ಬೆಂಗಳೂರು: ರಾಜ್ಯ ಸರ್ಕಾರದ ಆಸ್ತಿ ನಗದೀಕರಣ ಕುರಿತ ಮಾಧ್ಯಮ ವರದಿಗಳಿಗೆ ಸಿಎಂ ಸಿದ್ಧರಾಮಯ್ಯ ಮಹತ್ವದ ಸ್ಪಷ್ಟೀಕರಣ ನೀಡಿದ್ದಾರೆ. ಆ ಬಗ್ಗೆ ಮುಂದೆ ಓದಿ.
ಈ ಕುರಿತಂತೆ ಸಿಎಂ ಸಿದ್ಧರಾಮಯ್ಯ ಅವರು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು, ವರಮಾನ ಸಂಗ್ರಹದ ಉದ್ದೇಶದಿಂದ ಬೆಂಗಳೂರು ನಗರ ಮತ್ತು ಸುತ್ತಮುತ್ತಲಿನ 25 ಸಾವಿರ ಎಕರೆ ಜಮೀನನ್ನು ನಗದೀಕರಣಗೊಳಿಸಿ, 2023ರ ಜೂನ್‌ನಿಂದ ಜಾರಿಗೆ ತರಲಾಗಿರುವ ಐದು ಗ್ಯಾರಂಟಿ ಯೋಜನೆಗಳ ಅನುಷ್ಠಾನದಿಂದ ಎದುರಾಗಿರುವ ಆರ್ಥಿಕ ಹೊರೆಯನ್ನು ಸರಿದೂಗಿಸಲು ರಾಜ್ಯ ಸರ್ಕಾರ ಮುಂದಾಗಿದೆ ಎಂದು 2024 ರ ಜೂನ್ 18 ರಂದು ರಾಜ್ಯದ ಎರಡು ಪ್ರಮುಖ ದಿನಪತ್ರಿಕೆಗಳಾದ ಪ್ರಜಾವಾಣಿ ಮತ್ತು ಡೆಕ್ಕನ್ ಹೆರಾಲ್ಡ್‌ನ ಮುಖ ಪುಟದಲ್ಲಿ ಪ್ರಕಟವಾಗಿರುವ ವರದಿಗೆ ಸಂಬಂಧಿಸಿದಂತೆ ಈ ಸ್ಪಷ್ಟನೆ;
ಪತ್ರಿಕೆಯ ವರದಿಗಳಲ್ಲಿ ಹೇಳಿರುವಂತೆ ವರಮಾನ ಸಂಗ್ರಹಕ್ಕಾಗಿ ಬೆಂಗಳೂರು ನಗರ ಮತ್ತು ಸುತ್ತಮುತ್ತಲಿನ 25,000 ಎಕರೆ ಭೂಮಿಯನ್ನು ನಗದೀಕರಣಗೊಳಿಸುವ ಯಾವುದೇ ಪ್ರಸ್ತಾಪ ಸರ್ಕಾರದ ಮುಂದಿಲ್ಲ ಎಂದು ಮೊದಲಿಗೆ ಸ್ಪಷ್ಟಪಡಿಸುತ್ತೇವೆ.
ನಾಗರಿಕರಿಗೆ ಅನಗತ್ಯವಾಗಿ ಹೊರೆಯಾಗದಂತೆ ಸಂಪನ್ಮೂಲ ಕ್ರೋಢೀಕರಣವನ್ನು ಬಲಪಡಿಸುವುದು ಸರ್ಕಾರದ ಮೂಲಭೂತ ಜವಾಬ್ದಾರಿಯಾಗಿರುತ್ತದೆ. ಸಮಾನ ಆರ್ಥಿಕ ಬೆಳವಣಿಗೆಯು ಸ್ಥಿರವಾಗಿರುವಂತೆ ಖಾತ್ರಿಪಡಿಸುವುದರ ಜತೆ ಜತೆಗೇ ತ್ವರಿತವಾಗಿ ಆಗುತ್ತಿರುವ ಆರ್ಥಿಕ ಬೆಳವಣಿಗೆಯ ಕೆಲವು ಪ್ರಯೋಜನಗಳನ್ನು ಸಮಾಜದಲ್ಲಿ ಆರ್ಥಿಕವಾಗಿ ದುರ್ಬಲವಾಗಿರುವ ವರ್ಗವು ಪಡೆದುಕೊಳ್ಳುವಂತೆ ನೋಡಿಕೊಳ್ಳುವುದಕ್ಕೆ ಸರ್ಕಾರವು ಹೆಚ್ಚಿನ ಗಮನ ನೀಡುತ್ತಿದೆ. ಈ ದೃಷ್ಟಿಯಲ್ಲಿ ವರಮಾನ ಸಂಗ್ರಹ ಹೆಚ್ಚಿಸುವ ಹಲವು ಕ್ರಮಗಳನ್ನು ಪ್ರಸ್ತಾಪಿಸಲಾಗುತ್ತಿದೆ ಮತ್ತು ಪರಿಗಣಿಸಲಾಗುತ್ತಿದೆ.
