ನವದೆಹಲಿ : ಮಾಜಿ ಸೈನಿಕರ ಹೆಣ್ಣುಮಕ್ಕಳು ಈಗ ತಮ್ಮ ಮದುವೆಗೆ ₹1 ಲಕ್ಷ ಸಹಾಯಧನ ಪಡೆಯುತ್ತಿದ್ದಾರೆ. ವಿವಾಹ ಅನುದಾನದ ಅಡಿಯಲ್ಲಿ ಆರ್ಥಿಕ ಸಹಾಯಧನವನ್ನು ಪ್ರತಿ ಫಲಾನುಭವಿಗೆ ₹50,000 ರಿಂದ ₹1 ಲಕ್ಷಕ್ಕೆ ಹೆಚ್ಚಿಸಲಾಗಿದೆ.ಈ ಅನುದಾನವು ಮಾಜಿ ಸೈನಿಕರ ಗರಿಷ್ಠ ಇಬ್ಬರು ಹೆಣ್ಣುಮಕ್ಕಳಿಗೆ ಲಭ್ಯವಿರುತ್ತದೆ.
ಮಾಜಿ ಸೈನಿಕರ ಕಲ್ಯಾಣ ಇಲಾಖೆಯ ವಿವಿಧ ಯೋಜನೆಗಳ ಅಡಿಯಲ್ಲಿ ಮಾಜಿ ಸೈನಿಕರು ಮತ್ತು ಅವರ ಅವಲಂಬಿತರಿಗೆ ಹಣಕಾಸಿನ ನೆರವು ಶೇ.100 ರಷ್ಟು ಹೆಚ್ಚಿಸಲಾಗಿದೆ ಎಂದು ರಕ್ಷಣಾ ಸಚಿವಾಲಯ ಶನಿವಾರ ಘೋಷಿಸಿತು.
ಮಾಜಿ ಸೈನಿಕರು ಮತ್ತು ಅವರ ಅವಲಂಬಿತರಿಗೆ ಈ ಹೆಚ್ಚಿದ ಸಹಾಯವನ್ನು ಕೇಂದ್ರ ಮಿಲಿಟರಿ ಮಂಡಳಿಯ ಮೂಲಕ ನೀಡಲಾಗುತ್ತಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕಳೆದ ವರ್ಷ ಮಾಜಿ ಸೈನಿಕರಿಗೆ ಹಣಕಾಸಿನ ನೆರವನ್ನು ಶೇ.100 ರಷ್ಟು ಹೆಚ್ಚಿಸಲು ಅನುಮೋದನೆ ನೀಡಿದರು.
ಮಾಜಿ ಸೈನಿಕರು ಮತ್ತು ಅವರ ಅವಲಂಬಿತರಿಗೆ ನೀಡಲಾಗುವ ಆರ್ಥಿಕ ನೆರವಿನ ಶೇಕಡ 100 ರಷ್ಟು ಹೆಚ್ಚಳವು ಮಾಜಿ ಸೈನಿಕರ ಸೇವೆ ಮತ್ತು ತ್ಯಾಗವನ್ನು ಗೌರವಿಸುವ ಸರ್ಕಾರದ ಬದ್ಧತೆಯನ್ನು ಪುನರುಚ್ಚರಿಸುತ್ತದೆ ಎಂದು ರಕ್ಷಣಾ ಸಚಿವಾಲಯ X ನಲ್ಲಿ ಪೋಸ್ಟ್ ಮಾಡಿದೆ. ಪಿಂಚಣಿ ಅನುದಾನವನ್ನು ಪ್ರತಿ ಫಲಾನುಭವಿಗೆ ತಿಂಗಳಿಗೆ ರೂ. 4,000 ರಿಂದ ರೂ. 8,000 ಕ್ಕೆ ದ್ವಿಗುಣಗೊಳಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ, ಇದು ವೃದ್ಧರು ಮತ್ತು ಪಿಂಚಣಿ ಪಡೆಯದ ಮಾಜಿ ಸೈನಿಕರು ಮತ್ತು 65 ವರ್ಷಕ್ಕಿಂತ ಮೇಲ್ಪಟ್ಟ ಅವರ ವಿಧವೆಯರಿಗೆ ಜೀವಿತಾವಧಿಯ ನಿರಂತರ ಬೆಂಬಲವನ್ನು ಒದಗಿಸುತ್ತದೆ.
ಮಾಜಿ ಸೈನಿಕರ ಇಬ್ಬರು ಅವಲಂಬಿತ ಮಕ್ಕಳಿಗೆ (1 ನೇ ತರಗತಿಯಿಂದ ಪದವಿಯವರೆಗೆ) ಅಥವಾ ಎರಡು ವರ್ಷಗಳ ಸ್ನಾತಕೋತ್ತರ ಕೋರ್ಸ್ ಅನ್ನು ಅನುಸರಿಸುತ್ತಿರುವ ಅವರ ವಿಧವೆಯರಿಗೆ ಶಿಕ್ಷಣ ಅನುದಾನವನ್ನು ಪ್ರತಿ ವ್ಯಕ್ತಿಗೆ ತಿಂಗಳಿಗೆ ರೂ. 1,000 ರಿಂದ ರೂ. 2,000 ಕ್ಕೆ ಹೆಚ್ಚಿಸಲಾಗಿದೆ.








