ಬೆಂಗಳೂರು: ಮುಂಬರುವ 2027ರ ಜನಗಣತಿ ಕಾರ್ಯದ ಹಿನ್ನೆಲೆಯಲ್ಲಿ, ಕರ್ನಾಟಕದ ಜನಗಣತಿ ಕಾರ್ಯ ನಿರ್ದೇಶನಾಲಯವು ಮಹತ್ವದ ಸೂಚನೆಯೊಂದನ್ನು ಹೊರಡಿಸಿದೆ. ಮನೆ ಪಟ್ಟಿ ಮತ್ತು ಮನೆಗಳ ಗಣತಿ (HLO) ಕಾರ್ಯಕ್ಕಾಗಿ ನಿಗದಿಪಡಿಸಿದ ಪ್ರದೇಶಗಳಲ್ಲಿ ನಿಖರವಾದ ವಿನ್ಯಾಸ ನಕ್ಷೆಗಳನ್ನು (Layout Map) ಸಿದ್ಧಪಡಿಸುವಂತೆ ಜಿಲ್ಲಾಧಿಕಾರಿಗಳಿಗೆ ಮತ್ತು ಮಹಾನಗರ ಪಾಲಿಕೆಗಳ ಆಯುಕ್ತರಿಗೆ ಪತ್ರದ ಮೂಲಕ ತಿಳಿಸಲಾಗಿದೆ.
ನಕ್ಷೆ ತಯಾರಿಕೆ: ಪ್ರತಿಯೊಬ್ಬ ಎಣಿಕೆದಾರರು ತಮಗೆ ನಿಯೋಜಿಸಲಾದ ಪ್ರದೇಶದ ಸಂಪೂರ್ಣ ವ್ಯಾಪ್ತಿಯನ್ನು ಖಚಿತಪಡಿಸಿಕೊಳ್ಳಲು ಕೈಬರಹದ ವಿನ್ಯಾಸ ನಕ್ಷೆಯನ್ನು ಸಿದ್ಧಪಡಿಸುವುದು ಕಡ್ಡಾಯವಾಗಿದೆ.
ಕ್ರಮಬದ್ಧ ಪ್ರಕ್ರಿಯೆ: ಎಣಿಕೆದಾರರು ಮೊದಲು ತಮ್ಮ ಪ್ರದೇಶದ ಎಲ್ಲಾ ಕಟ್ಟಡಗಳಿಗೆ ಸಂಖ್ಯೆಗಳನ್ನು ನೀಡಬೇಕು. ಆನಂತರವೇ ವಿನ್ಯಾಸ ನಕ್ಷೆಯ ಆರಂಭಿಕ ಕರಡನ್ನು ಸಿದ್ಧಪಡಿಸಬೇಕು.
ಮೊಬೈಲ್ ಆಪ್ ಬಳಕೆ: ಮೊಬೈಲ್ ಅಪ್ಲಿಕೇಶನ್ ಮೂಲಕ ದತ್ತಾಂಶ ಸಂಗ್ರಹಣೆ ಪೂರ್ಣಗೊಂಡ ನಂತರ, ನಕ್ಷೆಯನ್ನು ಮತ್ತೊಮ್ಮೆ ಪರಿಶೀಲಿಸಿ ಪರಿಷ್ಕರಿಸಬೇಕು. ಇದರಲ್ಲಿ ಯಾವುದೇ ಕಟ್ಟಡಗಳು ಬಿಟ್ಟುಹೋಗದಂತೆ ಅಥವಾ ಅನಗತ್ಯ ಕಟ್ಟಡಗಳು ಸೇರದಂತೆ ಎಚ್ಚರ ವಹಿಸಬೇಕು.
ನಕ್ಷೆಗಳ ವಿತರಣೆ: ಸದ್ಯಕ್ಕೆ ಖಾಲಿ ವಿನ್ಯಾಸ ನಕ್ಷೆಗಳ ರವಾನೆ ಪ್ರಕ್ರಿಯೆ ಆರಂಭವಾಗಲಿದ್ದು, ಅಲ್ಲಿಯವರೆಗೆ ಎಣಿಕೆದಾರರು ಸೂಚನಾ ಕೈಪಿಡಿಯೊಂದಿಗೆ ನೀಡಲಾದ ಮಾದರಿ ನಕ್ಷೆಯನ್ನು ಬಳಸಿಕೊಳ್ಳಲು ಸೂಚಿಸಲಾಗಿದೆ.
ಸಲ್ಲಿಕೆ: ದತ್ತಾಂಶ ಸಂಗ್ರಹಣೆ ಮುಗಿದ ಬಳಿಕ, ಪರಿಷ್ಕೃತ ನಕ್ಷೆಯ ಎರಡು ಪ್ರತಿಗಳನ್ನು ಸಿದ್ಧಪಡಿಸಿ ಸಂಬಂಧಪಟ್ಟ ಚಾರ್ಜ್ ಆಫೀಸರ್‌ಗಳಿಗೆ ಸಲ್ಲಿಸಬೇಕಾಗುತ್ತದೆ. ಕರ್ನಾಟಕದ ಜನಗಣತಿ ಕಾರ್ಯ ನಿರ್ದೇಶನಾಲಯದ ನಿರ್ದೇಶಕರಾದ ರಾಮಚಂದ್ರನ್ ಆರ್. ಅವರು ಈ ಕುರಿತು ಆದೇಶ ಹೊರಡಿಸಿದ್ದು, ಎಲ್ಲಾ ಜಿಲ್ಲಾಧಿಕಾರಿಗಳು ಈ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ತಿಳಿಸಿದ್ದಾರೆ.








