ಮಂಡ್ಯ : ಮುಂದಿನ ಒಂದು ವರ್ಷದೊಳಗೆ ಕೊಪ್ಪ ಹೋಬಳಿಯ ಪ್ರತಿ ಮನೆಗಳಿಗೂ ಜಲ ಜೀವನ್ ಮಿಷನ್ ಯೋಜನೆಯಡಿ ಕಾವೇರಿ ನೀರನ್ನು ಪೂರೈಸಲಾಗುವುದು ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಶನಿವಾರ ಹೇಳಿದರು.
ಮದ್ದೂರು ತಾಲೂಕಿನ ಕೊಪ್ಪ ಹೋಬಳಿಯ ಅರಗಿನಮೆಳೆ ಉತ್ಸವ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರ ಮತ್ತು ರಕ್ತದಾನ ಶಿಬಿರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕೊಪ್ಪ ಹೋಬಳಿಯ 8 ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಇನ್ನು ಮುಂದೆ ನೀರಿನ ಸಮಸ್ಯೆ ತಲೆದೊರುವುದಿಲ್ಲ. ಈಗಾಗಲೇ 33 ಕೋಟಿ ರೂ ವೆಚ್ಚದಲ್ಲಿ ಕಾವೇರಿ ನೀರನ್ನು ಪ್ರತಿ ಮನೆಗಳಿಗೂ ಪೂರೈಸುವ ಯೋಜನೆಗೆ ಶೀಘ್ರದಲ್ಲೆ ಚಾಲನೆ ನೀಡಲಾಗುವುದು ಎಂದರು.
ಇನ್ನು ಮುಂದೆ ಕುಡಿಯುವ ನೀರಿಗಾಗಿ ಯಾವುದೇ ಬೋರ್ ವೆಲ್ ಕೊರೆಯುವುದಿಲ್ಲ. ಕೊಪ್ಪ ಹೋಬಳಿಯ ಕೊನೆ ಭಾಗಕ್ಕೆ ಕೆಆರ್ಎಸ್ ಜಲಾಶಯದಿಂದ ನೀರು ಸರಾಗವಾಗಿ ಹರಿಯಲು 100 ಕೋಟಿ ರೂ ವೆಚ್ಚದಲ್ಲಿ ನಾಲೆಗಳ ಆಧುನಿಕರಣ ಮಾಡಲಾಗುತ್ತಿದ್ದು, ಇದರ ಜೊತೆಗೆ ಈ ಭಾಗದ ಜನತೆಗೆ ಕುಡಿಯಲು ಸಹ ಕಾವೇರಿ ನೀರನ್ನು ತಲುಪಿಸುವ ಯೋಜನೆ ರೂಪಿಸಲಾಗಿದೆ ಎಂದರು.
ಕಳೆದ 2013 – 18 ನೇ ಸಾಲಿನಲ್ಲಿ ನಾನು ಶಾಸಕನಾಗಿದ್ದ ವೇಳೆ ಶೇ.80 ರಷ್ಟು ರಸ್ತೆಗಳ ಅಭಿವೃದ್ಧಿ ಮಾಡಿದ್ದೆ. ಆದರೆ, ಆನಂತರ ಅಧಿಕಾರಕ್ಕೆ ಬಂದ ಶಾಸಕರು ಶೇ. 20 ರಷ್ಟು ರಸ್ತೆ ಅಭಿವೃದ್ಧಿಯನ್ನು ಪೂರ್ಣಗೊಳಿಸಿಲ್ಲ. ಮತ್ತೆ ನಾನೇ ಅಧಿಕಾರಕ್ಕೆ ಬಂದು ಚಾಲನೆ ನೀಡಿದೇನೆ ಎಂದು ಮಾಜಿ ಶಾಸಕ ಸುರೇಶ್ ಗೌಡ ವಿರುದ್ಧ ವಾಗ್ದಾಳಿ ನಡೆಸಿದರು.
