ಕೆಎನ್‌ಎನ್‌ಸಿನಿಮಾಡೆಸ್ಕ್‌: ಸಿನೆಮಾ ಅಂದ್ರೆ, ವೀಕೆಂಡ್ ನಲ್ಲಿ ಹಬ್ಬದ ಔತಣವನ್ನ ಕೊಟ್ಟು ಸಿನಿಪ್ರಿಯರನ್ನ ಮನರಂಜಿಸುವ ಕ್ಷೇತ್ರ. ಅದರಲ್ಲೂ ಪ್ರೇಕ್ಷರನ್ನ ತುದಿ ಸೀಟಿಗೆ ತಂದು ಕೂರಿಸುವಂಥ ಕಂಟೆಂಟ್, ಸಸ್ಪೇನ್ಸ್, ಕ್ಷಣ ಕ್ಷಣಕ್ಕೂ ಥ್ರಿಲ್ ಎನಿಸೋ ಕಥಾ ಹಂದರದ ಚಿತ್ರ ಬಂದಿದೆ ಅಂದ್ರೆ ಕೇಳ್ಬೇಕಾ? ಆ ಸಿನೆಮಾಗೆ ಮತ್ಯಾವ ಪಬ್ಲಿಸಿಟಿನೂ ಬೇಡ. ಯಾಕಂದ್ರೆ ಚಿತ್ರ ನೋಡಿದವರ ಬಾಯಿಂದ ಬಾಯಿಗೆ ಹರಡಿ ಚಿತ್ರ ಸಕ್ಸಸ್ ಫುಲ್ ಓಟಕ್ಕೆ ನಾಂದಿಯಾಗತ್ತೆ. ಈಗ್ಯಾಕೆ ಈ ಮಾತು ಅಂದ್ರೆ ಇದೇ ತರಹದ ಒಂದೊಳ್ಳೆ ಕಂಟೆಂಟು ಹೊತ್ತು ಕ್ಷಣವೂ ಚಕಿತಗೊಳಿಸುತ್ತಾ ಸಾಗುವ ನಿರೂಪಣೆ ಮತ್ತು ಸಸ್ಪೆನ್ಸ್ ಥ್ರಿಲ್ಲರ್ ಜಾನರಿಗೇ ಹೊಸಾ ಭಾಷ್ಯ ಬರೆಯುವಂಥಾ ಥ್ರಿಲ್ಲಿಂಗ್ ಅಂಶಗಳೊಂದಿಗೆ ಲಗ್ಗೆ ಇಟ್ಟಿರುವ ಚೇಸ್ ಸಕ್ಸಸ್ ಫುಲ್ ಆಗಿ ರನ್ ಆಗ್ತಿದೆ.

ಹೌದು, ವಿಲೋಕ್ ಶೆಟ್ಟಿ ನಿರ್ದೇಶನದ ಚೇಸ್ ಶುರುವಾದಾಗಿನಿಂದ ಪ್ರೇಕ್ಷಕರನ್ನ ತನ್ನೆಡೆಗೆ ಸೆಳೆದು ಕುತೂಹಲ ಹುಟ್ಟುಹಾಕಿತ್ತು. ಹಾಗಿದ್ದ ಮೇಲೆ ಸಿನೆಮಾ ಕಣ್ತುಂಬಿಕೊಂಡ ಸಿನಿಪ್ರಿಯರನ್ನ ಆವರಿಸಿಕೊಳ್ಳೋದ್ರಲ್ಲಿ ನೋ ಡೌಟ್. ಆದರೆ ನಿರೀಕ್ಷೆಗಿಂತಲೂ ಹೆಚ್ಚಿನ ಮಟ್ಟದಲ್ಲಿ ರೆಸ್ಪಾನ್ಸ್ ಬರ್ತಿದ್ದು ಚೇಸ್ ಸಧ್ಯ ಎಲ್ಲೆಡೆ ಶಹಬ್ಬಾಶ್ ಗಿರಿಗಳೇ ಕೇಳಿಬರ್ತಿವೆ. ಹಾಗಾಗಿ ನೋಡುಗರ ಅಭಿಪ್ರಾಯ ಮತ್ತು ಪ್ರೇಕ್ಷಕ ಪ್ರಭುಗಳ ಸದಭಿಪ್ರಾಯಗಳಿಂದ ಇಂದು ರಾಜ್ಯಾದ್ಯಂತ ಚೇಸ್ ಯಶಸ್ವಿಯಾಗಿ ಪ್ರದರ್ಶನಗೊಳ್ಳುವಂತೆ ನೋಡಿಕೊಂಡಿವೆ.

