ಬೆಂಗಳೂರು: ಸಾರ್ವಜನಿಕರಿಂದ ಚಿಕ್ಕಮಗಳೂರು ಜಿಲ್ಲಾ ಆಸ್ಪತ್ರೆಯ ಅರವಳಿಕೆ ತಜ್ಞರಾಗಿದ್ದಂತ ಡಾ. ಸೋಮಶೇಖರ್.ಪಿ ವಿರುದ್ಧ ಸಾಕಷ್ಟು ದೂರುಗಳು ಕೇಳಿ ಬಂದಿದ್ದವು. ಈ ಹಿನ್ನಲೆಯಲ್ಲಿ ಅವರನ್ನು ಸರ್ಕಾರಿ ಸೇವೆಯಿಂದ ಅಮಾನತುಗೊಳಿಸಿ ರಾಜ್ಯ ಸರ್ಕಾರ ಆದೇಶಿಸಿದೆ.
ಈ ಕುರಿತಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತರು ನಡವಳಿಯನ್ನು ಹೊರಡಿಸಿದ್ದಾರೆ. ಅದರಲ್ಲಿ ಡಾ|| ಸೋಮಶೇಖರ್ ಪಿ., ಅರವಳಿಕೆ ತಜ್ಞರು, ಜಿಲ್ಲಾ ಆಸ್ಪತ್ರೆ ಚಿಕ್ಕಮಗಳೂರು ಜಿಲ್ಲೆ ಆದ ಇವರು ಆಸ್ಪತ್ರೆಯ ಕರ್ತವ್ಯದ ಸಂದರ್ಭದಲ್ಲಿ ದುರವರ್ತನೆ ತೋರಿರುವ ಕುರಿತು, ಪದೇ ಪದೇ ಸಾರ್ವಜನಿಕರಿಂದ ಮತ್ತು ಆಸ್ಪತ್ರೆಯ ಸಿಬ್ಬಂದಿಗಳಿಂದ ದೂರುಗಳು ಬರುತ್ತಿರುವ, ಅಲ್ಲದೇ ಆಸ್ಪತ್ರೆಯ ಕರ್ತವ್ಯ ನಿರ್ವಹಿಸುವ ಸಮಯದಲ್ಲಿ ಪಾನಮತ್ತರಾಗಿ ಶಸ್ತ್ರಚಿಕಿತ್ಸೆಗೆ ಒಳಗಾದ ರೋಗಿಗಳಿಗೆ ಅರವಳಿಕೆ ಚುಚ್ಚುಮದ್ದನ್ನು ನೀಡಲು ಮುಂದಾಗಿ ಪಾನಮತ್ತರಾಗಿ ಅರವಳಿಕೆ ನೀಡಲು ಸಾಧ್ಯವಾಗದೇ ಇದ್ದು, ಶಸ್ತ್ರಚಿಕಿತ್ಸೆಯ ಹಲವು ಪ್ರಕರಣಗಳು ವಿಫಲವಾಗಿರುವುದು ಕಂಡುಬಂದು, ಇದರಿಂದಾಗಿ ಚಿಕಿತ್ಸೆ ಬಯಸಿ ಬರುವ ಸಾರ್ವಜನಿಕರಿಗೆ ತುಂಬಾ ಅಡಚಣೆಯಾಗಿರುತ್ತದೆ. ಈ ಬಗ್ಗೆ ವೈದ್ಯರ ಕುರಿತು ಅನೇಕ ದೂರು ಸಹ ಇರುತ್ತದೆ ಎಂದಿದ್ದಾರೆ.
