟದ ಚಿಕಿತ್ಸೆ ಸಿಗುವಂತ ಕೆಲಸವನ್ನು ಸರ್ಕಾರ ಮಾಡುತ್ತಿರುವುದಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
ಇಂದು ಚಿತ್ರದುರ್ಗ ಜಿಲ್ಲೆಯ ಚಿಕ್ಕಜಾಜೂರಿನಲ್ಲಿ ಸಮುದಾಯ ಆರೋಗ್ಯ ಕೇಂದ್ರ ಮತ್ತು ಸಿಬ್ಬಂದಿ ವಸತಿ ಗೃಹ ಉದ್ಘಾಟನೆ ಮಾಡಿ ಮಾತನಾಡಿದ ಅವರು, ಸುಸಜ್ಜಿತ ಕಟ್ಟಡ ನಿರ್ಮಿಸಿ 30 ಹಾಸಿಗೆ ಸಾಮರ್ಥ್ಯದ, ಅಧುನಿಕ ಸೌಲಭ್ಯ ಹೊಂದಿರುವ ಆಸ್ಪತ್ರೆ ಉದ್ಘಾಟನೆಗೊಂಡಿದೆ. ಈ ಭಾಗದ ಜನರು ಇದರ ಉಪಯೋಗ ಪಡೆದು ಕೊಳ್ಳಬೇಕು. ಗ್ರಾಮೀಣ ಪ್ರದೇಶದಲ್ಲಿ ಗುಣಮಟ್ಟದ ಅರೋಗ್ಯ ಸೌಲಭ್ಯಗಳು ಸರಿಯಾಗಿ ಸಿಗಬೇಕು. ಸರಿಯಾದ ರೀತಿಯಲ್ಲಿ ತಪಾಸಣೆ, ಅಗತ್ಯ ಇರುವವರಿಗೆ ಸರಿಯಾದ ಚಿಕಿತ್ಸೆ ನೀಡುವುದು ಇಂದಿನ ಅಗತ್ಯವಾಗಿದೆ. ಅದನ್ನೂ ಆರೋಗ್ಯ ಇಲಾಖೆ ವಿವಿಧ ಯೋಜನೆಗಳ ಮೂಲಕ ಮಾಡುತ್ತಿದೆ. ಸ್ವಾತಂತ್ರ್ಯ ಬಂದಾಗ ನಮ್ಮ ದೇಶದ ಜನರ ಸರಾಸರಿ ಆಯುಷ್ಯ 32-33 ವರ್ಷ ಇತ್ತು. ಈಗ ಅದು 70 ವರ್ಷಕ್ಕೆ ಏರಿಕೆಯಾಗಿದೆ. ಇದರಿಂದ ಆರೋಗ್ಯ ಕ್ಷೇತ್ರ ತನ್ನ ವ್ಯಾಪ್ತಿ,ಯೋಜನೆಗಳನ್ನು ವಿಸ್ತರಸಿಕೊಳ್ಳಬೇಕಾಗುತ್ತದೆ ಎಂದರು.
