ರಾಯಚೂರು : ರಾಯಚೂರಿನಲ್ಲಿ ಏಮ್ಸ್ ಸ್ಥಾಪಿಸುವಂತೆ ರಾಜ್ಯ ಸರ್ಕಾರ ಪತ್ರದ ಮೂಲಕ ಸ್ಪಷ್ಟ ಪಡಿಸಿದರೂ ಬಿಜೆಪಿ ಸರ್ಕಾರ ಮತ್ತೆ, ಮತ್ತೆ ಗೊಂದಲ ಸೃಷ್ಠಿಸುತ್ತಿದೆ. ಏಮ್ಸ್ ಮಂಜೂರಾತಿಗಾಗಿ 1000 ದಿನಗಳಿಂದ ನಡೆಯುತ್ತಿರುವ ಹೋರಾಟವನ್ನು ಕೇಂದ್ರ ಸರ್ಕಾರ ನಿರ್ಲಕ್ಷಿಸುತ್ತಿದೆ ಎಂದು ಕಾಂಗ್ರೆಸ್ ರಾಜ್ಯ ಯುವ ಮುಖಂಡರಾದ ರವಿ ಬೋಸರಾಜು ಅವರು ಗಂಭೀರವಾಗಿ ಆರೋಪಿಸಿದ್ದಾರೆ.
1000 ದಿನ ಪೂರೈಸಿದ ಏಮ್ಸ್ ಹೋರಾಟದ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದರು.
ಹಿಂದುಳಿದ ಭಾಗವಾದ ಕಲ್ಯಾಣ ಕರ್ನಾಟಕದ ಮಹತ್ವಾಕಾಂಕ್ಷಿ ಜಿಲ್ಲೆಯಾದ ರಾಯಚೂರಿನಲ್ಲಿಯೇ ಏಮ್ಸ್ ಸ್ಥಾಪಿಸಬೇಕೆಂದು ಈಗಾಗಲೇ ರಾಜ್ಯ ಸರ್ಕಾರದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ನಾಲ್ಕು ಬಾರಿ ಕೇಂದ್ರಕ್ಕೆ ಪತ್ರವನ್ನು ಬರೆದಿದ್ದಾರೆ. ಆದರೆ ಕೇಂದ್ರ ಸರ್ಕಾರ ಕಲ್ಯಾಣ ಕರ್ನಾಟಕ ವನ್ನು ಮರೆತು ಹೋರಾಟಗಾರರನ್ನು ಕಡೆಗಣಿಸುತ್ತಿರುವುದು ಖಂಡನೀಯವಾಗಿದೆ ಎಂದರು.
ವೈದ್ಯಕೀಯ ಶಿಕ್ಷಣ ಸಚಿವರಾದ ಶರಣ್ ಪ್ರಕಾಶ್ ಪಾಟೀಲ್ ಹಾಗೂ ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಮಂತ್ರಿಗಳಾದ ಬೋಸರಾಜು ಸೇರಿ ಈ ಭಾಗದ ಜನಪ್ರತಿನಿಧಿಗಳ ನಿಯೋಗ ರಾಯಚೂರಿನಲ್ಲಿ ಏಮ್ಸ್ ಸ್ಥಾಪಿಸಬೇಕು ಎಂದು ಕೇಂದ್ರ ಆರೋಗ್ಯ ಸಚಿವರಿಗೆ ಎರಡು ಬಾರಿ ಖುದ್ದು ಭೇಟಿಯಾಗಿ ಮನವಿ ಮಾಡಿದ್ದಲ್ಲದೆ ಅಗತ್ಯತೆಯ ಕುರಿತು ಮನವರಿಕೆ ಮಾಡಲಾಗಿದೆ. ಇಷ್ಟಾದರೂ ಕೇಂದ್ರ ನಮ್ಮ ಹೋರಾಟಕ್ಕೆ ಪ್ರತಿಕ್ರಿಯಿಸುತ್ತಿಲ್ಲ ಗಂಭೀರವಾಗಿ ಆರೋಪಿಸಿದರು.
1000 ದಿನಗಳಿಂದ ಜಿಲ್ಲೆಯಲ್ಲಿ ಏಮ್ಸ್ ಮಂಜೂರಾತಿಗಾಗಿ ನಿರಂತರವಾಗಿ ಐತಿಹಾಸಿಕ ಹೋರಾಟ ನಡೆಯುತ್ತಿದೆ ಕೇಂದ್ರ ಸರ್ಕಾರದ ಈ ನಿರ್ಲಕ್ಷ್ಯ ಧೋರಣೆಯನ್ನು ನಾವೆಲ್ಲರು ಸಹಿಸಲು ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ಇನ್ನು ಉಗ್ರವಾದ ಹೋರಾಟಕ್ಕೆ ಇಳಿಯಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಸಂಸದರಾದ ಜಿ ಕುಮಾರ್ ನಾಯಕ್ ಸೇರಿದಂತೆ ಹಲವಾರು ಉಪಸ್ಥಿತರಿದ್ದರು.