ಚಿತ್ರದುರ್ಗ: ಆಧುನಿಕತೆಯ ಭರಾಟೆಯಲ್ಲಿ ಸಂಕ್ರಾಂತಿಯ ಸುಗ್ಗಿ ಸಂಭ್ರಮಮರೆಯಾಗುತ್ತಿದೆ ಎಂದು ಚಿತ್ರದುರ್ಗದ ಅಪರ ಜಿಲ್ಲಾಧಿಕಾರಿ ಬಿಟಿ ಕುಮಾರಸ್ವಾಮಿ ಹೇಳಿದರು.
ನಗರದ ಐಯುಡಿಪಿ ಬಡಾವಣೆಯಲ್ಲಿ ಇತ್ತೀಚೆಗೆ ನಡೆದ ಸಂಕ್ರಾಂತಿ ಸಂಭ್ರಮ2025 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು,ಎಲ್ಲೆಡೆ ಸುಗ್ಗಿಯ ಸಂಭ್ರಮ ಮರೆಯಾಗುತ್ತಿದೆ.ಯುವಜನತೆ ಮೊಬೈಲ್ ನಲ್ಲಿ ಮುಳುಗಿದೆ.ಮಹಿಳೆಯರು,ಮಕ್ಕಳು ಟಿವಿಯ ಧಾರಾವಾಹಿ,ರಿಯಾಲಿಟಿ ಶೋನಂತಹ ಕಾರ್ಯಕ್ರಮಗಳಿಗೆ ಸೀಮಿತವಾಗಿದ್ದಾರೆಂದು ಅಸಮಧಾನ ವ್ಯಕ್ತಪಡಿಸಿದರು.
ಈ ಹಿಂದೆ ಹಳ್ಳಿಗಳಲ್ಲಿ ಸುಗ್ಗಿ ಸಂಭ್ರಮ ನೋಡೋದೇ ನಮ್ಮ ಪುಣ್ಯ ಎನಿಸುತ್ತಿತ್ತು.ಆದರೆ ಈಗ ಹಳ್ಳಿಗಳು ನಗರಪ್ರದೇಶಗಳಾಗಿ ಮಾರ್ಪಾಡುತ್ತಿವೆ.ಹೀಗಾಗಿ ಸಂಕ್ರಮಣದ ಸಂಸ್ಕ್ರತಿ,ಸಂಪ್ರದಾಯ ತೆರೆಮರೆಗೆ ಸರಿಯುತ್ತಿವೆ.ಭಾರತೀಯರ ಮೊದಲ ಹಬ್ಬ ಎನಿಸಿರುವ ಸಂಕ್ರಾಂತಿ ಹಬ್ಬ ಕೇವಲ ಎಳ್ಳು ಬೆಲ್ಲ ಹಂಚುವ ಫ್ಯಾಷನ್ ಎನಿಸಿದೆ.ಈ ಸಂಭ್ರಮದ ಹಿಂದೆ ರೈತರ ಶ್ರಮ ಇರುತ್ತಿತ್ತು.ವರ್ಷವಿಡಿ ಬೆಳೆದ ರಾಗಿ,ಭತ್ತ ಹಾಗು ವಿವಿಧ ಬೆಳೆಗಳ ರಾಶಿಹಾಕಿ ಪೂಜಿಸುವ ವಾಡಿಕೆ ಇತ್ತು.ಆ ಆಚರಣೆ ನಮ್ಮ ಸಂಸ್ಕೃತಿ,ಸಂಪ್ರದಾಯ ಮರೆಯಾಗುತ್ತಿವೆ.
ಎಲ್ಲೆಡೆ ಅವಿಭಕ್ತ ಕುಟುಂಬಗಳು ಇಬ್ಬಾಗವಾಗಿ ಸ್ವಾರ್ಥದ ಬದುಕು ಸಾಗಿಸುತ್ತಿದ್ದು,ನಗರದಲ್ಲಿ ವಾಸಿಸುವ ಕುಟುಂಬ ಅಕ್ಕಪಕ್ಕದಲ್ಲಿರುವವರ ಬಾಂದವ್ಯತೆಯನ್ನು ದೂರವಿಡ್ತಿದ್ದಾರೆ.ಯಾವುದೇ ಕುಟುಂಬಕ್ಕೆ ಏನಾದ್ರು ಸಮಸ್ಯೆ ಎದುರಾದರೆ ಅದು ಅವರಿಗೆ ಮಾತ್ರ ಸೀಮಿತವಾಗಿದೆ. ಅದನ್ನು ಬಗೆಹರಿಸಲು ಸಹ ಯಾರು ಮುಂದಾಗುವ ಮನಸು ಮಾಡುವುದಿರಲಿ,ಒಮ್ಮೆ ತಿರುಗಿ ನೋಡಲು ಸಹ ಯೋಚಿಸುವುದಿಲ್ಲ .ತಂದೆತಾಯಂದಿರು ವೃದ್ಧಾಶ್ರಮದ ಪಾಲಾಗುತಿದ್ದಾರೆ.ಹೀಗಾಗಿ ಪ್ರೀತಿ ವಾತ್ಸಲ್ಯ,ಕರುಣೆ,ಅನುಕಂಪ ಹಾಗು ಪರಸ್ಪರ ಹೊಂದಾಣಿಕೆಯ ಸ್ವಭಾವ ಕಣ್ಮರೆಯಾಗುತ್ತಿವೆ.