ಕಳೆದ 2 ತಿಂಗಳ ಹಿಂದೆಯಷ್ಟೇ 150 ಕೋಟಿ ರೂ ವೆಚ್ಚದಲ್ಲಿ ಕೊಪ್ಪ ಹೋಬಳಿಯ ಅಭಿವೃದ್ಧಿಗೆ ಭೂಮಿ ಪೂಜೆ ನಡೆಸಿದ್ದೇನೆ. ನೀರಾವರಿ, ರಸ್ತೆ, ವಸತಿ ನಿಲಯಗಳು, ಕುಡಿಯುವ ನೀರು ಸೇರಿದಂತೆ ಹಲವು ಯೋಜನೆಗಳಿಗೆ ಚಾಲನೆ ನೀಡಿದ್ದು, ಇನ್ನು ಎರಡುವರೇ ವರ್ಷಗಳಲ್ಲಿ ಮತ್ತಷ್ಟು ಅಭಿವೃದ್ಧಿಗೆ ಚಾಲನೆ ನೀಡಲಾಗುವುದು ಎಂದು ಭರವಸೆ ನೀಡಿದರು.
ಸರ್ಕಾರದಿಂದ ವಿಶೇಷ ಅನುದಾನಗಳ ಜೊತೆಗೆ 5 ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ನೀಡಲಾಗುತ್ತಿದೆ. ಆದರೆ, ಬೇರೆ ರಾಜ್ಯಗಳಲ್ಲಿ ಗ್ಯಾರಂಟಿ ಯೋಜನೆಗಳನ್ನು ನೀಡಲು ಸಹ ಸಾಧ್ಯವಾಗದೆ ವಿಫಲವಾಗಿದ್ದು, ನಮ್ಮ ಸರ್ಕಾರ ನುಡಿದಂತೆ ನಡೆಯುತ್ತಿದ್ದೇವೆ ಎಂದು ಹರ್ಷ ವ್ಯಕ್ತಪಡಿಸಿದರು.
ಕೊಪ್ಪ ಹೋಬಳಿಯನ್ನು ಮಾದರಿ ಹೋಬಳಿಯನ್ನಾಗಿ ಮಾರ್ಪಾಡಿಸಲು ಕ್ರಮ ಕೈಗೊಳ್ಳಲಾಗಿದ್ದು, ನಾಡ ಕಛೇರಿ, ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮಾಡಲು ಸಹ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ಇನ್ನು ತಗ್ಗಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ವಿಜಯ್ ಎಸ್.ಗೌಡ ಅವರು ಕಡಿಮೆ ಅವಧಿಯಲ್ಲಿ ಹೆಚ್ಚಿನ ಜನಪರ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಜನಮನ್ನಣೆ ಗಳಿಸಿದ್ದಾರೆ.
ಉಚಿತ ಆರೋಗ್ಯ ತಪಾಸಣಾ ಶಿಬಿರ ಮತ್ತು ರಕ್ತದಾನ ಶಿಬಿರಗಳನ್ನು ಆಯೋಜಿಸಿ ಗ್ರಾಮೀಣ ಜನರ ಆರೋಗ್ಯ ಜಾಗೃತಿಗೆ ಸಹಕಾರಿಯಾಗಿದ್ದಾರೆ. ಉಚಿತ ಆರೋಗ್ಯ ತಪಾಸಣಾ ಶಿಬಿರದಿಂದ ಬಡ ಜನರು ಆರೋಗ್ಯಕ್ಕೆ ಸಂಬಂಧಪಟ್ಟಂತೆ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಉತ್ತಮ ಅವಕಾಶ ಮಾಡಿಕೊಟ್ಟಿದ್ದಾರೆ.
