ಮಂಡ್ಯ : ಶನಿವಾರ ಬಂದ್ರೆ ಸಾಕು ನಾಗಮಂಗಲ ಮತ್ತು ಮಂಡ್ಯದ ಕಲೆಕ್ಷನ್ ಪಾಯಿಂಟ್ ಹೋಗಿ ಕಲೆಕ್ಷನ್ ಮಾಡೋದೆ ಸಚಿವ ಚಲುವರಾಯಸ್ವಾಮಿ ಕೆಲಸವಾಗಿದೆ ಎಂದು ಮಾಜಿ ಶಾಸಕ ಸುರೇಶ್ ಗೌಡ ಗಂಭೀರ ಆರೋಪ ಮಾಡಿದರು.
ಕೊಪ್ಪ ಗ್ರಾಮದ ಖಾಸಗಿ ಸಮುದಾಯ ಭವನದಲ್ಲಿ ಬುಧವಾರ ಕೊಪ್ಪ ಹೋಬಳಿಯ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರ ಸಭೆ ನಡೆಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಸಚಿವ ಚಲುವರಾಯಸ್ವಾಮಿ ಅಂತಹ ಮಹಾನ್ ಸುಳ್ಳುಗಾರ ಮತ್ತೋಬ್ಬ ಇಲ್ಲ. ನಾಗಮಂಗಲ ವಿಧಾನಸಭಾ ಕ್ಷೇತ್ರದಲ್ಲಿ ಯಾವುದೇ ಕೆಲಸಗಳು ನಡೆಯುತ್ತಿಲ್ಲ. ಬರೀ ಬೊಗಳೆ ಬಿಟ್ಟುಕೊಂಡು ಜನರನ್ನು ಚಲುವರಾಯಸ್ವಾಮಿ ಯಾಮಾರಿಸುತ್ತಿದ್ದಾರೆ. ನನ್ನ ಅವಧಿಯಲ್ಲಿ ತಂದಿರುವ ಅನುದಾನಗಳಿಗೆ ಗುದ್ದಲಿ ಪೂಜೆ ಮಾಡಿಕೊಂಡು ಶನಿವಾರ ಬಂದ್ರೆ ಸಾಕು ನಾಗಮಂಗಲ ಮತ್ತು ಮಂಡ್ಯದಲ್ಲಿರುವ ಕಲೆಕ್ಷನ್ ಪಾಯಿಂಟ್ ಹೋಗಿ ಕಲೆಕ್ಷನ್ ಮಾಡೋದೆ ಸಚಿವ ಚಲುವರಾಯಸ್ವಾಮಿ ಕೆಲಸವಾಗಿದೆ ಎಂದು ಕಿಡಿಕಾರಿದರು.
ಈ ಸರ್ಕಾರದಲ್ಲಿ ಅಭಿವೃದ್ಧಿಗೆ ಹಣವಿಲ್ಲ. ಕಾಮಗಾರಿಗೆ ಗುದ್ದಲಿ ಪೂಜೆ ಮಾಡಿದ್ರು ಗುತ್ತಿಗೆದಾರರು ಕೆಲಸ ಮಾಡುತ್ತಿಲ್ಲ. ನಾನು ಎರಡು ಬಾರಿ ವಿರೋಧ ಪಕ್ಷದ ಶಾಸಕನಾಗಿದ್ದಾಗಲೂ ಸಹ ಕೊಪ್ಪ ಹೋಬಳಿಯ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದ್ದೇನೆ. ಕೆರೆ ಕಟ್ಟೆಗಳ ಅಭಿವೃದ್ಧಿ, ಕುಡಿಯುವ ನೀರು, ಗ್ರಾಮಗಳಲ್ಲಿ ಸಿಸಿ ರಸ್ತೆ ಮತ್ತು ಚರಂಡಿ, ಹಾಗೂ ಮೂಲಭೂತ ಸೌಕರ್ಯಗಳನ್ನು ಶಕ್ತಿ ಮೀರಿ ಮಾಡಿದ್ದೇನೆ. ನಾಗಮಂಗಲದ ಡಿಪ್ಲೋಮಾ ಕಾಲೇಜು, ಪದವಿ ಕಾಲೇಜು, ಪಿಯು ಕಾಲೇಜು ಸೇರಿದಂತೆ ಹಲವು ಯೋಜನೆಗಳನ್ನು