ನಮ್ಮ ರಾಜ್ಯವು ಹೆಚ್ಚುವರಿಯಾಗಿ ತೆರಿಗೇತರ ಆದಾಯವನ್ನು ಹೆಚ್ಚಿಸಿಕೊಳ್ಳುವ ಅಂದರೆ ಗಣಿಗಾರಿಕೆ, ನಗರ ಪ್ರದೇಶಗಳಲ್ಲಿ ಜಾಹೀರಾತು ಅಳವಡಿಕೆ, ಹೆಸರುಗಳ ಹಕ್ಕಿನ ಮಾರಾಟ ಇತ್ಯಾದಿ ಕ್ರಮಗಳಿಂದ ಹೆಚ್ಚಿನ ಆದಾಯವನ್ನು ಗಳಿಸುವ ಅಗಾಧ ಸಾಮರ್ಥ್ಯ ಹೊಂದಿದೆ. ತೆರಿಗೆ ಅನುಸರಣೆಯನ್ನು ಇನ್ನಷ್ಟು ಬಲ ಪಡಿಸುವುದು ಕೂಡ ಸರ್ಕಾರದ ಮುಂದಿರುವ ಮತ್ತೊಂದು ಅವಕಾಶವಾಗಿದೆ. ಹೀಗೆ ಮಾಡಲಾಗಿರುವ ಶಿಫಾರಸುಗಳಲ್ಲಿ, ಆಯಕಟ್ಟಿನ ಜಾಗವಾಗಿರದ ಭೂಮಿಯನ್ನು ನಗದೀಕರಿಸುವುದು ಕೂಡ ಒಂದಾಗಿದೆ. ಹಾಗೆಂದ ಮಾತ್ರಕ್ಕೆ ಸರ್ಕಾರದ ಭೂಮಿಯನ್ನು ಮಾರಾಟ ಮಾಡಲಾಗುತ್ತದೆ ಎಂದೇನು ಅರ್ಥೈಸಬೇಕಾಗಿಲ್ಲ. ಸರ್ಕಾರಿ ಭೂಮಿಯನ್ನು ಮಾರಾಟ ಮಾಡದೆಯೇ ಮತ್ತು ತೆರಿಗೆಗಳನ್ನು ಹೆಚ್ಚಿಸದೆಯೇ ಸಂಪನ್ಮೂಲಗಳನ್ನು ಸಂಗ್ರಹಿಸಲು ಹಲವಾರು ಸೃಜನಶೀಲವಾದ ಮತ್ತು ವ್ಯಾವಹಾರಿಕ ಜಾಣ್ಮೆಯ ಮಾರ್ಗಗಳಿವೆ. ಉದಾಹರಣೆಗೆ, ವ್ಯವಸ್ಥಿತವಾದ ನಗರ ನಿರ್ಮಾಣ ಯೋಜನೆ, ಮೂಲ ಸೌಕರ್ಯಗಳ ನಿರ್ಮಾಣ, ನಾಗರಿಕ ಸೌಕರ್ಯಗಳನ್ನು ಒದಗಿಸುವುದು, ರಸ್ತೆ, ಮೆಟ್ರೋ ಮಾರ್ಗ ನಿರ್ಮಾಣದಂತಹ ಕ್ರಮಗಳ ಮೂಲಕ ಖಾಸಗಿ ಭೂಮಿಯ ಬೆಲೆಯು ಹೆಚ್ಚಳವಾದಂತೆ ಸರ್ಕಾರಿ ಭೂಮಿಯ ಬೆಲೆ ಹೆಚ್ಚಳ ಮಾಡಿ, ವರಮಾನ ಸಂಗ್ರಹವನ್ನು ಹೆಚ್ಚಿಸಿಕೊಳ್ಳಬಹುದಾಗಿದೆ.
