ಬೆಂಗಳೂರು: ನಗರದಲ್ಲಿ ಗೃಹ ಬಳಕೆ ಸಿಲಿಂಡರ್ ಗಳನ್ನು ಅನಧಿಕೃತವಾಗಿ ದಾಸ್ತಾನು ಮಾಡಿಕೊಂಡು, ರೀ ಫಿಲ್ಲಿಂಗ್ ಮಾಡಿ ಮಾರಾಟ ಮಾಡುತ್ತಿದ್ದ ಅಂಗಡಿ, ಮನೆ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ. ಅಲ್ಲದೇ ಬರೋಬ್ಬರಿ 33 ಲಕ್ಷ ಮೌಲ್ಯದ 290 ಸಿಲಿಂಡರ್ ಹಾಗೂ ಇತರೆ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.
ಈ ಕುರಿತಂತೆ ಬೆಂಗಳೂರು ಸಿಟಿ ಪೊಲೀಸರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಬೆಂಗಳೂರು ನಗರದ ಸಿ.ಕೆ ಅಚ್ಚುಕಟ್ಟು ಪೊಲೀಸ್ ಠಾಣೆ ಸರಹದ್ದಿನಲ್ಲಿರುವ ನಂ. 20. ಶ್ರೀ. ಮಂಜುನಾಥ ಎಂಟರ್‌ಪ್ರೈಸೆಸ್ ಅಂಗಡಿಯ ಮಾಲಿಕ, ಮತ್ತು ಬೆಳ್ಳಂದೂರು ಪೊಲೀಸ್ ಠಾಣಾ ಸರಹದ್ದಿನ ಅಣ್ಣಯ್ಯರೆಡ್ಡಿ ಲೇಔಟ್‌ನ ಮತ್ತೋರ್ವನ ಮನೆಯ ಹಿಂಭಾಗದಲ್ಲಿ ಗೃಹಬಳಕೆ ಸಿಲಿಂಡರ್‌ಗಳನ್ನು ಅನಧಿಕೃತವಾಗಿ ದಾಸ್ತಾನು ಮಾಡಿಕೊಂಡಿರುವ ಬಗ್ಗೆ ಸಿಸಿಬಿಯ ಆರ್ಥಿಕ ಅಪರಾಧ ದಳದ ಅಧಿಕಾರಿಗಳು ಮಾಹಿತಿಯನ್ನು ಸಂಗ್ರಹಿಸಿ, ದಾಳಿ ನಡೆಸಿರುತ್ತಾರೆ ಎಂದು ತಿಳಿಸಿದೆ.
ದಾಳಿಯ ಸಮಯದಲ್ಲಿ ಪರವಾನಗಿ ಇಲ್ಲದೆ ಜನವಾಸದ ಸ್ಥಳದಲ್ಲಿ ಯಾವುದೇ ಸುರಕ್ಷತಾ ನಿಯಮಗಳನ್ನು ಅನುಸರಿಸದೇ ರೀಫಿಲ್ಲಿಂಗ್ ಮಾಡುತ್ತಿರುತ್ತಾರೆ. ಈ ರೀತಿ ರೀಫಿಲ್ಲಿಂಗ್ ಮಾಡುವುದರಿಂದ, ಅಗ್ನಿ ಅನಾಹುತ ಸಂಭವಿಸಿ, ಸಾರ್ವಜನಿಕ ಜೀವ ಮತ್ತು ಆಸ್ತಿ-ಪಾಸ್ತಿಗೆ ಹಾನಿವುಂಟಾಗುವ ಸಂಭವವಿರುತ್ತದೆ. ಈ ಬಗ್ಗೆ ಅವರಿಗೆ ಅರಿವಿದ್ದರೂ ಸಹ ಅಕ್ರಮವಾಗಿ ಹಣ ಸಂಪಾದನೆ ಮಾಡುವ ಉದ್ದೇಶದಿಂದ ರೀ ಫಿಲ್ಲಿಂಗ್‌ನ್ನು ಅನಧಿಕೃತವಾಗಿ ಮಾಡುತ್ತಿರುತ್ತಾರೆ. ಇವರುಗಳು ಬೇರೆ ಬೇರೆ ಸಿಲಿಂಡರ್‌ಗಳಿಗೆ ಅಧಿಕೃತ ಕಂಪನಿಗಳ ಲೇಬಲ್ ಅಂಟಿಸಿ ಕಂಪನಿಯ ಸಿಲಿಂಡರ್‌ಗಳೆಂದು ಸಾರ್ವಜನಿಕರಿಗೆ ನಂಬಿಸಿ ಮಾರಾಟ ಮಾಡುತ್ತಿರುತ್ತಾರೆ. ಮೇಲೆ ತಿಳಿಸಿದ ಎರಡು ಸ್ಥಳಗಳಲ್ಲಿಯೂ ಸಿಸಿಬಿಯ ಆರ್ಥಿಕ ಅಪರಾಧ ದಳದ ಅಧಿಕಾರಿ ಮತ್ತು ಸಿಬ್ಬಂದಿಯವರು ದಾಳಿ ನಡೆಸಿ ಸುಮಾರು 1 33 ಲಕ್ಷ ಮೌಲ್ಯದ ಒಟ್ಟು 290 ಗ್ಯಾಸ್ ಸಿಲಿಂಡರ್‌ಗಳು ಮತ್ತು ಇತರೆ ವಸ್ತುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶ್ವಸಿಯಾಗಿರುತ್ತಾರೆ ಎಂದು ಹೇಳಿದೆ.
