ಬೆಂಗಳೂರು: 1974ರಲ್ಲಿ ಒಂದು ಗಜೆಟ್ ಅಧಿಸೂಚನೆ ಹೊರಡಿಸಲಾಗಿತ್ತು. ಆಗ ಕಾಂಗ್ರೆಸ್ ಸರಕಾರವೇ ಅಧಿಕಾರದಲ್ಲಿತ್ತು. ಆ ಗಜೆಟ್ ಅಧಿಸೂಚನೆಯನ್ನು ವಾಪಸ್ ಪಡೆಯದಿದ್ದರೆ, ಮುಖ್ಯಮಂತ್ರಿಗಳ ವಕ್ಫ್ ಕುರಿತ ನೋಟಿಸ್ ವಾಪಸ್ ಪಡೆಯುವ ಬೊಗಳೆ ಭಾಷಣದಿಂದ ಯಾವುದೇ ಪ್ರಯೋಜನ ಆಗದು ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ.
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಅವರು, ಬ್ಯಾಂಕಿನಿಂದ ಹಣ ಕೋರಿ ಒಂದು ನೋಟಿಸ್ ಬರುತ್ತದೆ. ಬಡ್ಡಿ ಸಮೇತ ಕಟ್ಟಲು ಸೂಚಿಸುತ್ತಾರೆ. ಯಾರದೋ ಪ್ರಭಾವದಿಂದ ನೋಟಿಸ್ ಹಿಂಪಡೆದರೆ ಹಣ ಕಟ್ಟದೆ ಇರಲು ಸಾಧ್ಯವೇ? ನೋಟಿಸ್ ವಾಪಸ್ ಪಡೆದರೆ ಏನೂ ಆಗದು. ಇದು ರೈತರನ್ನು ದಾರಿ ತಪ್ಪಿಸುವ ಕೆಲಸ ಎಂದು ಟೀಕಿಸಿದರು.
ಜಮೀರ್ ಅಹ್ಮದ್ ಅವರಂತೆ ಪ್ರಚೋದನಕಾರಿ ಭಾಷಣ ಮಾಡಿದರೆ ಯಾರಿಗೆ ತಾನೇ ಕೋಪ ಬರುವುದಿಲ್ಲ? ಒಂದೆಡೆ ಭೂಮಿ ಕಳಕೊಳ್ಳುವ ಆತಂಕ, ಮತ್ತೊಂದು ಕಡೆ ಈ ರೀತಿ ಬೆಂಕಿ ಹಚ್ಚುವ ಕೆಲಸವನ್ನು ಸರಕಾರವೇ ಮಾಡುತ್ತಿದೆ. ಇಂಥವರು ಸರಕಾರದಲ್ಲಿ ಸಚಿವರಾಗಿ ಮುಂದುವರೆಯಲು ಸಾಧ್ಯವೇ ಎಂದು ಪ್ರಶ್ನಿಸಿದರು.
ಇದನ್ನು ಪ್ರಶ್ನೆ ಮಾಡಿದರೆ, ನನ್ನನ್ನು ಯಾರು ಸಂಪುಟದಿಂದ ಕೈಬಿಡುತ್ತಾರೆ ಎಂದು ಸವಾಲು ಹಾಕುತ್ತಾರೆ. ಜಮೀರ್ ಅವರು, ಅವರ ಸರಕಾರ, ಅವರ ಮುಖ್ಯಮಂತ್ರಿ, ಅವರದೇ ಪಕ್ಷದ ಹೈಕಮಾಂಡಿಗೆ ಸವಾಲು ಹಾಕಿದ್ದಾರೆ ಎಂದು ವಿವರಿಸಿದರು.
ಇದೇ ಸಂದರ್ಭದಲ್ಲಿ ಛಲವಾದಿ ನಾರಾಯಣಸ್ವಾಮಿ ಅವರು ರಾಜ್ಯದ ಜನತೆ, ಮಾಧ್ಯಮ ಮಿತ್ರರಿಗೆ ದೀಪಾವಳಿ ಶುಭ ಕೋರಿದರು.