ಮಂಡ್ಯ : ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ ( ಸ್ವಾರ್ ಚಂದ್ರು ) ಪರ ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ತೂಗುದೀಪ್, ಸಚಿವ ಎನ್.ಚಲುವರಾಯಸ್ವಾಮಿ, ಶಾಸಕ ಗಣಿಗ ರವಿ ಹಾಗೂ ಮಾಜಿ ಎಂಎಲ್ಸಿ ಎನ್.ಅಪ್ಪಾಜಿಗೌಡ ಜೊತೆಗೂಡಿ ಸೋಮವಾರ ನಾಗಮಂಗಲ ವಿಧಾನಸಭಾ ಕ್ಷೇತ್ರದ ಕೊಪ್ಪ ಗ್ರಾಮದಲ್ಲಿ ಭರ್ಜರಿ ಮತ ಶಿಕಾರಿ ನಡೆಸಿದರು.
ನಟ ದರ್ಶನ್ ಪ್ರಚಾರಕ್ಕೆ ಬರುತ್ತಿರುವ ವಿಷಯ ತಿಳಿಯುತ್ತಿದ್ದಂತೆ ನೆಚ್ಚಿನ ನಟನನ್ನು ನೋಡಲು ಕೊಪ್ಪ ಗ್ರಾಮದಲ್ಲಿ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಅಂತೆಯೇ ಕೊಪ್ಪ ಗೆ ಆಗಮಿಸುತ್ತಿದ್ದಂತೆ ಅಭಿಮಾನಿಗಳ ಜೈಕಾರ ಮುಗಿಲು ಮುಟ್ಟಿತ್ತು. ಕ್ರೇನ್ ಮೂಲಕ ಬೃಹತ್ ಗುಲಾಬಿ ಹಾರ ಹಾಕಿ ಸ್ವಾಗತ ಕೋರಲಾಯಿತು.
ಬಳಿಕ ಮದ್ದೂರು ವಿಧಾನಸಭಾ ಕ್ಷೇತ್ರದ ಕೆಸ್ತೂರು, ಕೆ.ಹೊನ್ನಲಗೆರೆ, ಮುಡೇನಹಳ್ಳಿ ಗೇಟ್, ಕೆ.ಎಂ.ದೊಡ್ಡಿ (ಭಾರತೀ ನಗರ ), ಬೆಸಗರಹಳ್ಳಿ ಗ್ರಾಮಗಳಲ್ಲಿ ರೋಡ್ ಶೋ ಮೂಲಕ ಪ್ರಚಾರ ನಡೆಸಿ ಮದ್ದೂರು ಪಟ್ಟಣದ ಟಿಬಿ ವೃತ್ತದಿಂದ ಪೇಟೆ ಬೀದಿ ಮೂಲಕ ಶ್ರೀ ಉಗ್ರ ನರಸಿಂಹಸ್ವಾಮಿ ದೇವಾಲಯದವರೆಗೆ ಬೃಹತ್ ರೋಡ್ ಶೋ ನಡೆಸಿ ಬಹಿರಂಗ ಪ್ರಚಾರ ನಡೆಸಿದರು.
ಇದೇ ವೇಳೆ ಕೊಪ್ಪದಲ್ಲಿ ಮಾತನಾಡಿದ ಸಚಿವ ಎನ್.ಚಲುವರಾಯಸ್ವಾಮಿ ಮಾತನಾಡಿ, ಮಂಡ್ಯದಲ್ಲಿ ಸ್ವಾಭಿಮಾನ ಉಳಿಸಲು ದರ್ಶನ್ ಅವರು ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಪರ ಪ್ರಚಾರಕ್ಕೆ ಬಂದಿದ್ದಾರೆ. ದರ್ಶನ್ ಅವರ ಪ್ರಚಾರದಿಂದ ಕಾಂಗ್ರೆಸ್ ಗೆ ವಿಜಯಮಾಲೆ ಮಂಡ್ಯದಲ್ಲಿ ಸಿಗಲಿದೆ. ಅವರ ಅಭಿಮಾನಿಗಳ ಶಕ್ತಿ ಕಾಂಗ್ರೆಸ್ ಸಿಗಬೇಕು ಎಂದು ಮನವಿ ಮಾಡಿದರು.
ಮೈತ್ರಿ ಪಕ್ಷದ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಅವರು ಸ್ಥಳಿಯ ಅಭ್ಯರ್ಥಿಯಲ್ಲ. ಆದರೆ, ನಮ್ಮ ಪಕ್ಷದ ಅಭ್ಯರ್ಥಿಯಾದ ಸ್ಟಾರ್ ಚಂದ್ರು ಮೂಲತಃ ನಮ್ಮ ಜಿಲ್ಲೆಯವರೇ ಎಂಬುವುದನ್ನು ನೀವು ಮನಗಾಣಬೇಕು. ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದಾಗಲೇ ಜಿಲ್ಲೆಯ ಅಭಿವೃದ್ಧಿ ಏನು ಮಾಡಿಲ್ಲ ಹೀಗಿರುವಾಗ ಸಂಸದರಾಗಿ ಒಂದು ವೇಳೆ ಚುನಾಯಿತರಾದರೆ ಏನು ಮಾಡಲು ಸಾಧ್ಯ ಎಂದು ಪ್ರಶ್ನಿಸಿದರು.
