ನವದೆಹಲಿ: ಕೇಂದ್ರ ಪ್ರೌಢ ಶಿಕ್ಷಣ ಮಂಡಳಿಯ (CBSE) ‘ಪೋಸ್ಟ್-ರಿಸಲ್ಟ್ ಸರ್ವಿಸಸ್’ ಪೋರ್ಟಲ್ ಮೇಲೆ ಸಂಘಟಿತ ಸೈಬರ್ ದಾಳಿ ನಡೆದಿರುವ ಕುರಿತು ಸಿಬಿಎಸ್‌ಇ ನೀಡಿದ ದೂರಿನ ಮೇರೆಗೆ ದೆಹಲಿ ಪೊಲೀಸರು ಶುಕ್ರವಾರ ಎಫ್‌ಐಆರ್ (FIR) ದಾಖಲಿಸಿದ್ದಾರೆ.
ಪೊಲೀಸರು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಪ್ರಾಥಮಿಕ ತನಿಖೆಯ ಪ್ರಕಾರ, ಈ ದಾಳಿಯ ಸಮಯದಲ್ಲಿ ಸಿಬಿಎಸ್‌ಇ ವ್ಯವಸ್ಥೆಗಳಿಂದ ಯಾವುದೇ ದತ್ತಾಂಶ ಸೋರಿಕೆಯಾಗಿಲ್ಲ ಎಂದು ತಿಳಿದುಬಂದಿದೆ. ಮಂಡಳಿಯ ಡೇಟಾ ಮತ್ತು ವ್ಯವಸ್ಥೆಗಳು ಸಂಪೂರ್ಣವಾಗಿ ಸುರಕ್ಷಿತವಾಗಿವೆ ಎಂದು ಮೂಲಗಳು ತಿಳಿಸಿವೆ.
ಶುಕ್ರವಾರ ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯಲ್ಲಿ, ಸಿಬಿಎಸ್‌ಇ ತನ್ನ ಪೋರ್ಟಲ್ ಗುರಿಯಾಗಿಸಿ ನಡೆದ ಸರಣಿ ಸೈಬರ್ ದಾಳಿಗಳ ಬಗ್ಗೆ ದೆಹಲಿ ಪೊಲೀಸರಿಗೆ ಔಪಚಾರಿಕ ದೂರು ನೀಡಿರುವುದಾಗಿ ತಿಳಿಸಿದೆ. ದೆಹಲಿ ಪೊಲೀಸರ ‘ಇಂಟೆಲಿಜೆನ್ಸ್ ಫ್ಯೂಷನ್ & ಸ್ಟ್ರಾಟೆಜಿಕ್ ಆಪರೇಷನ್ಸ್’ (IFSO) ಘಟಕಕ್ಕೆ ಈ ದೂರು ನೀಡಲಾಗಿದೆ. “ಈ ಪೋರ್ಟಲ್ ದೇಶಾದ್ಯಂತ ಲಕ್ಷಾಂತರ ವಿದ್ಯಾರ್ಥಿಗಳಿಗೆ ಫಲಿತಾಂಶದ ನಂತರದ ಸೇವೆಗಳನ್ನು ಒದಗಿಸುತ್ತದೆ. ಇದರ ಕಾರ್ಯಚಟುವಟಿಕೆಗೆ ಅಡ್ಡಿ ಉಂಟಾಗುವುದು ಸಾರ್ವಜನಿಕರಿಗೆ ಅನಾನುಕೂಲವನ್ನು ಉಂಟುಮಾಡಬಹುದು ಮತ್ತು ಮಂಡಳಿಯ ವಿರುದ್ಧ ವಿದ್ಯಾರ್ಥಿಗಳಲ್ಲಿ ಅಸಮಾಧಾನವನ್ನು ಸೃಷ್ಟಿಸಬಹುದು” ಎಂದು ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.
12ನೇ ತರಗತಿಯ ಮಂಡಳಿ ಪರೀಕ್ಷೆಯ ಅಭ್ಯರ್ಥಿಗಳಿಗೆ ಉತ್ತರ ಪತ್ರಿಕೆಗಳ ಪರಿಶೀಲನೆ ಮತ್ತು ಮರುಮೌಲ್ಯಮಾಪನದಂತಹ ಸೇವೆಗಳನ್ನು ಸುಲಭಗೊಳಿಸಲು ಜೂನ್ 2ರಂದು ಈ ಪೋರ್ಟಲ್ ಅನ್ನು ಪ್ರಾರಂಭಿಸಲಾಗಿತ್ತು. ಕಳೆದ ಮೂರು ದಿನಗಳಿಂದ ಈ ಪೋರ್ಟಲ್ ಮೇಲೆ “ಪುನರಾವರ್ತಿತ ಮತ್ತು ಸಂಘಟಿತ ಸೈಬರ್ ದಾಳಿ” ನಡೆಯುತ್ತಿದೆ ಎಂದು ಸಿಬಿಎಸ್‌ಇ ಹೇಳಿದೆ.