ಆದರೆ, ಇತ್ತಿಚಿನ ದಿನಗಳಲ್ಲಿ ಪ್ರತಿಯೊಬ್ಬರಿಗೂ ಬಿಪಿ, ಶುಗರ್, ಹೃದ್ರೋಗ ಮತ್ತು ಕಿಡ್ನಿ ಸಮಸ್ಯೆಗಳು ಸಾಮಾನ್ಯವಾಗಿವೆ. ಇವು ಶ್ರೀಮಂತ ಖಾಯಿಲೆಗಳಾಗಿದ್ದು, ಬಡ ಜನರು ಆರ್ಥಿಕವಾಗಿ ಭರಿಸಲು ಅಸಾಧ್ಯವಾಗಿದ್ದು, ಗ್ರಾಮೀಣ ಮತ್ತು ನಗರ ಪ್ರದೇಶದ ಬಡ ಜನತೆಗೆ ಇಂತಹ ಉಚಿತ ಆರೋಗ್ಯ ಆರೋಗ್ಯ ಶಿಬಿರಗಳ ಮೂಲಕವೇ ಚಿಕಿತ್ಸೆಗೆ ಒಳಪಡಿಸಿದಾಗ ಮಾತ್ರ ಅವರನ್ನು ಸಂಕಷ್ಟದಿಂದ ಪಾರು ಮಾಡಲು ಸಾಧ್ಯವಾಗಲಿದೆ ಎಂದರು.
ಆರೋಗ್ಯ ಶಿಬಿರದಲ್ಲಿ ಮೂಳೆ, ಹೃದ್ರೋಗ, ದಂತ, ಮಕ್ಕಳ ತಜ್ಞರು, ಕಿವಿ, ಮೂಗು, ಗಂಟಲು, ಸ್ತ್ರೀರೋಗ, ಕಣ್ಣು, ಚರ್ಮ, ಪ್ರಸೂತಿ ತಜ್ಞರಿಂದ ತಪಾಸಣೆ ನಡೆಸಿ ಅಗತ್ಯವಿದ್ದವರಿಗೆ ಶಸ್ತ್ರ ಚಿಕಿತ್ಸೆಗೆ ಒಳಪಡಿಸಲಾಯಿತು.
ಕಾರ್ಯಕ್ರಮದಲ್ಲಿ ಗ್ರಾ.ಪಂ ಅಧ್ಯಕ್ಷ ವಿಜಯ್ ಎಸ್.ಗೌಡ, ಮನ್ ಮುಲ್ ನಿರ್ದೇಶಕ ಹರೀಶ್ ಬಾಬು, ಡಿಸಿಸಿ ಬ್ಯಾಂಕ್ ನಿರ್ದೇಶಕ ಕೆ.ಸಿ.ಜೋಗಿಗೌಡ, ತಗ್ಗಹಳ್ಳಿ ಚಂದ್ರು, ಮೂಡ್ಯ ಮಂಜು, ತಾ.ಪಂ ಮಾಜಿ ಉಪಾಧ್ಯಕ್ಷ ಬೆಕ್ಕಳಲೆ ರಘು ಮುಖಂಡರಾದ ಆನಂದ್, ಚಂದ್ರಶೇಖರ್, ಸ್ವಾಮಿ, ಶಂಕರ್, ಸುನೀಲ್, ಮಂಜು, ಶಿವರಾಂ, ಸಿದ್ದೇಗೌಡ, ಮಂಜೇಶ್, ಹೆಗ್ಗಡೆ, ರಾಮಕೃಷ್ಣಯ್ಯ, ರಾಜಶೇಖರ್ ಮತ್ತಿತರರು ಇದ್ದರು.
ವರದಿ : ಗಿರೀಶ್ ರಾಜ್, ಮಂಡ್ಯ
ಡಯಾಲಿಸಿಸ್ ರೋಗಿಗಳಿಗೆ ಬಿಗ್ ಶಾಕ್: ರಾಜ್ಯ ಸರ್ಕಾರದಿಂದ ಇನ್ ಹೌಸ್ ಮಾದರಿಯ ಕೇಂದ್ರಗಳ ಡಯಾಲಿಸಿಸ್ ಸೈಕಲ್ ದರ ಹೆಚ್ಚಳ








