ಚಾಮರಾಜನಗರ : ಸಂವಿಧಾನ ಬದಲಿಸುವುದು ಬಿಜೆಪಿಯ ಹಿಡನ್ ಅಜೆಂಡಾ, ಸಂಸದ ಅನಂತ್ ಕುಮಾರ ಹೆಗಡೆ ಮೂಲಕ ಅದನ್ನು ಹೇಳಿಸುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಚಾಮರಾಜನಗರ ಜಿಲ್ಲೆಯಲ್ಲಿ ನಡೆದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಅನಂತ್ ಕುಮಾರ ಹೆಗಡೆ ಆರ್ಡಿನರಿ ವ್ಯಕ್ತಿ ಅಲ್ಲ, ಐದು ಸಲ ಸಂಸದರು, ಸಚಿವರಾಗಿದ್ದವರು. ಸಂವಿಧಾನ ಬದಲಿನ ವಿಚಾರ ಹೇಳಬೇಕಾದ್ರೆ ಪಕ್ಷದ ತೀರ್ಮಾನ ಆಗಿರದೇ ಹೇಳಲು ಆಗುತ್ತಾ, ಅವರ ವಿರುದ್ಧ ಏನಾದ್ರೂ ಕ್ರಮ ತೆಗೆದುಕೊಂಡರಾ? ಮನುಸ್ಮೃತಿ ಮೇಲೆ ನಂಬಿಕೆ ಇಟ್ಟಿರುವ ಪಕ್ಷ ಅದಾಗಿದ್ದು, ಮನುವಾದದಲ್ಲಿ ನಂಬಿಕೆ ಇಟ್ಟವರು ಬಿಜೆಪಿಯವರು ಸಂವಿಧಾನ ಜಾರಿಯಾದ ದಿನದಿಂದಲೂ ವಿರೋಧ ಮಾಡಿಕೊಂಡು ಬಂದಿದ್ದಾರೆ ಎಂದು ಕಿಡಿಕಾರಿದ್ದಾರೆ.
ಸಂವಿಧಾನ ಬದಲಾಯಿಸುತ್ತೇವೆ ಎನ್ನುತ್ತಿರುವ ಮನುವಾದಿಗಳು ಮತ್ತು ಮನುವಾದ ನಮ್ಮ ನಿಮ್ಮೆಲ್ಲರ ಶತ್ರು. ಸಂವಿಧಾನ ಬದಲಾಯಿಸಲು ಅವಕಾಶ ಆಗದಂತೆ ಅವರನ್ನು ಹೀನಾಯವಾಗಿ ಸೋಲಿಸಿ ಎಂದು ಹೇಳಿದ್ದಾರೆ.