ಬೆಂಗಳೂರು: ಬಿಡಿಎ ಕಾಂಪ್ಲೆಕ್ಸ್‍ಗಳನ್ನು ಲೀಸ್‍ಗೆ ಕೊಡುವ ಮೂಲಕ ಪರೋಕ್ಷ ಮಾರಾಟಕ್ಕೆ ದಿವಾಳಿಯತ್ತ ಮುನ್ನಡೆಯುತ್ತಿರುವ ರಾಜ್ಯದ ಕಾಂಗ್ರೆಸ್ ಸರಕಾರ ಮುಂದಾಗಿದೆ. ಇದರ ವಿರುದ್ಧ ಬಿಜೆಪಿಯು ಜನರ ಜೊತೆಗೂಡಿ ಹೋರಾಟವನ್ನು ಹಮ್ಮಿಕೊಳ್ಳಲಿದೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಎಚ್ಚರಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಚ್‍ಎಸ್‍ಆರ್ ಲೇ ಔಟ್, ಆಸ್ಟಿನ್ ಟೌನ್, ಕೋರಮಂಗಲ, ವಿಜಯನಗರ, ಆರ್.ಟಿ.ನಗರ, ಸದಾಶಿವನಗರದ ಬಿಡಿಎ ಸ್ವತ್ತುಗಳನ್ನು ನುಂಗಣ್ಣಗಳು ನುಂಗಲು ಹೊರಟಿದ್ದಾರೆ. 2013-18ರಲ್ಲಿ ಇದೇ ಮಾದರಿಯ ಯೋಜನೆ ಜಾರಿಗೊಳಿಸಲು ಕಾಂಗ್ರೆಸ್ ಸರಕಾರ ಮುಂದಾಗಿತ್ತು. ಇದರ ವಿರುದ್ಧ ಬೆಂಗಳೂರಿನ ಜನರು ಪ್ರತಿಭಟನೆ ಮಾಡಿದ್ದರು ಎಂದು ನೆನಪಿಸಿದರು.
ಆಗ ಅದು ನಿಂತು ಹೋಗಿತ್ತು. ಮಡಿವಾಳದ ಆಸ್ತಿ ಕಾಂಗ್ರೆಸ್ ನಾಯಕರ ಪಾಲಾದಂತೆ ಇದು ಕೂಡ ಆಗಬಾರದೆಂದು ಜನರು ಹೋರಾಟ ಆರಂಭಿಸಿದ್ದಾರೆ. 3 ಸಾವಿರ ಕೋಟಿ ಬೆಲೆಬಾಳುವ ಆಸ್ತಿ ಇದು. ಇದರ ಹಿಂದೆ 200 ಕೋಟಿಗೂ ಮೇಲ್ಪಟ್ಟು ಕಿಕ್ ಬ್ಯಾಕ್ ಇದೆ ಎಂದು ಆರೋಪಿಸಿದರು.
ಇದೇನೂ ಕಾಂಗ್ರೆಸ್ಸಿಗರ ಅಪ್ಪನ ಆಸ್ತಿ ಅಲ್ಲ. ಬಿಡಿಎ ಹಿಂದಿನ ಅಧ್ಯಕ್ಷರು ಆಸ್ತಿಗಳನ್ನು ಉಳಿಸಿ ಬೆಳೆಸಿದ್ದಾರೆ. ‘ದಿನವೂ ಕೋಳಿ ಮೊಟ್ಟೆ ತಿನ್ನೋದ್ಯಾಕೆ? ಕೋಳಿಯನ್ನೇ ತಿಂದರೆ ಹೇಗೆ’ ಎಂದು ಇವರು ಹೊರಟಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಇದನ್ನು ಕಾಂಗ್ರೆಸ್ ನುಂಗಣ್ಣಗಳ ಪಾಲಾಗಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಎಚ್‍ಎಸ್‍ಆರ್‍ನಲ್ಲಿ ಸತೀಶ್ ರೆಡ್ಡಿಯವರ ನೇತೃತ್ವದಲ್ಲಿ ಪ್ರತಿಭಟನೆಗೆ ಜನರು ಮುಂದಾಗಿದ್ದಾರೆ. ಸರಕಾರವು ಪಾಪರ್ ಆಗಿದ್ದರೆ ಬೇರೆ ಆದಾಯ ಮೂಲಗಳನ್ನು ಹುಡುಕಬೇಕು. ಸರಕಾರಿ ಆಸ್ತಿ ನುಂಗಿ ನೀರು ಕುಡಿಯಲು ಯಾವುದೇ ಕಾರಣಕ್ಕೂ ಅವಕಾಶ ಕೊಡುವುದಿಲ್ಲ ಎಂದು ತಿಳಿಸಿದರು. ಟೆಂಡರ್ ಪ್ರಸ್ತಾಪವವನ್ನು ರದ್ದು ಮಾಡಬೇಕು. ಇಲ್ಲವಾದರೆ ವಿಧಾನಸಭೆ ಒಳಗೆ ಮತ್ತು ಹೊರಗಡೆ ಹೋರಾಟ ನಡೆಸುತ್ತೇವೆ ಎಂದು ಆರ್. ಅಶೋಕ್ ಅವರು ತಿಳಿಸಿದರು.