ಇಂತಹ ವೇಳೆ ಅನ್ಯೋನ್ಯತೆ, ಒಡನಾಟವಿಲ್ಲದೇ,ದ್ವೇಷ,ಅಸೂಯೆ ಮನೆ ಮಾಡಿದ್ದು, ಸುಗ್ಗಿ ಸಂಭ್ರಮದಂತಹ ಆಚರಣೆಗಳು ತರೆಮರೆಗೆ ಸರಿಯುತ್ತಿರುವ ಸಂದರ್ಭದಲ್ಲಿ ಐಯುಡಿಪಿ ಬಡಾವಣೆಯ ಸಿದ್ದರಾಜು, ಕಲ್ಲೇಶ್,ಪುಷ್ಪ,ಜಯ್ಯಣ್ಣ,ವಿಕ್ರಂ,ನವೀನ್,ಐಯ್ಯಣ್ಣ,ಬಸಣ್ಣ,ಶಶಿಕಲಾ,ಪ್ರಕಾಶ್ ನೇತೃತ್ವದ ಸಂಕ್ರಾಂತಿ ಸಂಭ್ರಮಸಮಿತಿಯು ಈ ಕಾರ್ಯಕ್ರಮ ಆಯೋಜಿಸಿರೋದು ಶ್ಲಾಘನೀಯ.
ಈ ಕಾರ್ಯಕ್ರಮದಲ್ಲಿಕುಂಬಳಕಾಯಿ,ಗೆಣಸು, ಧಾನ್ಯಗಳು,ಹಣ್ಣುಗಳು ಮತ್ತು ಬೇಳೆಕಾಳುಗಳಿಂದ ಮಾಡಿರೊ ಸಿಂಗಾರ ಹಾಗು ಕಬ್ಬಿನ ಅಲಂಕಾರವು ಕಣ್ಮನ ಸೆಲಕೆಯುತ್ತಿದೆ.ಇದು ನಮ್ಮ ಹಿರಿಯರು ಹಿಂದೆ ನಮ್ಮ ಹಳ್ಳಿಯಲ್ಲಿ ಆಚರಿಸುತ್ತಿದ್ದ ಕಣಸುಗ್ಗಿ ನೆನಪಿಸಿತು.
ಇಂತಹ ಕಾರ್ಯಕ್ರಮಗಳು ಎಲ್ಲೆಡೆ ನಿರಂತರವಾಗಿ ನಡೆಯಲಿ.ವರ್ಷಕ್ಕೊಮ್ಮೆಯಾದರು ನಗರದಲ್ಲಿ ಸಂಭ್ರಮ ಮನೆಮಾಡಲಿ. ಮಕ್ಕಳು,ಮಹಿಳೆಯರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿ.ಪೂರ್ವಜರ ಸಂಪ್ರದಾಯ ಉಳಿಯಲಿ ಎಂದು ಶುಭ ಹಾರೈಸಿದರು.
ಇದೇ ವೇಳೆ ದೇವರಾಜು ಅರಸ್ ಸಂಸ್ಥೆ ಸಿಇಒ ರಘುಚಂದನ್ ಮಾತನಾಡಿ ಬರದನಾಡು ಚಿತ್ರದುರ್ಗ ಅತಿ ಹಿಂದುಳಿದ ಜಿಲ್ಲೆಯಾಗಿದೆ.ಈ ಹಿಂದುಳಿದ ಪ್ರದೇಶವೆಂಬ ಹಣೆಪಟ್ಟಿತೆರವುಗೊಳಿಸಲು ಶಿಕ್ಷಣದಿಂದ ಮಾತ್ರ ಸಾದ್ಯ.ಹೀಗಾಗಿ ತಮ್ಮಮಕ್ಕಳಿಗೆ ಅಪಾರ ಆಸ್ತಿ ಗಳಿಸುವ ಬದಲಾಗಿ ಸುಶಿಕ್ಷಿತರನ್ನಾಗಿಸುವ ಮೂಲಕ ಅವರ ಜ್ಣಾನಾರ್ಜನೆಹೆಚ್ಚಿಸಬೇಕು.ಅದು ಅವರ ಬದುಕನ್ನು ರೂಪಿಸಿಕೊಳ್ಳಲು ದಾರಿದೀಪವಾಗಬೇಕು ಎಂದರು.