ಹೀಗೆ ಸಿನೆಮಾವೊಂದು ಗೆಲ್ಲಬೇಕು, ಜನರ ಮನಸಿನಲ್ಲಿ ಹಾಸು ಹೊಕ್ಕಾಗಿ ಉಳಿಯಬೇಕೆಂದರೆ ಅದರ ಕಥಾ ನಿರೂಪಣೆ,ನಟನೆ,ನಿರ್ದೆಶನ, ದೃಷ್ಯ ರೂಪಕ್ಕೆ ಇಳಿಸುವಲ್ಲಿನ ಸಂಕಲನ, ಛಾಯಗ್ರಹಣ, ಸಂಗೀತ, ಲೋಕೇಶನ್, ಚಿತ್ರಿಕರಣಕ್ಕೆ ಬಳಸಿದ ತಂತ್ರಜ್ಞಾನ ಸೇರಿದಂತೆ ಎಲ್ಲವೂ ಸಂಕಲನ- ವ್ಯವಕಲನ,ಗುಣಾಕಾರದಂತೆ ಲೆಕ್ಕಕ್ಕೆ ಬರುತ್ತವೆ. ಆದರೆ ಅವೆಲ್ಲದರಲ್ಲೂ ಚೇಸ್ ಚಿತ್ರತಂಡದ ಶ್ರಮ ಗೆದ್ದಿದ್ದೂ ಈ ಯಶಸ್ಸಿಗೆ ಒಂದು ಕಾರಣ. ಜೊತೆಗೆ ನಿರ್ದೇಶಕ ವಿಲೋಕ್ ಶೆಟ್ಟಿ ಆಯ್ದುಕೊಂಡಿರುವ ಕಥಾ ಎಳೆ ಮತ್ತು ಅದನ್ನು ಪ್ರತೀ ಕ್ಷಣವೂ ಸೀಟಿನಂಚಿಗೆ ತಂದು ಕೂರಿಸುವಂತೆ ನಿರೂಪಣೆ ಮಾಡಿರುವ ರೀತಿಗೆ ಪ್ರೇಕ್ಷಕರೆಲ್ಲರೂ ತಲೆದೂಗಿದ್ದಾರೆ. ಕ್ರೈಂ, ಸಸ್ಪೆನ್ಸ್ ಥ್ರಿಲ್ಲರ್ ಅಂಶಗಳನ್ನೊಳಗೊಂಡಿರುವ ಈ ಚಿತ್ರ ದಲ್ಲಿರುವ ಪ್ರಯೋಗಾತ್ಮಕ ಅಂಶಗಳು ನೋಡುಗರನ್ನ ಸೆಳೆಯೋದ್ರ ಜೊತೆಗೆ ಚಿತ್ರದ ತಾಂತ್ರಿಕ ಶ್ರೀಮಂತಿಕೆಗೆ ಫಿದಾ ಆಗಿದ್ದಾರೆ. ಈ ಸಮಾಜವನ್ನು ನಮಗೆ ಗೊತ್ತಿದ್ದೂ, ಗೊತ್ತಿಲ್ಲದೇ ಕಾಡುತ್ತಿರುವ ಜ್ವಲಂತ ಸಮಸ್ಯೆಯೊಂದರ ಸುತ್ತಲಿನ ಜಾಡು ಹಿಡಿದು, ನಿಜಕ್ಕೂ ಇದು ಸಮಾಜದ ಎಷ್ಟು ದೊಡ್ಡ ಪಿಡುಗೆಂಬ ಅರಿವು ನೀಡುತ್ತಾ, ಸಸ್ಪೆನ್ಸ್ ಥ್ರಿಲ್ಲರ್ ಹಾದಿಯಲ್ಲೇ ಸಾಗುವ ಈ ಚಿತ್ರ ಎಲ್ಲ ವರ್ಗದ ಪ್ರೇಕ್ಷಕರಿಗೂ ಒಪ್ಪಿಗೆಯಾಗುವಂತಿದೆ. ಎಲ್ಲ ಕ್ಷೇತ್ರ, ಪ್ರತಿಯೊಬ್ಬರನ್ನ ಕಾಡಿದ್ದ ಕರೋನಾ ಭಯ ಚೇಸ್ ಚಿತ್ರವನ್ನೂ ಬಿಟ್ಟಿರಲಿಲ್ಲ. ಆದ್ರೆ ಅಂಥಹ ಕೊರೋನಾ ಕಾಲದಲ್ಲೇ ಎದುರಾದ ಸವಾಲುಗಳನ್ನ ಅಟ್ಟಿ, ವರ್ಷಾಂತರಗಳ ಕಾಲ ಚೆಂದಗೆ ರೂಪುಗೊಂಡಿದ್ದ ಚೇಸ್ ತನ್ನ ಬಗೆಗಿನ ಕುತೂಹಲ ಕಿಂಚಿತ್ತೂ ಕಡಿಮೆಯಾಗದಂತೆ ಎಚ್ಚರವಹಿಸಿದ್ದರ ಶ್ರಮ ಈ ಮೂಲಕ ಸಾರ್ಥಕ್ಯ ಕಂಡಿವೆ.

