ಚಿತ್ರದುರ್ಗ: ಶಸ್ತ್ರ ಚಿಕಿತ್ಸೆಗಾಗಿ ಚಿತ್ರದುರ್ಗದ ಸರ್ಕಾರಿ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದಂತ ರೋಗಿಯೊಬ್ಬರಿಗೆ ಜನರಲ್ ಸರ್ಜನ್ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಕೂಡ ಆಗಿತ್ತು. ಈ ಹಿನ್ನಲೆಯಲ್ಲಿ ಚಿತ್ರದುರ್ಗ ಜಿಲ್ಲಾಸ್ಪತ್ರೆಯ ಜನರಲ್ ಸರ್ಜನ್ ಡಾ.ಸಾಲಿ ಮಂಜಪ್ಪ ಅವರನ್ನು ಅಮಾನತುಗೊಳಿಸಿ ಆದೇಶಿಸಿದ್ದಾರೆ.
ಈ ಕುರಿತಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತರು ಆದೇಶ ಹೊರಡಿಸಿದ್ದಾರೆ. ಅದರಲ್ಲಿ ಚಂದ್ರಶೇಖರ್ ಬಿನ್ ಕೃಷ್ಣಪ್ಪ ರವರು ಜಿಲ್ಲಾ ಆಸ್ಪತ್ರೆ, ಚಿತ್ರದುರ್ಗ ಇಲ್ಲಿಗೆ ಚಿಕಿತ್ಸೆಯ ಸಲುವಾಗಿ ದಿನಾಂಕ 05-07-2024ರಂದು ಹೋದ ಸಂದರ್ಭದಲ್ಲಿ ಆಸ್ಪತ್ರೆಯ ಕರ್ತವ್ಯದ ಮೇಲಿದ್ದ ವೈದ್ಯರಾದ ಡಾ|| ಸಾಲಿ ಮಂಜಪ್ಪ, ಜನರಲ್ ಸರ್ಜನ್, ಜಿಲ್ಲಾ ಆಸ್ಪತ್ರೆ, ಚಿತ್ರದುರ್ಗ ಜಿಲ್ಲೆ ಇವರು ಸದರಿಯವರನ್ನು ಹೊರರೋಗಿಯಾಗಿ ಪರೀಕ್ಷಿಸಿದ ನಂತರ ಶಸ್ತ್ರಚಿಕಿತ್ಸೆಯ ಸಲುವಾಗಿ ಒಳರೋಗಿಯಾಗಿ ದಾಖಲು ಮಾಡಿಕೊಂಡು ದಿನಾಂಕ 06-07-2024ರಂದು ಸದರಿ ರೋಗಿಗೆ ಶಸ್ತ್ರಚಿಕಿತ್ಸೆಗೆ ನಿಗದಿಪಡಿಸಿ ಶಸ್ತ್ರ ಚಿಕಿತ್ಸೆ ಕೊಠಡಿಗೆ ರೋಗಿಯು ಹೋದಾಗ ರೋಗಿಯ ಸಂಬಂಧಿಕರ ಜೊತೆಗೆ ವೈದ್ಯರು ಸಂಭಾಷಣೆ ನಡೆಸಿ ಹಣ ಕೇಳಿ ಪಡೆದಿರುವುದು ವಿಡಿಯೋ ಚಿತ್ರೀಕರಣಗೊಂಡು ಮಾಧ್ಯಮದಲ್ಲಿ ಪುಸಾರವಾಗಿರುವ ಹಿನ್ನೆಲೆಯಲ್ಲಿ ಪ್ರಕರಣದ ಕುರಿತು ಜಿಲ್ಲಾ ಶಸ್ತ್ರ ಚಿಕಿತ್ಸಕರು ದಿನಾಂಕ 22-07-2024ರಂದು ಕಾರಣ ಕೇಳಿ ನೋಟೀಸ್‌ನ್ನು ವೈದ್ಯರಿಗೆ ಜಾರಿ ಮಾಡಿದ್ದು, ವೈದ್ಯರಿಂದ ವಿವರಣೆ ಪಡೆದು ಪ್ರಕರಣದ ಕುರಿತಾದ ವರದಿಯನ್ನು ಉಲ್ಲೇಖಿತ ಪತ್ರದಲ್ಲಿ ಸಲ್ಲಿಸಿರುತ್ತಾರೆ ಎಂದಿದ್ದಾರೆ.
