ದೇಶದ ಆರ್ಥಿಕತೆಗೆ ವೇಗ ನೀಡಲು ಮತ್ತು ಉತ್ಪಾದನಾ ವಲಯವನ್ನು ಬಲಪಡಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟವು ಮಹತ್ವದ ತೀರ್ಮಾನ ಕೈಗೊಂಡಿದೆ. ಚೀನಾ ಸೇರಿದಂತೆ ಭಾರತದೊಂದಿಗೆ ಭೂ ಗಡಿ ಹಂಚಿಕೊಳ್ಳುವ ದೇಶಗಳ ಹೂಡಿಕೆ ನಿಯಮಗಳನ್ನು ಸರಳಗೊಳಿಸಲಾಗಿದ್ದು, ‘ಆಟೋಮ್ಯಾಟಿಕ್ ರೂಟ್’ ಮೂಲಕ ಹೂಡಿಕೆಗೆ ಅವಕಾಶ ಕಲ್ಪಿಸಲಾಗಿದೆ.
ಹೊಸ ನಿಯಮದ ಮುಖ್ಯಾಂಶಗಳು:
ಶೇ. 10ರ ವರೆಗೆ ನೇರ ಹೂಡಿಕೆ: ಗಡಿ ಹಂಚಿಕೊಳ್ಳುವ ದೇಶಗಳ ಕಂಪನಿಗಳು ಭಾರತೀಯ ಕಂಪನಿಗಳಲ್ಲಿ ಶೇ. 10ರ ವರೆಗೆ ‘ನಿಯಂತ್ರಣವಲ್ಲದ’ (non-controlling) ಪಾಲನ್ನು ಹೊಂದಿದ್ದರೆ, ಈಗ ಸರ್ಕಾರದ ಪೂರ್ವ ಅನುಮತಿ ಇಲ್ಲದೆಯೇ ನೇರವಾಗಿ ಹೂಡಿಕೆ ಮಾಡಬಹುದು.
60 ದಿನಗಳ ಗಡುವು: ಎಲೆಕ್ಟ್ರಾನಿಕ್ ಬಿಡಿಭಾಗಗಳು, ಸೋಲಾರ್ ಪ್ಯಾನಲ್ ಮತ್ತು ಕೈಗಾರಿಕಾ ಯಂತ್ರೋಪಕರಣಗಳಂತಹ ಪ್ರಮುಖ ವಲಯಗಳಲ್ಲಿನ ಹೂಡಿಕೆ ಪ್ರಸ್ತಾವನೆಗಳನ್ನು ಇನ್ನು ಮುಂದೆ ಕೇವಲ 60 ದಿನಗಳಲ್ಲಿ ವಿಲೇವಾರಿ ಮಾಡಲಾಗುವುದು.
’ಬೆನಿಫಿಷಿಯಲ್ ಓನರ್ಶಿಪ್’ ಸ್ಪಷ್ಟನೆ: ಹೂಡಿಕೆ ಮಾಡುವ ಕಂಪನಿಯ ನೈಜ ಮಾಲೀಕರು ಯಾರು ಎಂಬುದನ್ನು ಪತ್ತೆಹಚ್ಚಲು ಮನಿ ಲಾಂಡರಿಂಗ್ ತಡೆ ಕಾಯ್ದೆಯಡಿ ಸ್ಪಷ್ಟ ಮಾನದಂಡಗಳನ್ನು ರೂಪಿಸಲಾಗಿದೆ.
ಭಾರತೀಯರ ನಿಯಂತ್ರಣ: ಹೂಡಿಕೆ ಸಡಿಲಿಸಿದರೂ, ಆ ಕಂಪನಿಗಳ ಬಹುಪಾಲು ಷೇರು ಮತ್ತು ಆಡಳಿತಾತ್ಮಕ ನಿಯಂತ್ರಣವು ಭಾರತೀಯ ಪ್ರಜೆಗಳು ಅಥವಾ ಭಾರತೀಯ ಕಂಪನಿಗಳ ಬಳಿಯೇ ಇರಬೇಕಾಗುತ್ತದೆ.
ಯಾವೆಲ್ಲಾ ದೇಶಗಳಿಗೆ ಅನ್ವಯ?
ಭಾರತದೊಂದಿಗೆ ಭೂ ಗಡಿ ಹಂಚಿಕೊಳ್ಳುವ ಚೀನಾ, ಪಾಕಿಸ್ತಾನ, ಬಾಂಗ್ಲಾದೇಶ, ನೇಪಾಳ, ಭೂತಾನ್, ಮ್ಯಾನ್ಮಾರ್ ಮತ್ತು ಅಫ್ಘಾನಿಸ್ತಾನ ದೇಶಗಳಿಗೆ ಈ ಹೊಸ ನಿಯಮಗಳು ಅನ್ವಯವಾಗುತ್ತವೆ.