ಈ ಹಿಂದೆ ರಕ್ಷಿತ್ ಶೆಟ್ಟಿ ಅಭಿನಯದ 777 ಚಾರ್ಲಿ ಸಿನೆಮಾ ರಿಲೀಸ್ ಆಗಿ ಇಂದಿಗೂ ಅದರ ಬಿಸಿ ಹಾಗೇ ಇದೆ. ಚಿತ್ರರಂಗದಲ್ಲಿ ಹೊಸ ದಾಖಲೆಯನ್ನೇ ಬರೆದಿರುವ ಚಾರ್ಲಿ 777 ಚಿತ್ರದ ಸುತ್ತ ಹರಡಿಕೊಂಡಿದ್ದ ಕ್ರೇಜ್ ಇನ್ನೂ ಕಡಿಮೆಯಾಗದ ಮತ್ತು ರೋಮಾಂಚನಕಾರಿಯಾದುದು. ಆದ್ರೆ ಇದೀಗ ಚಾರ್ಲಿ ನಂತರದಲ್ಲಿ ಚೇಸ್ ಸುತ್ತಾ ಅಂಥಾದ್ದೊಂದು ಕ್ರೇಜ್ ಹಬ್ಬಿಕೊಂಡಿರೋದು ಅಷ್ಟೇ ಖುಷಿಯ ಸಂಗತಿ.

ಸಿಂಪ್ಲಿ ಫನ್ ಮೀಡಿಯಾ ನೆಟ್ ವರ್ಕ್ ಬ್ಯಾನರಿನಡಿಯಲ್ಲಿ ಮನೋಹರ್ ಸುವರ್ಣ ನಿರ್ಮಾಣ ಮಾಡಿರುವ ಚೇಸ್ ಈವತ್ತಿಗೆ ಭರಪೂರ ಪ್ರದರ್ಶನ ಕಾಣುತ್ತಿರೋದರ ಹಿಂದೆ ಬೆನ್ನೆಲುಬಾಗಿ ನಿಂತು ಚಿತ್ರ ನಿರ್ಮಾಣ ಮಾಡಿರುವ ಸುವರ್ಣರ ಸಿನಿಮಾ ಪ್ರೇಮವೂ ಪ್ರಧಾನ ಪಾತ್ರವಹಿಸಿದೆ ಅಂದ್ರೆ ತಪ್ಪಲ್ಲ. ಇದರೊಂದಿಗೆ ತಾರಾಗಣದಲ್ಲಿ ಅಮೋಘವಾಗಿ ನಟಿಸಿರುವ ಪಾತ್ರಗಳ ಬಗೆಗೆ ನೋಡುಗರ ಒಲವು ಮೂಡಿದೆ. ರಾಧಿಕಾ ನಾರಾಯಣ್ ಅವರ ಭಿನ್ನ ಶೇಡುಗಳಿರುವ ಪಾತ್ರ, ಅರ್ಜುನ್ ಯೋಗಿ, ಶೀತಲ್ ಶೆಟ್ಟಿ ಸೇರಿದಂತೆ ಒಂದಿಡೀ ಪಾತ್ರ ವರ್ಗವೇ ಪ್ರೇಕ್ಷಕರನ್ನು ಸಂಪೂರ್ಣವಾಗಿ ತನ್ನೆಡೆಗೆ ಚೇಸ್ ಮಾಡಿಕೊಂಡಿದೆ ಎನ್ನಬಹುದು.

