ಬೆಂಗಳೂರು: ಈಗ ನಡೆಯುತ್ತಿರುವ ಜಾತಿ ಗಣತಿಯಲ್ಲಿ ಬಸವಣ್ಣನ ಅನುಯಾಯಿಗಳೆಲ್ಲರೂ ಸಮೀಕ್ಷೆಯ ‘ಇತರೆ’ ಕಾಲಿನಲ್ಲಿ ‘ಲಿಂಗಾಯತ ಧರ್ಮ’ ಎಂದು ಬರೆಸಿ, ಜಾತಿ ಕಾಲಂನಲ್ಲಿ ತಮ್ಮತಮ್ಮ ಉಪಜಾತಿ/ಪಂಗಡಗಳ ಹೆಸರು ಬರೆಸಲು ಹೇಳಿದ್ದು, ಅದೇ ರೀತಿ ರಾಜ್ಯದ ಎಲ್ಲೆಡೆ ಮಾಡುತ್ತಿದ್ದಾರೆ ಎಂದು ಲಿಂಗಾಯತ ಮಠಾಧೀಶರ ಒಕ್ಕೂಟದ ಮುಖ್ಯಸ್ಥರಾಗಿರುವ ಭಾಲ್ಕಿ ಹಿರೇಮಠದ ಶ್ರೀ ಬಸವಲಿಂಗ ಪಟ್ಟದ್ದೇವರು ಹೇಳಿದ್ದಾರೆ.
ಬಸವ ಸಾಂಸ್ಕೃತಿಕ ಅಭಿಯಾನದ ಸಮಾರೋಪ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
‘ಜಾತಿ ಗಣತಿಯಲ್ಲಿ ನಮ್ಮ ಸಮಾಜದವರೆಲ್ಲ ಲಿಂಗಾಯತ ಧರ್ಮ ಎಂದೇ ನಮೂದಿಸುವಂತೆ ಸಮುದಾಯದ ಸದಸ್ಯರಿಗೆ ಹೇಳಿದ್ದೇವೆ. ನಮ್ಮ ಒಕ್ಕೂಟದಲ್ಲಿ 400 ಸ್ವಾಮೀಜಿಗಳಿದ್ದಾರೆ. ಈ ವಿಚಾರದಲ್ಲಿ ಒಕ್ಕೂಟ ಒಮ್ಮತವನ್ನು ತಾಳಿದೆ. ಇದರಲ್ಲಿ ಬೇರೆಯವರು ಅನಗತ್ಯವಾಗಿ ಗೊಂದಲ ಹುಟ್ಟಿಸುತ್ತಿದ್ದಾರೆ’ ಎಂದು ಅವರು ನುಡಿದಿದ್ದಾರೆ.
‘ಅ.5ರಂದು ಅರಮನೆ ಮೈದಾನದಲ್ಲಿ ನಡೆಯಲಿರುವ ಬಸವ ಸಾಂಸ್ಕೃತಿಕ ಅಭಿಯಾನದ ಸಮಾರೋಪ ಸಮಾರಂಭದಲ್ಲಿ 500ಕ್ಕೂ ಹೆಚ್ಚು ಬಸವಪರ ಶ್ರೀಗಳು ಮತ್ತು ಒಂದು ಲಕ್ಷಕ್ಕೂ ಹೆಚ್ಚು ಜನ ಪಾಲ್ಗೊಳ್ಳಲಿದ್ದಾರೆ. ಈ ಸಂದರ್ಭದಲ್ಲಿ, ಒಕ್ಕೂಟದ ಬೇಡಿಕೆಯಂತೆ ಬಸವಣ್ಣನನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸನ್ಮಾನಿಸಲಾಗುವುದು. ಕಾರ್ಯಕ್ರಮದಲ್ಲಿ ನ್ಯಾ. ನಾಗಮೋಹನ್ ದಾಸ್ ಅವರು ವಿಶೇಷ ಉಪನ್ಯಾಸ ನೀಡಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಬೇಲಿಮಠದ ಶ್ರೀ ಶಿವರುದ್ರ ಸ್ವಾಮೀಜಿ ಮಾತನಾಡಿ, ‘ಭಾರತದಲ್ಲಿ ಹುಟ್ಟಿದವರೆಲ್ಲರೂ ಸಾಂಸ್ಕೃತಿಕ ದೃಷ್ಟಿಯಿಂದ ಹಿಂದೂಗಳೇ ಆಗಿದ್ದಾರೆ. ಆದರೆ ಧರ್ಮ ಮತ್ತು ಜಾತಿಗಳ ನಡುವೆ ಗೊಂದಲ ಮಾಡಿಕೊಳ್ಳಬಾರದು. ಜನರಲ್ಲಿ ಲಿಂಗಾಯತ ಪ್ರಜ್ಞೆಯನ್ನು ಮೂಡಿಸಬೇಕು. ಬಸವಣ್ಣನ ನಾಲ್ಕು ಪ್ರಧಾನ ವಿಚಾರಗಳನ್ನು ಬಿಂಬಿಸಬೇಕು. ಬೇರೆಯವರ ಸಂಚಿಗೆ ನಾವು ಬಲಿಯಾಗಬಾರದು ಎಂದು ಅಭಿಪ್ರಾಯಪಟ್ಟಿದ್ದಾರೆ.