ತಂದಿದ್ದೇನೆ ಆದರೆ, ದುರದೃಷ್ಟವಶಾತ್ ನಾವು ಚುನಾವಣೆಯಲ್ಲಿ ಸೋತ ನಂತರ ಅವರು ಬಂದು ಬೋರ್ಡ್ ಹಾಕಿಕೊಂಡಿದ್ದಾರೆ. ಇದು ನನ್ನ ಅಭಿಪ್ರಾಯವಲ್ಲ ಯಾರು ಮಾಡಿದ್ದಾರೆ ಎಂಬುದು ಕ್ಷೇತ್ರದ ಜನತೆಗೆ ಗೊತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಮಂಡ್ಯದ ವಿ.ಸಿ ಫಾರಂ ಅನ್ನು ಕೃಷಿ ವಿವಿ ಮಾಡಿದ್ದೇನೆ ಎಂದು ಬೆನ್ನು ತಟ್ಟಿಕೊಳ್ಳೋದಲ್ಲ. ಸರ್ಕಾರದಿಂದ 500 ಕೋಟಿ ಅನುದಾನ ಬಿಡುಗಡೆ ಆಗಿದ್ದಿಯಾ, ಅಥವಾ ಸಿಬ್ಬಂದಿ ನಿಯೋಜನೆಯಾಗಿಲ್ಲ. ಏನು ಮಾಡದೇ ಘೋಷಣೆ ಮಾಡಲಾಗಿದೆ ಅಷ್ಟೇ. ನಾಗಮಂಗಲ ಕ್ಷೇತ್ರದ ಅಭಿವೃದ್ಧಿ ಮಾಡಬೇಕೆನ್ನುವ ಮನಸ್ಸಿದರೆ ತಾಲೂಕಿನಲ್ಲಿ 900 ಎಕರೆ ಜಮೀನಿದೆ ಅಲ್ಲಿಗೆ ತೋಟಗಾರಿಕೆ ವಿಶ್ವವಿದ್ಯಾಲಯ ತರುವಂತೆ ಶಾಸಕ ಸುರೇಶ್ ಗೌಡ ಸವಾಲು ಹಾಕಿದರು.
ಜಿಲ್ಲೆಯ ಅಭಿವೃದ್ಧಿಗೆ ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಸಾಕಷ್ಟು ಯೋಜನೆಗಳನ್ನು ಹಾಕಿಕೊಂಡಿದ್ದಾರೆ. ಈಗಾಗಲೇ ಜಿಲ್ಲೆಯ ವಿವಿಧೆಡೆ ಬೃಹತ್ ಕೈಗಾರಿಕೆಗಳನ್ನು ಸ್ಥಾಪಿಸಲು ಜಮೀನುಗಳನ್ನು ನೀಡುವಂತೆ ಸರ್ಕಾರಕ್ಕೆ ಮತ್ತು ಜಿಲ್ಲಾಡಳಿತಕ್ಕೂ ಸಭೆಯಲ್ಲಿ ಪ್ರಸ್ತಾಪ ಮಾಡಿದ್ದಾರೆ. ಆದರೆ, ಇಲ್ಲಿಯವರೆಗೂ ಯಾವುದೇ ಜಾಗವನ್ನು ಗುರುತಿಸಿಲ್ಲ. ಕೈಗಾರಿಕೆಗಳು ಸ್ಥಾಪನೆಯಾದರೆ ಅದರ ಕ್ರೆಡಿಟ್ ಕುಮಾರಸ್ವಾಮಿಗೆ ಹೋಗುತ್ತೆ ಎಂದು ರಾಜ್ಯ ಸರ್ಕಾರ ಸ್ಪಂದಿಸುತ್ತಿಲ್ಲ ಎಂದರು. ಭದ್ರಾವತಿ ಉಕ್ಕಿನ ಕಾರ್ಖಾನೆಯನ್ನು ರೀ ಓಪನ್ ಮಾಡೋಕೆ ಮುಂದಾದರೇ ಗಣಿಗಾರಿಕೆ ಅನುಮತಿ ನೀಡುತ್ತಿಲ್ಲ. ಆದರೆ, ಆಂಧ್ರಪ್ರದೇಶದ ಚಂದ್ರಬಾಬು ನಾಯ್ಡು ಅವರು ಕುಮಾರಸ್ವಾಮಿ ಮನವೊಲಿಸಿ ವೈಜಾಕ್ ನಲ್ಲಿ ಕಾರ್ಖಾನೆ ಪುನರಾರಂಭ ಮಾಡಿಸಿದ್ದಾರೆ ಆದರೆ, ರಾಜ್ಯ ಸರ್ಕಾರ ಕುಮಾರಸ್ವಾಮಿ ರಾಜ್ಯದಲ್ಲಿ ಯಾವುದೇ ಕೆಲಸ ಮಾಡುತ್ತಿಲ್ಲ ಎನ್ನುವುದು ಜನರಿಗೆ ಗೊತ್ತಗಲಿ ಎಂದು ಬಿಂಬಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸೋಕೆ ಮುಖವಿಲ್ಲ. ಬಿಬಿಎಂಪಿ, ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆ ನಡೆದು ಎಷ್ಟು ವರ್ಷಗಳಾಯಿತು. ಎಲ್ಲೆಲ್ಲಿ ಯಾವ ಯಾವ ಮೀಸಲಾತಿ ತರಬೇಕು ಅಂತ ಯೋಜನೆಗಳು ಕೂಡ ನಡೆಯುತ್ತಿವೆ. ಈ ಸರ್ಕಾರ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಇದ್ದಿಯಾ ಎಂದು ಪ್ರಶ್ನಿಸಿದರು.
ಇತ್ತಿಚೆಗೆ ಕೊಪ್ಪ ಗ್ರಾಮದಲ್ಲಿ ನಡೆದ 100 ಕೋಟಿ ವೆಚ್ಚದ ಕಾಮಗಾರಿಗೆ ಗುದ್ದಲಿ ಪೂಜೆ ಮಾಡಿರುವುದು ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಗುತ್ತಿಗೆದಾರರಿಗೊಸ್ಕರ ಕೆಲಸಗಳನ್ನು ತಂದಿದ್ದಾರೆ. ಅದರಲ್ಲೂ ಸಾಕಷ್ಟು ನ್ಯೂನತೆಗಳಿದ್ದು, ಅದು ಕೂಡ ಸ್ವಲ್ಪ ದಿನದಲ್ಲೇ ಎಲ್ಲಾ ಹಗರಣಗಳು ಹೊರಬರುತ್ತವೆ ಎಂದರು.
ಇದೇ ವೇಳೆ ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ಬಿದಿರಕೋಟೆ ಕುಶ, ಜಿಲ್ಲಾ ಯುವ ಘಟಕದ ಉಪಾಧ್ಯಕ್ಷ ಪ್ರದೀಪ್, ಜೆಡಿಎಸ್ ತಾಲೂಕು ಅಧ್ಯಕ್ಷ ಚನ್ನಪ್ಪ, ಕೊಪ್ಪ ಹೋಬಳಿ ಘಟಕದ ಅಧ್ಯಕ್ಷ ರಾಯಲಿಂಗು, ಕಾರ್ಯಾಧ್ಯಕ್ಷ ಗಿರೀಶ್, ಜವಹಾರ್‌ಲಾಲ್, ಜಿ.ಪಂ ಮಾಜಿ ಸದಸ್ಯ ಮರಿ ಹೆಗ್ಗಡೆ, ಮಹಿಳಾ ಘಟಕದ ಅಧ್ಯಕ್ಷೆ ಸೋನು, ಬಿದರಕೋಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಸೋಮು, ಮುಖಂಡರಾದ ಸುಂದರೇಶ್, ಸಿದ್ದಲಿಂಗಯ್ಯ, ಹೊಂಬಾಳೆ, ಗೋವಿಂದರಾಜು ಮತ್ತಿತರರು ಇದ್ದರು.
ವರದಿ : ಗಿರೀಶ್ ರಾಜ್, ಮಂಡ್ಯ