ಇಂದು ಹೌಸ್ ಫುಲ್ ಪ್ರದರ್ಶನದೊಂದಿಗೆ ಚಿತ್ರಮಂದಿರಕ್ಕೆ ಸೆಳೆಯುತ್ತಿರೋ ಚೇಸ್ ಚಿತ್ರದ ಯಶಸ್ಸಿನ ಹಿಂದೆ ಮನೋಹರ್ ಸುವರ್ಣ ಅವರ ಜೊತೆ ನಿರ್ಮಾಣದಲ್ಲಿ ಪ್ರಶಾಂತ್ ಶೆಟ್ಟಿ ಮತ್ತು ಪ್ರದೀಪ್ ಶೆಟ್ಟಿ ಸಾಥ್ ಕೊಟ್ಟಿರೋದನ್ನೂ ಗಮನಿಸಬೇಕಾದ ಸಂಗತಿಯೇ. ಜೊತೆಗೆ ಚೇಸ್ ಚಿತ್ರಕ್ಕಾಗಿ ಶಿವ್ ಶೆಟ್ಟಿ ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯನಿರ್ವಹಿಸಿದ್ರೆ, ಅನಂತ್ ರಾಜ್ ಅರಸ್ ಛಾಯಾಗ್ರಹಣ, ಕಾರ್ತಿಕ್ ಆಚಾರ್ಯ ಹಿನ್ನೆಲೆ ಸಂಗೀತ ಮತ್ತು ಸಂಗೀತ ನಿರ್ದೇಶನ, ಶ್ರೀ ಕ್ರೇಜಿಮೈಂಡ್ಸ್ ಸಂಕಲನ, ಅವಿನಾಶ್ ಎಸ್ ದಿವಾಕರ್ ಕಲಾ ನಿರ್ದೇಶನ, ಸುನೀಲ್ ಕಟಾಬು ಉಪ ನಿರ್ದೇಶನ, ಡಿಫರೆಂಟ್ ಡ್ಯಾನಿ, ಚೇತನ್ ರಮ್ಶಿ ಡಿಸೋಜಾ ಮತ್ತು ವಿನೋದ್ ಸಾಹಸ ನಿರ್ದೇಶನ, ವಿಜಯ ರಾಣಿ ಮತ್ತು ಸುಶಾಂತ್ ಪೂಜಾರಿ ನೃತ್ಯ ನಿರ್ದೇಶನದ ಶ್ರಮ, ಕನಸುಗಳು ಈ ಚಿತ್ರಕ್ಕಿದೆ. ರಾಧಿಕಾ ನಾರಾಯಣ್, ಅವಿನಾಶ್, ಶೀತಲ್ ಶೆಟ್ಟಿ, ಅರ್ಜುನ್ ಯೋಗಿ, ಸುಶಾಂತ್ ಪೂಜಾರಿ, ರಾಜೇಶ್ ನಟರಂಗ, ಅರವಿಂದ್ ರಾವ್, ಪ್ರಮೋದ್ ಶೆಟ್ಟಿ, ಅರವಿಂದ್ ಬೋಳಾರ್, ಶ್ವೇತಾ ಸಂಜೀವುಲು, ರೆಹಮಾನ್ ಹಾಸನ್, ವೀಣಾ ಸುಂದರ್, ಸುಧಾ ಬೆಳವಾಡಿ, ಉಷಾ ಭಂಡಾರಿ, ಸುಂದರ್, ಸತೀಶ್ ಸಿದ್ಧಾರ್ಥ ಮಾಧ್ಯಮಿಕ, ಪ್ರಿಯಾ ಶಟಮರ್ಶನ್ ಮುಂತಾದವರ ತಾರಾಗಣ ತಮ್ಮ ಅಮೋಘ ನಟನೆಯೊಂದಿಗೆ ತೆರೆಮೇಲೆ ಮಿಂಚಿದ್ದಾರೆ.

ಒಟ್ಟಾರೆ ಒಂದೊಳ್ಳೆ ಕಂಟೆಂಟು, ಪ್ರೇಕ್ಷಕರಿಗೆ ಇಷ್ಟವಾಗೋ ಎಂಜಾಯ್ ಮೆಂಟ್ ಚಿತ್ರದಲ್ಲಿ ಇದ್ದರೆ ತಾನಾಗಿಯೇ ಸಿನೆಮಾವನ್ನ ಪ್ರೇಕ್ಷಕ ಪ್ರಭುಗಳು ಗೆಲ್ಲಿಸೋದ್ರ ಜೊತೆಗೆ ದಾಖಲೆ ನಿರ್ಮಿಸುತ್ತಾರೆ ಅನ್ನೋದಕ್ಕೆ ಮತ್ತೆ ಸಾಕ್ಷಿಯಾದಂತಿದೆ ಈ ಚೇಸ್ ಚಿತ್ರ.

Share.
Exit mobile version