ಹಿಂದೆ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಇದ್ದಾಗ ಈ ಕಡತ ಬಂದಿತ್ತು. ನಾನು ಸಚಿವನಾಗಿದ್ದೆ. ಇದು ಲೂಟಿ ಹೊಡೆಯುವ ಸ್ಕೀಂ ಎಂದು ತಿಳಿಸಿ ರದ್ದು ಮಾಡಿಸಿದ್ದೆ. ಮತ್ತೆ ಈ ಮಾಫಿಯಾವು ಬಸವರಾಜ ಬೊಮ್ಮಾಯಿಯವರ ಮುಂದೆ ಈ ಕಡತವನ್ನು ತಂದಿತ್ತು. ಆದರೆ, ಬೊಮ್ಮಾಯಿಯವರು ಲೀಸ್‍ಗೆ ಅವಕಾಶ ಕೊಡಲಿಲ್ಲ. ಈಗ ಮತ್ತೆ ಬಿಡಿಎ ಕಾಂಗ್ರೆಸ್ ಅಧಿಕಾರದಲ್ಲಿ ಹರಾಜಿಗೆ ಬರುತ್ತಿದೆ ಎಂದು ಅವರು ತಿಳಿಸಿದರು.
ಕೇಂದ್ರದಲ್ಲಿರುವ ರಾಹುಲ್ ಗಾಂಧಿ, ಸೋನಿಯಾ ಗಾಂಧಿಯವರಿಗೆ ಕಪ್ಪ ಕೊಡಲು ಈ ಹಣವನ್ನು ಲೂಟಿ ಮಾಡಲು ಹೊರಟಿದ್ದಾರೆ ಎಂದು ಅವರು ಆರೋಪಿಸಿದರು. ಸರಕಾರಿ ಆಸ್ತಿ ಉಳಿಸಿಕೊಳ್ಳಲು ಬೆಂಗಳೂರಿನ ಜನರು ಬೆಂಬಲವಾಗಿ ನಿಲ್ಲಬೇಕಿದೆ ಎಂದು ತಿಳಿಸಿದರು.
ಕೇಂದ್ರ ಸರಕಾರ ಬಿಡುಗಡೆ ಮಾಡಿದ ಬರ ಪರಿಹಾರ ಮೊತ್ತಕ್ಕೆ ಮ್ಯಾಚಿಂಗ್ ಗ್ರಾಂಟ್ ಸೇರಿಸಿ ರೈತರಿಗೆ ನೀಡಬೇಕು. ಇದನ್ನು ಯಾವುದೇ ಕಾರಣಕ್ಕೂ ಗ್ಯಾರಂಟಿ ಸ್ಕೀಂಗಳಿಗೆ ಬಳಸಬಾರದು ಎಂದು ಅವರು ಆಗ್ರಹಿಸಿದರು.
ಜನರು ಇಂದು ನಡೆಯುವ ರಾಜ್ಯದ ಎರಡನೇ ಹಂತದ ಮತದಾನದಲ್ಲಿ ಗರಿಷ್ಠ ಪ್ರಮಾಣದಲ್ಲಿ ಮತದಾನ ಮಾಡಬೇಕು. ಈ ಮೂಲಕ ಸುಭದ್ರ ಸರಕಾರ ರಚನೆಗೆ ಅವಕಾಶ ಮಾಡಿಕೊಡಬೇಕು ಎಂದು ಅವರು ವಿನಂತಿಸಿದರು.
ಬಿಜೆಪಿ ರಾಜ್ಯ ಉಪಾಧ್ಯಕ್ಷರಾದ ಶ್ರೀಮತಿ ಮಾಳವಿಕ ಅವಿನಾಶ್, ರಾಜ್ಯ ಮುಖ್ಯ ವಕ್ತಾರ ಅಶ್ವತ್ಥÀನಾರಾಯಣ್ ಅವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಭಾರತೀಯ ಸೇನೆಯಿಂದ ಭರ್ಜರಿ ಭೇಟೆ : ಜಮ್ಮುಕಾಶ್ಮೀರದ ಕುಲ್ಗಾಮದಲ್ಲಿ ಮೂವರು ಉಗ್ರರು ಫಿನಿಶ್!
‘ಪೊಲೀಸರು ಪೆನ್ ಡ್ರೈವ್ ವಿತರಿಸಿದ್ರೂ, ಚುನಾವಣಾ ಆಯೋಗ ಕ್ರಮ ಕೈಗೊಂಡಿಲ್ಲ’ : ಮಾಜಿ ಸಿಎಂ ಹೆಚ್. ಡಿ ಕುಮಾರಸ್ವಾಮಿ