ಆಸ್ಪತ್ರೆಯ ಕರ್ತವ್ಯಕ್ಕೆ ತಡವಾಗಿ ಮಧ್ಯಪಾನ ಮಾಡಿ ಬಂದು, ಸಾರ್ವಜನಿಕವಾಗಿ ತೊಂದರೆಯನ್ನುಂಟು ಮಾಡಿ ದುರ್ನಡತೆ ಎಸಗಿರುವುದು ಕಂಡುಬಂದಿರುತ್ತದೆ. ಇದರಿಂದಾಗಿ, ಸಾರ್ವಜನಿಕರಿಗೆ ಸಮರ್ಪಕ ಚಿಕಿತ್ಸೆ ದೊರೆಯದೇ ಬಹಳ ಅಡಚಣೆ ಉಂಟಾಗಿರುತ್ತದೆ. ವೈದ್ಯರ ಈ ದುರ್ನಡತೆ ಕುರಿತು, 4 ಬಾರಿ ಕಾರಣ ಕೇಳಿ ನೋಟೀಸ್ ನೀಡಿದ್ದರೂ, ಈ ನೋಟೀಸ್‌ಗೆ ವೈದ್ಯರು ಯಾವುದೇ ಸಮಜಾಯಿಷಿ ನೀಡದೇ ತಮ್ಮ ಪ್ರವೃತ್ತಿಯನ್ನು ಮುಂದುವರೆಸಿರುವುದು ಕಂಡುಬಂದಿರುವುದರಿಂದ, ವೈದ್ಯರ ದುರ್ನಡತೆಯಿಂದ ಸಾರ್ವಜನಿಕರು ಆರೋಗ್ಯ ಸೇವೆಯನ್ನು ನಿರೀಕ್ಷಿಸುವುದು ಕಷ್ಟಸಾಧ್ಯವಾಗಿರುತ್ತದೆ. ಆದುದರಿಂದ ವೈದ್ಯರ, ಈ ದುರ್ನಡತೆಯ ಮೇರೆಗೆ ಶಿಸ್ತುಕ್ರಮ ಕೈಗೊಳ್ಳಲು ಹಾಗೂ ಈ ವೈದ್ಯರನ್ನು ಸದರಿ ಆಸ್ಪತ್ರೆಯಿಂದ ಬೇರೆಡೆಗೆ ವರ್ಗಾಯಿಸುವಂತೆ ಮೇಲೆ ಓದಲಾದ (1)ರಪತ್ರದಲ್ಲಿ ಜಿಲ್ಲಾ ಶಸ್ತ್ರಚಿಕಿತ್ಸಕರು ಹಾಗೂ ಮೇಲೆ ಓದಲಾದ (2)ರಲ್ಲಿ ಜಿಲ್ಲಾಧಿಕಾರಿಗಳು, ಚಿಕ್ಕಮಗಳೂರು ಜಿಲ್ಲೆ ಇವರು ಈ ಕಾರ್ಯಾಲಯಕ್ಕೆ ವರದಿ ಸಲ್ಲಿಸಿರುತ್ತಾರೆ ಎಂದು ಹೇಳಿದೆ.
ಜಿಲ್ಲಾಧಿಕಾರಿಗಳು, ಚಿಕ್ಕಮಗಳೂರು ಜಿಲ್ಲೆ ಇವರ ಪ್ರಸ್ತಾವನೆಯಂತೆ ವೈದ್ಯರನ್ನು ಬೇರೆಡೆಗೆ ವರ್ಗಾಯಿಸಲು ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗಿತ್ತು. ಮೇಲೆ ಓದಲಾದ (3)ರ ಸರ್ಕಾರದ ಪತ್ರದಲ್ಲಿ ಸದರಿ ಪ್ರಕರಣವು ಏಕ ವ್ಯಕ್ತಿಯ ಶಿಸ್ತುಪ್ರಕರಣವಾಗಿರುವುದರಿಂದ, ಕರ್ನಾಟಕ ನಾಗರೀಕ ಸೇವಾ(ಸಿಸಿಎ)ನಿಯಮಗಳು 1957ರ ನಿಯಮ 9(2)(ಬಿಬಿಬಿ-1 ರಡಿ ಆಯುಕ್ತರಿಗೆ ಪ್ರದತ್ತವಾದ ಅಧಿಕಾರದನ್ವಯ, ಡಾ|| ಸೋಮಶೇಖರ್ ಪಿ., ಇವರನ್ನು ಕೂಡಲೇ ಇಲಾಖಾ ವಿಚಾರಣೆ ಬಾಕಿ ಇರಿಸಿ, ಅಮಾನತ್ತುಗೊಳಿಸಿ ಕ್ರಮಕೈಗೊಂಡು, ಸರ್ಕಾರಕ್ಕೆ ಮಾಹಿತಿ ನೀಡುವಂತೆ ಸೂಚಿಸಲಾಗಿರುತ್ತದೆ ಎಂದು ತಿಳಿಸಿದ್ದಾರೆ.
ಡಾ|| ಸೋಮಶೇಖರ್ ಪಿ., ಅರವಳಿಕೆ ತಜ್ಞರು, ಜಿಲ್ಲಾ ಆಸ್ಪತ್ರೆ ಚಿಕ್ಕಮಗಳೂರು ಜಿಲ್ಲೆ, ಆದ ಇವರ ಆಸ್ಪತ್ರೆಯ ಕರ್ತವ್ಯಕ್ಕೆ ತಡವಾಗಿ ಬರುವುದು ಅಲ್ಲದೇ ಮಧ್ಯಪಾನ ಮಾಡಿ ಬಂದು, ಸಾರ್ವಜನಿಕರಿಗೆ ತೊಂದರೆಯನ್ನುಂಟು ಮಾಡುವ ಮೂಲಕ ಕರ್ನಾಟಕ ನಾಗರೀಕ ಸೇವಾ(ನಡತೆ)ನಿಯಮಗಳು, 1966ರ ನಿಯಮ 29ನ್ನು ಉಲ್ಲಂಘಿಸುವ ಮೂಲಕ ದುರ್ನಡತೆ ಎಸಗಿರುವ, ಹಾಗೂ ರೋಗಿಗಳಿಗೆ ಇದರಿಂದಾಗಿ ಸಮರ್ಪಕ ಚಿಕಿತ್ಸೆ ದೊರೆಯದೇ ಅಡಚಣೆ ಉಂಟಾಗಿರುವ ಕಾರಣ ವೈದ್ಯರು ವೃತ್ತಿಗೆ ತರವಲ್ಲದ ರೀತಿಯಲ್ಲಿ ವರ್ತಿಸಿ, ದುರ್ನಡತೆ ಎಸಗಿರುವುದು ಮೇಲ್ನೋಟಕ್ಕೆ ಕಂಡುಬಂದಿರುವುದರಿಂದ, ಹಾಗೂ ಸರ್ಕಾರದ ನಿರ್ದೇಶದನ್ವಯ ಇವರನ್ನು ಈ ತಕ್ಷಣದಿಂದಲೇ ಜಾರಿಗೆ ಬರುವಂತೆ ಸರ್ಕಾರಿ ಸೇವೆಯಿಂದ ಅಮಾನತ್ತುಗೊಳಿಸಲು ತೀರ್ಮಾನಿಸಿರುವುದರಿಂದ ಈ ಆದೇಶ ಎಂದು ಹೇಳಿದ್ದಾರೆ.
