ನವದೆಹಲಿ:ಇಂಟರ್ನೆಟ್ ಲೋಕದಲ್ಲಿ ಮಹಿಳೆಯರು ಮತ್ತು ಮಕ್ಕಳ ವಿರುದ್ಧ ಹೆಚ್ಚುತ್ತಿರುವ ದೌರ್ಜನ್ಯಗಳನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಗೃಹ ಸಚಿವಾಲಯವು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಹೊಸ ಮಾರ್ಗಸೂಚಿ ಹೊರಡಿಸಿದೆ. ಆನ್‌ಲೈನ್ ದೂರು ನೀಡುವಾಗ ದೂರುದಾರರು ತಮ್ಮ ಗುರುತನ್ನು ಬಹಿರಂಗಪಡಿಸದಿದ್ದರೂ (Faceless Complaints), ಅಂತಹ ದೂರುಗಳ ಮೇಲೆ ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಸೂಚಿಸಿದೆ.
ಸಮಾಜದ ಭಯ ಅಥವಾ ಮುಜುಗರದಿಂದಾಗಿ ಅನೇಕರು ತಮ್ಮ ಹೆಸರು ಹೇಳಿಕೊಳ್ಳಲು ಹಿಂಜರಿಯುತ್ತಾರೆ. ಇಂತಹ ‘ಅನಾಮಧೇಯ’ ದೂರುಗಳನ್ನು ಕೇವಲ ತಾಂತ್ರಿಕ ಕಾರಣಗಳಿಗಾಗಿ ವಜಾಗೊಳಿಸಬಾರದು ಎಂದು ಸರ್ಕಾರ ತಿಳಿಸಿದೆ. ರಾಷ್ಟ್ರೀಯ ಸೈಬರ್ ಅಪರಾಧ ವರದಿ ಪೋರ್ಟಲ್ (www.cybercrime.gov.in) ಮೂಲಕ ಬರುವ ಪ್ರತಿಯೊಂದು ದೂರನ್ನು ಗಂಭೀರವಾಗಿ ಪರಿಗಣಿಸಿ, ಎಫ್‌ಐಆರ್ (FIR) ದಾಖಲಿಸಲು ಆದ್ಯತೆ ನೀಡಬೇಕು.
ಸಾಮಾಜಿಕ ಜಾಲತಾಣಗಳಲ್ಲಿ ಮಹಿಳೆಯರ ಫೋಟೋ ದುರ್ಬಳಕೆ, ಅವಹೇಳನಕಾರಿ ಪೋಸ್ಟ್‌ಗಳು ಮತ್ತು ಮಕ್ಕಳ ಅಶ್ಲೀಲ ಚಿತ್ರಣಕ್ಕೆ ಸಂಬಂಧಿಸಿದ ದೂರುಗಳ ಮೇಲೆ 24 ಗಂಟೆಯೊಳಗೆ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.
ಸೈಬರ್ ಅಪರಾಧಗಳ ತನಿಖೆ ನಡೆಸುವ ಪೊಲೀಸ್ ಅಧಿಕಾರಿಗಳಿಗೆ ಆಧುನಿಕ ತಂತ್ರಜ್ಞಾನದ ಬಗ್ಗೆ ಹೆಚ್ಚಿನ ತರಬೇತಿ ನೀಡುವಂತೆ ರಾಜ್ಯಗಳಿಗೆ ತಿಳಿಸಲಾಗಿದೆ.








