ಮಂಡ್ಯ: ಕೇಂದ್ರದ ಬಿಜೆಪಿ ಸರ್ಕಾರ ಕಳೆದ 10 ವರ್ಷಗಳಿಂದ ರಾಜ್ಯಕ್ಕೆ ಮಲತಾಯಿ ಧೋರಣೆಯನ್ನೆ ಅನುಸರಿಸುತ್ತ ತನ್ನ ಹಳೇ ಚಾಳಿಯನ್ನೆ ಮುಂದುವರೆಸಿಕೊಂಡು ಹೋಗುತ್ತಿದೆ ಎಂದು ಶಾಸಕ ಕೆ.ಎಂ.ಉದಯ್ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಕೇಂದ್ರ ಬಜೆಟ್ ವಿಚಾರವಾಗಿ ಮದ್ದೂರು ಪಟ್ಟಣದಲ್ಲಿ ಬುಧವಾರ ಪ್ರತಿಕ್ರಿಯೆ ನೀಡಿದ ಮದ್ದೂರು ಶಾಸಕ ಕೆ.ಎಂ.ಉದಯ್, ರಾಜ್ಯದ ಪ್ರತಿನಿಧಿಯಾಗಿ ಆಯ್ಕೆಯಾಗಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಬಗ್ಗೆ ಬಹಳ ಗೌರವ ಇತ್ತು. ಈ ಬಾರಿಯಾದರೂ ರಾಜ್ಯಕ್ಕೆ ಹೆಚ್ಚಿನ ಯೋಜನೆ ಕೊಡ್ತಾರೆ ಅಂತಾ ಭಾವಿಸಿದ್ದೇವು. ಆದರೆ, ಅವರು ಗಮನ ಸೆಳೆದಿಲ್ಲ. ತಮ್ಮ ಸರ್ಕಾರ ಉಳಿಸಿಕೊಳ್ಳಲು ತಮ್ಮ ಮಿತ್ರ ಪಕ್ಷಗಳಾದ ಕೇವಲ ಬಿಹಾರ ಮತ್ತು ಆಂಧ್ರಪ್ರದೇಶಕ್ಕೆ ಮಾತ್ರ ಗಮನ ಹರಿಸಿದ್ದಾರೆ ಎಂದು ಕಿಡಿಕಾರಿದರು.
ಕೇಂದ್ರ ಸರ್ಕಾರಕ್ಕೆ ಇಡೀ ದೇಶದಲ್ಲೇ ಅತೀ ಹೆಚ್ಚು ತೆರಿಗೆ ಪಾವತಿ ಮಾಡುವ ಎರಡನೇ ರಾಜ್ಯವಾಗಿದ್ದರೂ ಕರ್ನಾಟಕಕ್ಕೆ ಯಾವುದೇ ಹೊಸ ಯೋಜನೆಗಳನ್ನ ಕೊಟ್ಟಿಲ್ಲ. ಹಾಗೂ ನ್ಯಾಯ ಸಮ್ಮತವಾಗಿ ಜಿ.ಎಸ್.ಟಿ ಪಾಲನ್ನು ನೀಡದೇ ರಾಜ್ಯಕ್ಕೆ ದ್ರೋಹ ಎಸಗುತ್ತಿರುವುದು ಸರಿಯಲ್ಲ ಎಂದು ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಿಂದ 19 ಸಂಸದರ ಪೈಕಿ 5 ಮಂದಿ ಕೇಂದ್ರ ಸಚಿವರಿದ್ದರೂ ಸಹ ರಾಜ್ಯಕ್ಕೆ ಅನ್ಯಾಯವಾಗಿದ್ದರೂ ಧ್ವನಿ ಎತ್ತದೇ ಮೌನವಾಗಿರುವುದು ವಿಪರ್ಯಾಸದ ಸಂಗತಿಯಾಗಿದೆ.
ಜಿಲ್ಲೆಯ ಸಂಸದರು ಹಾಗೂ ಕೇಂದ್ರ ಸಚಿವರಾಗಿರುವ ಹೆಚ್.ಡಿ.ಕುಮಾರಸ್ವಾಮಿ ಅವರು ಜಿಲ್ಲೆ ಹಾಗೂ ರಾಜ್ಯದ ಜನರ ನಿರೀಕ್ಷೆಗೂ ಮೀರಿ ಹೊಸ ಯೋಜನೆಗಳನ್ನು ತರಲು ಪ್ರಯತ್ನಿಸಬೇಕಿತ್ತು. ಆದರೆ,
ಹೊಸ ಯೋಜನೆ ಜಾರಿಗೆ ತರುವುದಿರಲಿ ಜಿಲ್ಲೆಯ ಹಲವು ಯೋಜನೆಗಳ ಬಗ್ಗೆ ಸಂಬಂಧಪಟ್ಟ ಸಚಿವರಿಗೆ ಮನವಿ ಮಾಡಿದ್ದರು ಸಹ ಬಜೆಟ್ ನಲ್ಲಿ ಅವುಗಳಿಗೆ ಮನ್ನಣೆ ಸಿಗದಿರುವುದು ಜಿಲ್ಲೆಯ ಜನರಿಗೆ ನಿರಾಸೆ ತಂದಂತಾಗಿದೆ ಎಂದರು.
ವರದಿ : ಗಿರೀಶ್ ರಾಜ್, ಮಂಡ್ಯ
BREAKING: ಇಂದಿನಿಂದ ‘ಸದನ’ದಲ್ಲೇ ಅಹೋರಾತ್ರಿ ಧರಣಿಗೆ ‘ಬಿಜೆಪಿ-ಜೆಡಿಎಸ್’ ನಿರ್ಧಾರ
ರಾಜ್ಯದ ‘ಗ್ರಾಮೀಣ ಜನತೆ’ಗೆ ಗುಡ್ ನ್ಯೂಸ್: ‘ಗ್ರಾಮಠಾಣ’ ಒಳಗಿನ, ಹೊರಗಿನ ‘ಆಸ್ತಿ ಅಳತೆ’ಗೆ ಅವಕಾಶ