ಬಸವಧರ್ಮ ಪೀಠದ ಮಾತೆ ಗಂಗಾದೇವಿ ಮಾತನಾಡಿ, ಬಸವಣ್ಣ ಕನಸು ಕಂಡ ಸಮಸಮಾಜವು 21ನೇ ಶತಮಾನದಲ್ಲಾದರೂ ನನಸಾಗಬೇಕು. ಬಸವಣ್ಣನನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿ ಈಗ ಒಂದು ವರ್ಷವಾಗುತ್ತಿದೆ. ಇದರ ಅಂಗವಾಗಿ ನಡೆದ ಅಭಿಯಾನದ ಸಮಾರೋಪದಲ್ಲಿ ಎಲ್ಲರೂ ಭಾಗವಹಿಸಬೇಕು ಎಂದಿದ್ದಾರೆ.
ಅಥಣಿ ಮೋಟಗಿ ಮಠದ ಶ್ರೀ ಪ್ರಭು ಚೆನ್ನಬಸವ ಸ್ವಾಮೀಜಿ ಮಾತನಾಡಿ, ಬಸವಣ್ಣ ಕರುನಾಡಿನ ಯುಗಪುರುಷ. ಭಾವೈಕ್ಯತೆ, ಪ್ರಜಾಸತ್ತೆ, ಸಮಾಜಮುಖಿ ಸೇವೆ ಅವರ ವಿಚಾರಗಳಾಗಿದ್ದು, ಒಕ್ಕೂಟವು ಕೂಡ ಇವುಗಳನ್ನು ಪ್ರಧಾನ ಆಶಯಗಳನ್ನಾಗಿ ಇಟ್ಟುಕೊಂಡಿದೆ. ಒಕ್ಕೂಟವು ನಡೆಸಿದ ಅಭಿಯಾನವು ರಾಜಕೀಯರಹಿತ ಕಾರ್ಯಕ್ರಮವಾಗಿದೆ ಎಂದು ನುಡಿದಿದ್ದಾರೆ.
ಮಾಧ್ಯಮ ಗೋಷ್ಠಿಯಲ್ಲಿ ಬೆಳಗಾವಿಯ ನಾಗನೂರು ಮಠದ ಶ್ರೀ ಅಲ್ಲಮಪ್ರಭು ಸ್ವಾಮೀಜಿ, ಬೆಂಗಳೂರು ಶ್ರೀ ಗುರುವಣ್ಣದೇವರ ಮಠದ ಸ್ವಾಮೀಜಿ ಉಪಸ್ಥಿತರಿದ್ದರು.
ALERT : ಧೂಮಪಾನಿಗಳೇ ಎಚ್ಚರ : `ಸಿಗರೇಟ್’ನಿಂದ ಈ ಗಂಭೀರ ಕಾಯಿಲೆಗಳು ಬರಬಹುದು.!
BREAKING : ಶೀಘ್ರದಲ್ಲೇ ಮದುವೆ ಆಗ್ತೀನಿ : ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟ ಡಿಂಪಲ್ ಕ್ವೀನ್ ರಚಿತಾ ರಾಮ್