ಸಿ.ಕೆ. ಅಚ್ಚುಕಟ್ಟು ಪೊಲೀಸ್ ಠಾಣೆ ಸರಹದ್ದಿನ ಶ್ರೀ. ಮಂಜುನಾಥ ಎಂಟರ್‌ಪ್ರೈಸಸ್ ಅಂಗಡಿಯ ಮೇಲಿನ ದಾಳಿ ಸಮಯದಲ್ಲಿ 140 ದೊಡ್ಡ ಸಿಲಿಂಡರ್‌ಗಳು, 30 ಸಣ್ಣ ಸಿಲಿಂಡರ್‌ಗಳು ಸೇರಿ ಒಟ್ಟು 170 ಗ್ಯಾಸ್ ಸಿಲಿಂಡರ್‌ಗಳನ್ನು 5 ರೀಫಿಲ್ಲಿಂಗ್ ರಾಡ್‌ಗಳು, ಕಂಪನಿಯ 200 ಸೀಲ್ ಲೇಬಲ್‌ಗಳು, 3 ರೆಗ್ಯುಲೇಟರ್‌ಗಳು ಮತ್ತು 3 ಗೂಡ್ಸ್ ಕ್ಯಾಂಟರ್ ವಾಹನಗಳನ್ನು ವಶಪಡಿಸಿಕೊಂಡಿರುತ್ತಾರೆ. ಈ ಬಗ್ಗೆ ಸಿ.ಕೆ. ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದಿದೆ.
ಬೆಳ್ಳಂದೂರು ಪೊಲೀಸ್ ಠಾಣೆ ಸರಹದ್ದಿನ ಮನೆಯೊಂದರಲ್ಲಿ ದಾಳಿ ನಡೆಸಿದ ಸಮಯದಲ್ಲಿ ಒಟ್ಟು 120 ಸಿಲಿಂಡರ್‌ಗಳು, 5 ರೀಫಿಲ್ಲಿಂಗ್ ರಾಡ್‌ಗಳು ಮತ್ತು ಕಂಪನಿಯ 100 ಲೇಬಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗಿರುತ್ತದೆ. ಈ ಎರಡು ಕಾರ್ಯಾಚರಣೆಗಳನ್ನು ಸಿಸಿಬಿ ಆರ್ಥಿಕ ಅಪರಾಧ ದಳದ ಅಧಿಕಾರಿ ಹಾಗೂ ಸಿಬ್ಬಂದಿಯವರುಗಳು ಯಶಸ್ವಿಯಾಗಿ ಕೈಗೊಂಡಿರುತ್ತಾರೆ ಎಂದು ತಿಳಿಸಿದ್ದಾರೆ.
ರಾಮ ಮಂದಿರ ‘ಪ್ರಾಣ’ ಪ್ರತಿಷ್ಠಾಪನೆ: 11 ದಿನಗಳ ವಿಶೇಷ ಸಂದೇಶ ಬಿಡುಗಡೆ ಮಾಡಿದ ‘ಪ್ರಧಾನಿ ಮೋದಿ’
‘ಉದ್ಯೋಗಾಕಾಂಕ್ಷಿ’ಗಳಿಗೆ ಗುಡ್ ನ್ಯೂಸ್: ರಾಜ್ಯ ಸರ್ಕಾರದಿಂದಲೇ ಫೆಬ್ರವರಿಯಲ್ಲಿ ‘ಬೃಹತ್ ಉದ್ಯೋಗ ಮೇಳ’