ಡಾ|| ಸಾಲಿ ಮಂಜಪ್ಪ, ಜನರಲ್ ಸರ್ಜನ್, ಜಿಲ್ಲಾ ಆಸ್ಪತ್ರೆ, ಚಿತ್ರದುರ್ಗ ಜಿಲ್ಲೆ ಇವರು ಸಾರ್ವಜನಿಕ ಉಚಿತ ಸೇವೆಗಾಗಿ ಬರುವ ರೋಗಿಗಳ ಬಳಿ ಶಸ್ತ್ರಚಿಕಿತ್ಸೆಗಾಗಿ ಹಣದ ಬೇಡಿಕೆ ಇಟ್ಟು ಸರ್ಕಾರಿ ವೈದ್ಯರ ಹುದ್ದೆಗೆ ತರವಲ್ಲದ ರೀತಿಯಲ್ಲಿ ವರ್ತಿಸುವುದರ ಮೂಲಕ ಕರ್ನಾಟಕ ಲೋಕಾಯುಕ್ತ ಕಾಯ್ದೆ 1984ರ (ಭ್ರಷ್ಟಾಚಾರ) ನಿಯಮಗಳನ್ನು ಉಲ್ಲಂಘಿಸಿ ಕರ್ತವ್ಯಲೋಪ ಎಸಗಿರುವುದು ಮೇಲ್ನೋಟಕ್ಕೆ ಸಾಬೀತಾಗಿರುವ ವಿಡಿಯೋ ಚಿತ್ರೀಕರಣಗೊಂಡು ಮಾಧ್ಯಮಗಳಲ್ಲಿ ಪ್ರಸಾರವಾಗಿರುವುದರಿಂದ ಇವರನ್ನು ಈ ತಕ್ಷಣದಿಂದಲೇ ಜಾರಿಗೆ ಬರುವಂತೆ ಸರ್ಕಾರಿ ಸೇವೆಯಿಂದ ಅಮಾನತ್ತುಗೊಳಿಸಲು ತೀರ್ಮಾನಿಸಿದೆ ಅಂತ ಹೇಳಿದ್ದಾರೆ.
ಪುಸ್ತಾವನೆಯಲ್ಲಿ ವಿವರಿಸಲಾದ ಕಾರಣಗಳಿಗಾಗಿ ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) 1957ರ ನಿಯಮ 10(ಎ) ಮೇರೆಗೆ ಪುದತ್ತವಾದ ಅಧಿಕಾರವನ್ನು ಚಲಾಯಿಸಿ ಡಿ.ರಂದೀಪ್ ಭಾ.ಆ.ಸೇ., ಆಯುಕ್ತರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು, ಬೆಂಗಳೂರು ಆದ ನಾನು ಕರ್ನಾಟಕ ಲೋಕಾಯುಕ್ತ ಕಾಯ್ದೆ 1984ರ (ಭ್ರಷ್ಟಾಚಾರ)ದಲ್ಲಿ ತೊಡಗಿರುವ ಆರೋಪವು ಇವರ ಮೇಲೆ ಮೇಲ್ನೋಟಕ್ಕೆ ಸಾಬೀತಾಗಿರುವ ಕಾರಣ ಡಾ|| ಸಾಲಿ ಮಂಜಪ್ಪ, ಜನರಲ್ ಸರ್ಜನ್, ಜಿಲ್ಲಾ ಆಸ್ಪತ್ರೆ, ಚಿತ್ರದುರ್ಗ ಜಿಲ್ಲೆ ಇವರನ್ನು ಈ ತಕ್ಷಣದಿಂದಲೇ ಜಾರಿಗೆ ಬರುವಂತೆ ಸರ್ಕಾರಿ ಸೇವೆಯಿಂದ ಅಮಾನತ್ತುಗೊಳಿಸಿರುತ್ತೇನೆ. ಅಮಾನತ್ತಿನ ಅವಧಿಯಲ್ಲಿ ಮೇಲ್ಕಂಡ ವೈದ್ಯರು ನಿಯಮಾನುಸಾರ ಜೀವನಾಂಶ ಭತ್ಯೆಗೆ ಅರ್ಹರಾಗಿರುವುದರಿಂದ ಇವರ ಸಾರ್ವಜನಿಕ ಆಸ್ಪತ್ರೆ, ಸೊರಬ, ಶಿವಮೊಗ್ಗ ಇಲ್ಲಿ ಖಾಲಿ ಇರುವ ಹುದ್ದೆಗೆ ಸ್ಥಳಾಂತರಿಸಲಾಗಿದೆ ಅಂದ ಹೇಳಿದ್ದಾರೆ.
ಸದರಿಯವರು ಅಮಾನತ್ತಿನ ಅವಧಿಯಲ್ಲಿ ಸಕ್ಷಮ ಪ್ರಾಧಿಕಾರದ ಪೂರ್ವಾನುಮತಿಯನ್ನು ಪಡೆಯದೆ ಕೇಂದ್ರ ಸ್ಥಾನವನ್ನು ಬಿಡತಕ್ಕದಲ್ಲವೆಂದು ಆದೇಶಿಸಿದ್ದಾರೆ.
BREAKING: ಕಬಿನಿ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಸಿಎಂ ಸಿದ್ಧರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್