”ದೇಶದ ಒಳಗಿನಿಂದ ಮತ್ತು ಹೊರಗಿನಿಂದ ವಿವಿಧ ಐಪಿ (IP) ವಿಳಾಸಗಳಿಂದ ಬೃಹತ್ ಪ್ರಮಾಣದ ಹಾನಿಕಾರಕ ಟ್ರಾಫಿಕ್‌ನೊಂದಿಗೆ ಈ ದಾಳಿಗಳನ್ನು ನಡೆಸಲಾಗಿದೆ,” ಎಂದು ಮಂಡಳಿ ತಿಳಿಸಿದೆ. ಈ ದಾಳಿಕೋರರ ಮುಖ್ಯ ಉದ್ದೇಶ ಪ್ಲಾಟ್‌ಫಾರ್ಮ್ ಅನ್ನು ಅಸ್ಥಿರಗೊಳಿಸುವುದು, ಅಧಿಕೃತ ಬಳಕೆದಾರರಿಗೆ ಪ್ರವೇಶವನ್ನು ನಿರಾಕರಿಸುವುದು ಮತ್ತು ರಾಷ್ಟ್ರೀಯ ಹಿತಾಸಕ್ತಿಗೆ ವಿರುದ್ಧವಾದ ಶಕ್ತಿಗಳಿಂದ ಅನಧಿಕೃತವಾಗಿ ಮಾಹಿತಿಯನ್ನು ಹೊರತೆಗೆಯುವ ಪ್ರಯತ್ನವಾಗಿತ್ತು ಎಂದು ಸಿಬಿಎಸ್‌ಇ ಆರೋಪಿಸಿದೆ.
ತನ್ನ ವ್ಯವಸ್ಥೆಗಳ ಭದ್ರತೆಯನ್ನು ಒತ್ತಿಹೇಳಿರುವ ಸಿಬಿಎಸ್‌ಇ, “ಈ ಹಾನಿಕಾರಕ ಪ್ರಯತ್ನಗಳ ಹೊರತಾಗಿಯೂ, ಸಿಬಿಎಸ್‌ಇಯ ವ್ಯವಸ್ಥೆಗಳು ಮತ್ತು ಡೇಟಾಬೇಸ್‌ಗಳು ಸುರಕ್ಷಿತವಾಗಿವೆ. ಯಾವುದೇ ದತ್ತಾಂಶ ಸೋರಿಕೆ ಅಥವಾ ಅನಧಿಕೃತ ಪ್ರವೇಶ ಕಂಡುಬಂದಿಲ್ಲ” ಎಂದು ಸ್ಪಷ್ಟಪಡಿಸಿದೆ.
ಐಐಟಿ ಕಾನ್ಪುರ, ಐಐಟಿ ಮದ್ರಾಸ್, ಡಿಜಿಟಲ್ ಇಂಡಿಯಾ ಕಾರ್ಪೊರೇಷನ್, ಇಂಡಿಯನ್ ಸೈಬರ್ ಕ್ರೈಮ್ ಕೋಆರ್ಡಿನೇಷನ್ ಸೆಂಟರ್ (I4C), CERT-In ಮತ್ತು ಇತರ ಕೇಂದ್ರ ಸರ್ಕಾರದ ಸಂಸ್ಥೆಗಳ ಸೈಬರ್ ಭದ್ರತಾ ತಂಡಗಳ ಬೆಂಬಲದೊಂದಿಗೆ 24×7 ನಿರಂತರ ಮೇಲ್ವಿಚಾರಣೆ ನಡೆಸಲಾಗುತ್ತಿದೆ. ಈ ಮೂಲಕ ಎಲ್ಲಾ ದಾಳಿಗಳನ್ನು ಯಶಸ್ವಿಯಾಗಿ ತಡೆಯಲಾಗಿದೆ ಎಂದು ಮಂಡಳಿ ತಿಳಿಸಿದೆ.