ಬಳಿಕ ಮಾತನಾಡಿದ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ವಿ ಎಲ್‌ಪ್ರಶಾಂತ್ ಅವರು,ಸಾಹಿತ್ಯಾತ್ಮಕವಾಗಿ ಎಲ್ಲರು ತೊಡಗಿಸಿಕೊಂಡಾಗ ಸಂಕ್ರಾಂತಿಯಂತಹ ಸಾಂಪ್ರದಾಯಿಕ ಆಚರಣೆಗಳು ಜೀವಂತವಾಗಿ ಉಳಿಯಲು ಸಹಕಾರಿಯಾಗಿವೆ.ಇಂತಹ ಆಚರಣೆಗಳು ಬರವಣಿಗೆಯ ರೂಪದಲ್ಲಿ ಹೊರಹೊಮ್ಮಿದರೆ ಮುಂದಿನ ಪೀಳಿಗೆಗೆ ವರವಾಗಲಿದೆ.
ಆಗ ಪೂರ್ವಜರು ಆರಂಭಿಸಿ ಸಂಸ್ಕ್ರತಿ,ಸಂಪ್ರದಾಯ ಉಳಿಸಿ ಬೆಳೆಸಲು ಮುಂದಿನ ಪೀಳಿಗೆಗೆ ಸಹಕಾರಿಯಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ,ಮಂಡ್ಯ ಜಿಲ್ಲೆಯ ಆಲೆಮನೆಗಳಲ್ಲಿ ನಡೆಯುತಿದ್ದ ಭ್ರೂಣಹತ್ಯೆ ವಿರುದ್ಧ ತಮ್ಮ ಲೇಖನಗಳಿಂದ ಸಮರವನ್ನೇ ನಡೆಸಿ, ಆ ಪಾಪಕೃತ್ಯಕ್ಕೆ ಬ್ರೇಕ್ ಹಾಕುವಲ್ಲಿ ಶ್ರಮಿಸುವ ಮೂಲಕ ರಾಜ್ಯ ಸರ್ಕಾರದಿಂದ ನೀಡುವ ಅಭಿವೃದ್ಧಪರಿಸರ ಪತ್ರಿಕೋದ್ಯಮ ಪ್ರಶಸ್ತಿಗೆ ಆಯ್ಕೆಯಾಗಿರುವ ಚಿತ್ರದುರ್ಗದ ಪತ್ರಕರ್ತರಾದ ಯೋಗೀಶ್ ಅವರನ್ನು ಅಭಿನಂದಿಸಲಾಯಿತು.
ಬಳಿಕ ಮಾತನಾಡಿದ ಪತ್ರಕರ್ತ ಯೋಗೀಶ್ ಅವರು,ಪತ್ರಕರ್ತರ ದೈನಂದಿನ ಬದುಕು ಹಾಗು ಸವಾಲುಗಳ ಬಗ್ಗೆ ಪ್ರಸ್ತಾಪಿಸಿದರು.ಕಾರ್ಯಕ್ರಮದಲ್ಲಿ ಬಡಾವಣೆಯ ಮಹಿಳೆಯರು ಯುವತಿಯರು ಸಂಕ್ರಾಂತಿ ಹಾಡಿಗೆ ನೃತ್ಯ ಪ್ರದರ್ಶಿಸಿದರು.ಬಡಾವಣೆಯ ಮಕ್ಕಳು,ಯುವತಿಯರು ನೃತ್ಯ ಗಾಯನದ ಮೂಲಕ ಸಂಭ್ರಮಿಸಿದರು.ಬಳಿಕ ವೇದ ಚಿತ್ರದ ಜುಂಜಪ್ಪ ಗೀತೆಯ ಗಾಯಕ ಮೋಹನ್ ನೇತೃತ್ವದ ರಶ್ಮಿ ಶ್ರೀ ನಿವಾಸ್,ಸುಮಂತ್‌ವಶಿಷ್ಟ,ಸಾಗರ್ ತುರುವೇಕೆರೆ,ವಿನಯ್ ಭಾರ್ಗವ,ಚನ್ನಪ್ಪ ಅವರ ತಂಡ ಗಾಯನದ ಮೋಡಿ ಮಾಡಿತು.
ಕಾರ್ಯಕ್ರಮವನ್ನು ಬಡಾವಣೆಯ ಶೋಭಾ ನಿರೂಪಿಸಿದರು. ಸಂಕ್ರಾಂತಿ ಸಂಭ್ರಮ ಸಮಿತಿ ಸಂಚಾಲಕ ಸಿದ್ದರಾಜು ಪ್ರಾಸ್ತಾವಿಕ ಮಾತನಾಡಿದ್ದು,ಸಮಸ್ತ ನಾಗರೀಕರಿಗೆ ಮಂಜುನಾಥ ಕ್ಯಾಟ್ರಿಂಗ್ ನಿಂದ ಸಂಕ್ರಾಂತಿ ಭೂರಿಭೋಜನ ಏರ್ಪಡಿಸಲಾಗಿತ್ತು.