ಅತಿಕ್ರಮಣಕ್ಕೆ ಒಳಗಾಗುವ ಅಪಾಯವಿರುವ ರಾಜ್ಯ ಸರ್ಕಾರದ ಮತ್ತು ಇತರ ಸರ್ಕಾರಿ ಸಂಸ್ಥೆಗಳ ಈ ಖಾಲಿ ಜಮೀನುಗಳನ್ನು, ಮಾರಾಟ ಮಾಡದೆಯೇ ರಾಜ್ಯ ಸರ್ಕಾರಕ್ಕೆ ನಿರಂತರವಾಗಿ ಆದಾಯವನ್ನು ತಂದಕೊಡುವಂತೆ ಅಭಿವೃದ್ಧಿಪಡಿಸಬಹುದು. ಸಾರ್ವಜನಿಕ ಭೂಮಿಯನ್ನು ಸಂಪೂರ್ಣವಾಗಿ ಮಾರಾಟ ಮಾಡುವ ಬದಲು, ಸಾರ್ವಜನಿಕರ ಸ್ವತ್ತಾಗಿರುವ ಈ ಭೂಮಿಯನ್ನು ಹಣಕಾಸು ಕ್ರೋಢೀಕರಣದ, ನವೀನವಾದ ಮತ್ತು ಫಲಪ್ರದವಾದ ಆರ್ಥಿಕ ವಿಧಾನಗಳನ್ನುಅಳವಡಿಸಿಕೊಳ್ಳುವುದರ ಮೂಲಕ ಸರ್ಕಾರವು ವರಮಾನ ಸಂಗ್ರಹಿಸಲು ಉದ್ದೇಶಿಸಿದೆ. ಇದಕ್ಕಾಗಿ ಬೇರೆ ರಾಜ್ಯಗಳಲ್ಲಿ ಮತ್ತು ವಿದೇಶಗಳಲ್ಲಿ ಈಗಾಗಲೇ ಯಶಸ್ವಿಯಾಗಿರುವ ಆರ್ಥಿಕ ಕ್ರೋಢೀಕರಣದ ವಿಧಾನಗಳನ್ನು ಬಹಳ ಜಾಗರೂಕತೆಯಿಂದ ಅಧ್ಯಯನ ನಡೆಸಲಾಗುತ್ತಿದ್ದು, ಇದರಲ್ಲಿ ಉತ್ತಮವಾಗಿರುವ ವಿಧಾನವನ್ನು ಸರ್ಕಾರ ಅಳವಡಿಸಿಕೊಳ್ಳಲು ಇಚ್ಛಿಸಿದೆ.ಖಾಸಗಿ ಹೂಡಿಕೆಯನ್ನು ಆಕರ್ಷಿಸಿ, ದೊಡ್ಡ ಕೈಗಾರಿಕಾ ಟೌನ್‌ಶಿಪ್‌ಗಳನ್ನು ಮತ್ತು ನಗರ ಸೌಕರ್ಯಗಳನ್ನು ತ್ವರಿತಗತಿಯಲ್ಲಿ ಅಭಿವೃದ್ಧಿ ಪಡಿಸುವುದರತ್ತ ಗ್ಲೋಬಲ್ ಕನ್ಸಲ್ಟಿಂಗ್ ಗಮನವನ್ನು ಕೇಂದ್ರೀಕರಿಸಿದೆ.ಸಂಪನ್ಮೂಲ ಕ್ರೋಢೀಕರಣಕ್ಕಾಗಿ ತನ್ನ ಮುಂದಿರುವ ಎಲ್ಲ ಕ್ರಮಗಳನ್ನು ಹಾಗೂ ಎಲ್ಲ ರೀತಿಯ ಪ್ರಸ್ತಾವನೆಗಳನ್ನು ಹಣಕಾಸು ಇಲಾಖೆಯು ಪರಿಶೀಲಿಸುತ್ತಿದ್ದು, ಯಾವುದೇ ಕ್ರಮ ಅಥವಾ ಪ್ರಸ್ತಾಪನೆಯು ಸೂಕ್ತವೆನಿಸಿದಲ್ಲಿ ಈ ಬಗ್ಗೆ ಸಾರ್ವಜನಿಕರ ಗಮನಕ್ಕೆ ತಂದೇ ಮುಂದುವರಿಯಲಿದೆ. ಇಲಾಖೆಯ ಮುಂದಿರುವ ಪ್ರಸ್ತಾಪಗಳ ಪ್ರಾಥಮಿಕ ಮಾಹಿತಿಯನ್ನೇ ಆಧಾರವಾಗಿಟ್ಟುಕೊಂಡು ಆತುರದಿಂದ ಯಾವುದೇ ತೀರ್ಮಾನಕ್ಕೆ ಬರುವುದು ಸೂಕ್ತವಲ್ಲ.
‘ಆರೋಗ್ಯ ಸೇವೆ’ಗಳು ಸಮರ್ಪಕವಾಗಿ ಜನರಿಗೆ ಸಲ್ಲದಿದ್ದರೆ ಸಹಿಸಲ್ಲ: ಸಚಿವ ದಿನೇಶ್ ಗುಂಡೂರಾವ್ ಖಡಕ್ ವಾರ್ನಿಂಗ್