ಪ್ರಸ್ತಾವನೆಯಲ್ಲಿ ವಿವರಿಸಲಾದ ಕಾರಣಗಳಿಗಾಗಿ ಕರ್ನಾಟಕ ನಾಗರೀಕ ಸೇವಾ(ಸಿ.ಸಿ.ಎ.) 1957ರ ನಿಯಮ 10(ಎ) ಮೇರೆಗೆ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಡಿ.ರಂದೀಪ್, ಭಾ.ಆ.ಸೇ ಆಯುಕ್ತರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು, ಬೆಂಗಳೂರು ಆದ ನಾನು, ಡಾ| ಸೋಮಶೇಖರ್ ಪಿ., ಅರವಳಿಕೆ ತಜ್ಞರು, ಜಿಲ್ಲಾ ಆಸ್ಪತ್ರೆ ಚಿಕ್ಕಮಗಳೂರು ಜಿಲ್ಲೆ ಇವರನ್ನು ಸರ್ಕಾರದ ನಿರ್ದೇಶದನ್ವಯ ಈ ತಕ್ಷಣದಿಂದಲೇ ಜಾರಿಗೆ ಬರುವಂತೆ, ಇಲಾಖಾ ಬಾಕಿ ಇರಿಸಿ ಸರ್ಕಾರಿ ಸೇವೆಯಿಂದ ಅಮಾನತ್ತುಗೊಳಿಸಿರುತ್ತೇನೆ. ಅಮಾನತ್ತಿನ ಅವಧಿಯಲ್ಲಿ ನಿಯಮಾನುಸಾರ ಜೀವನಾಂಶ ಭತ್ಯೆಗೆ ಅರ್ಹರಾಗಿರುವುದರಿಂದ ಇವರ ಲೀನ್ ಅನ್ನು ಸಮುದಾಯ ಆರೋಗ್ಯ ಕೇಂದ್ರ ಶಿರಾಳಕೊಪ್ಪ, ಶಿಕಾರಿಪುರ ತಾಲೂಕು, ಶಿವಮೊಗ ಜಿಲ್ಲೆ ಇಲ್ಲಿ ಖಾಲಿ ಇರುವ ನೇತ್ರತಜ್ಞರ ಹುದ್ದೆಗೆ ಸ್ಥಳಾಂತರಿಸಿದೆ.
ಅಮಾನತ್ತಿನ ಅವಧಿಯಲ್ಲಿ ಮೇಲ್ಕಂಡ ವೈದ್ಯರು ನಿಯಮಾನುಸಾರ ಜೀವನಾಂಶ ಭತ್ಯೆಗೆ ಅರ್ಹರಾಗಿರುತ್ತಾರೆ ಹಾಗೂ ಇವರು ಅಮಾನತ್ತಿನ ಅವಧಿಯಲ್ಲಿ ಸಕ್ಷಮ ಪ್ರಾಧಿಕಾರಿಗಳ ಪೂರ್ವಾನುಮತಿ ಪಡೆಯದೆ ಕೇಂದ್ರಸ್ಥಾನ ಬಿಡತಕ್ಕದ್ದಲ್ಲವೆಂದು ಆದೇಶಿಸಿದ್ದಾರೆ.
ರಾಜ್ಯದ ರೈತರಿಗೆ ಗುಡ್ ನ್ಯೂಸ್ ; ಸೆಪ್ಟೆಂಬರ್ ನಿಂದ ‘ಪೋಡಿ’ ಅಭಿಯಾನಕ್ಕೆ ಚಾಲನೆ
ರಾಜ್ಯದ ರೈತರೇ ಗಮನಿಸಿ : ‘PM KISAN’ ಹಣ ಜಮಾ ಆಗಲು ಕೂಡಲೇ `e-KYC’ ಮಾಡಿಸಿಕೊಳ್ಳಿ!