ತಿರುವನಂತಪುರಂ: ಕೇರಳ ರಾಜ್ಯದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಕೊಡಮಾಡುವ ಅತ್ಯುನ್ನತ ಗೌರವ ಬಸವರತ್ನ ಪುರಸ್ಕಾರಕ್ಕೆ ಮಾಜಿ ಸಾರಿಗೆ ಸಚಿವ, ಲೋಕನಾಯಕ ಶತಾಯುಷಿ ಡಾ. ಭೀಮಣ್ಣ ಖಂಡ್ರೆ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.
ಕೇರಳದ ತಿರುವನಂತಪುರಂ ಜಿಲ್ಲೆಯ ವಟ್ಟಾಪ್ಪುರದಲ್ಲಿರುವ ವೀರಶೈವ ಭವನದಲ್ಲಿ ಮೇ 4ರಂದು ನಡೆಯಲಿರುವ ಬಸವ ಜಯತಿ ಕಾರ್ಯಕ್ರಮದ ವೇಳೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದ್ದು, ಭೀಮಣ್ಣ ಖಂಡ್ರೆ ಅವರ ಬದಲಿಗೆ ಅವರ ಪುತ್ರ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಸ್ವೀಕರಿಸಲಿದ್ದಾರೆ ಎಂದು ಕೇರಳ ಮಹಾಸಭಾದ ರಾಜ್ಯ ಘಟಕದ ಅಧ್ಯಕ್ಷ ಭೀನು ಕೆ ಶಂಕರ್ ತಿಳಿಸಿದ್ದಾರೆ.
ಶತಾಯುಷಿ ಭೀಮಣ್ಣ ಖಂಡ್ರೆ ಅವರು ಮಹಾಸಭಾದ ಹಿರಿಯ ನಾಯಕರಷ್ಟೇ ಅಲ್ಲ, ಬದ್ಧತೆಯ ಸಮಾಜ ಸೇವಕರಾಗದ್ದಾರೆ ಜೊತೆಗೆ ಮುತ್ಸದ್ದಿ ರಾಜಕಾರಣಿಯಾದ ಅವರು, ಬಸವ ತತ್ವ ಅನುಯಾಯಿಯಾಗಿದ್ದಾರೆ. ಭೀಮಣ್ಣ ಖಂಡ್ರೆ ಅವರ ಬದುಕು ಮತ್ತು ಕೃತಿ ಮುಂದಿನ ಪೀಳಿಗೆಗೂ ಸ್ಫೂರ್ತಿಯಾಗಿದೆ. ಇಂತಹ ಮಹಾನ್ ನಾಯಕರಿಗೆ ಕೇರಳ ರಾಜ್ಯ ಘಟಕದ ಪರಮೋಚ್ಛ ಪುರಸ್ಕಾರ ಪ್ರದಾನ ಮಾಡಲು ನಿರ್ಧರಿಸಲಾಗಿದೆ ಎಂದೂ ಅವರು ಹೇಳಿದ್ದಾರೆ.