ನಟ ದರ್ಶನ್ ಮಾತನಾಡಿ, ನಾನು ಯಾವುದೇ ಪಕ್ಷದ ಪರವಾಗಿ ನಾನು ಬರಲ್ಲ. ಬದಲಿಗೆ ಬರುವುದು ವ್ಯಕ್ತಿ ಪರವಾಗಿ ಮಾತ್ರ. ಕಳೆದ ಐದು ವರ್ಷದ ಹಿಂದೆ ಚಲುವರಾಯಸ್ವಾಮಿ ಹಾಗೂ ಜಿಲ್ಲೆಯ ಕಾಂಗ್ರೆಸ್ ನಾಯಕರು ಮಾಡಿದ ಸಹಾಯ ಮರೆಯಲ್ಲ. ಈ ಬಾರಿ ಸುಮಲತಾ ಅಮ್ಮನಿಗೆ ಟಿಕೇಟ್ ಸಿಗಲಿಲ್ಲ ಎಂದರೇ ನಮ್ಮ ಪರ ಪ್ರಚಾರ ಮಾಡುವಂತೆ ಶಾಸಕ ಉದಯ್ ಹೇಳಿದ್ದರು. ಮೊದಲೇ ಅವರು ಕೇಳಿದ ಕಾರಣ ಪ್ರಚಾರಕ್ಕೆ ಬಂದಿದ್ದೇನೆ ಎಂದರು. ಹೀಗಾಗಿ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಅವರಿಗೆ ಮತ ನೀಡಬೇಕೆಂದು ಮನವಿ ಮಾಡಿದರು.
ಇನ್ನು ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಮಾತನಾಡಿ, ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಮತ್ತಷ್ಟು ಗ್ಯಾರಂಟಿಗಳನ್ನು ಜಾರಿಗೊಳಿಸಲಾಗುತ್ತೆ. ನಾನು ಈ ಮಣ್ಣಿನ ಮಗ, ದಯಮಾಡಿ ಈ ಬಾರಿಯ ಚುನಾವಣೆಯಲ್ಲಿ ನನ್ನನ್ನು ಗೆಲ್ಲಿಸಿಕೊಡಿ ಎಂದು ಮನವಿ ಮಾಡಿದರು.
ಇದೇ ವೇಳೆ ಶಾಸಕರಾದ ಕೆ.ಎಂ. ಉದಯ್, ಗಣಿಗ ರವಿಕುಮಾರ್, ಮಾಜಿ ಎಂಎಲ್ಸಿ ಎನ್.ಅಪ್ಪಾಜಿಗೌಡ, ನಾಗಮಂಗಲ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎನ್.ದಿವಾಕರ್, ತಾಪಂ ಮಾಜಿ ಅಧ್ಯಕ್ಷೆ ಲಕ್ಷ್ಮಿ ಚನ್ನರಾಜು, ತಾಪಂ ಮಾಜಿ ಉಪಾಧ್ಯಕ್ಷರಾದ ರಾಮಚಂದ್ರು, ಬೆಕ್ಕಳಲೆ ರಘು, ಮುಖಂಡರಾದ ಕುಮಾರ್ ಕೊಪ್ಪ, ಕ್ರಾಂತಿಸಿಂಹ, ಚಿಕ್ಕೊನಹಳ್ಳಿ ತಮ್ಮಯ್ಯ, ಫರ್ವಿಜ್ ಮತ್ತಿತರರು ಇದ್ದರು.
ವರದಿ : ಗಿರೀಶ್ ರಾಜ್, ಮಂಡ್ಯ
BREAKING: ರಾಯಚೂರಲ್ಲಿ ಹನುಮ ಮಾಲಾಧಾರಿಗಳಿಗೆ ಬೊಲೇರೋ ವಾಹನ ಡಿಕ್ಕಿ: ಮೂವರು ಸ್ಥಳದಲ್ಲೇ ಸಾವು, ಇಬ್ಬರಿಗೆ ಗಂಭೀರ ಗಾಯ
ಇಂದು ‘ಬೆಂಗಳೂರು ಕರಗ’ ಮಹೋತ್ಸವ: ಈ ರಸ್ತೆಗಳಲ್ಲಿ ಸಂಚಾರ ನಿರ್ಬಂಧ, ಇಲ್ಲಿದೆ ಪರ್ಯಾಯ ಮಾರ್ಗ