ಸರ್ಕಾರಿ ಆಸ್ಪತ್ರೆಗಳಲ್ಲಿಯೂ ನೂತನ ತಂತ್ರಜ್ಞಾನ ಅಳವಡಿಸಿಕೊಂಡು ಚಿಕಿತ್ಸೆ ನೀಡಲಾಗುತ್ತದೆ. ಸೂಪರ್ ಸ್ಪೆಷಾಲಿಟಿ ಟ್ರೀಟ್ಮೆಂಟ್ ಸರ್ಕಾರಿ ಜಿಲ್ಲಾಸ್ಪತ್ರೆಗಳಲ್ಲಿ ಲಭ್ಯವಿದೆ. ಇನ್ನು ಮುಂದೆ ತಾಲ್ಲೂಕು ಆಸ್ಪತ್ರೆಗಳಲ್ಲಿ ದಿನದ 24 ಗಂಟೆಯೂ ವೈದ್ಯರ ಲಭ್ಯತೆ ಇರುವಂತೆ ಮರುಹೊಂದಾಣಿಕೆ ಮಾಡುತ್ತಿದ್ದೇವೆ (ಪ್ರತಿ ಆಸ್ಪತ್ರೆಯಲ್ಲಿ ಕಡ್ಡಾಯವಾಗಿ 2 ಹೆರಿಗೆ ತಜ್ಞರು, 2ಮಕ್ಕಳ ತಜ್ಞರು, 2 ಅರವಳಿಕೆ ತಜ್ಞರು). ಸಿಬ್ಬಂದಿ ಹಾಜರಾತಿಗೂ ನೂತನ ಕ್ರಮ ಕೈಗೊಳ್ಳಲಾಗಿದ್ದು, ಶಿಕ್ಷಣ ಇಲಾಖೆಯು ಸಹ ನಮ್ಮ ಕ್ರಮ ಅನುಸರಿಸಲು ಮುಂದಾಗಿದೆ. ಹೆಚ್ ಡಿ ಪುರ ಆಸ್ಪತ್ರೆಯ ವಸತಿಗೃಹ ನಿರ್ಮಾಣಕ್ಕೆ ಹಣ ಮಂಜೂರು ಮಾಡುತ್ತೇವೆ ಎಂದು ಹೇಳಿದರು.
ಇಂದು ಒತ್ತಡದ ಬದುಕಿನ ಶೈಲಿಯಿಂದ ಅನೇಕ ರೋಗಗಳು ಬರುತ್ತಿವೆ. ಮೊದಲು ಸಾಂಕ್ರಾಮಿಕ ರೋಗಗಳಿಂದ ಜನರು ಅನಾರೋಗ್ಯಕ್ಕೆ ಒಳಗಾದರೆ, ಇಂದು ಅಸಾಂಕ್ರಾಮಿಕ ರೋಗಗಳು ನಮ್ಮನ್ನು ತೊಂದರೆಗೆ ದೂಡಿದೆ. ಹಾಗಾಗಿಯೇ ‘ಗೃಹ ಆರೋಗ್ಯ’ ಯೋಜನೆಯ ಮೂಲಕ ಪ್ರಾರಂಭಿಕ ಹಂತದಲ್ಲಿಯೇ ರೋಗ ಪತ್ತೆ ಹಚ್ಚುವ ಕಾರ್ಯಕ್ರಮ ರೂಪಿಸಲಾಗಿದೆ. ತಪಾಸಣೆ ನಡೆಸಿ, ಅಗತ್ಯ ಇರುವವರಿಗೆ ಜೀವನಪರ್ಯಂತ ಉಚಿತ ಔಷಧವನ್ನು ಸಹ ನೀಡಲಾಗುತ್ತದೆ. ಈವರೆಗೆ 1 ಕೋಟಿ ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಈ ಕಾರ್ಯ ಸರ್ಕಾರದಿಂದಲೇ ಅಗಬೇಕಾದ್ದು. ಮಾನಸಿಕ ಸಮಸ್ಯೆ ಗಳು ಸಹ ಇಂದು ಗಮನಾರ್ಹ ಮಟ್ಟದಲ್ಲಿ ಹೆಚ್ಚುತ್ತಿದೆ, ಆ ಕುರಿತು ಸಹ ಗಮನ ನೀಡಬೇಕಿದೆ ಎಂದರು.
ನಾಳೆ ಸಾಗರದ ‘ಸರ್ಕಾರಿ ಪದವಿ ಪೂರ್ವ ಕಾಲೇಜು ಸುವರ್ಣ ಮಹೋತ್ಸವ’: ಸಿದ್ಧತೆ ಪರಿಶೀಲಿಸಿದ ಶಾಸಕರು
ಡಿ.25ರಿಂದ 27ರವರೆಗೆ ಸಾಗರದಲ್ಲಿ ಅಯ್ಯಪ್ಪಸ್ವಾಮಿ ದೀಪೋತ್ಸವ- ಅಧ್ಯಕ್ಷ ಆರ್.ಚಂದ್ರು








